






ಸುಳ್ಯ: ತಾಲೂಕು ಕ್ರೀಡಾಂಗಣದ ಪೆವಿಲಿಯನ್ ನಿರ್ಮಾಣಕ್ಕೆ 2026–27ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಅಗತ್ಯ ಅನುದಾನ ಮೀಸಲಿರಿಸುವಂತೆ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ ಅವರು ಮನವಿ ಸಲ್ಲಿಸಿದ್ದಾರೆ.



ಬೆಂಗಳೂರಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕರಾದ ಜಿತೇಂದ್ರ ಶೆಟ್ಟಿಯನ್ನು ಭೇಟಿ ಮಾಡಿದ ಅವರು, ಸುಳ್ಯ ನಗರ ವ್ಯಾಪ್ತಿಯ ಶಾಂತಿನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕ್ರೀಡಾಂಗಣ ಕಾಮಗಾರಿ ಅನುದಾನದ ಕೊರತೆಯಿಂದ ಅಪೂರ್ಣವಾಗಿರುವುದನ್ನು ಗಮನಕ್ಕೆ ತಂದರು. ಪೆವಿಲಿಯನ್ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರಸ್ತುತ ಸಾಲಿನ ಕ್ರಿಯಾಯೋಜನೆಯಲ್ಲಿ ಹಣ ಮೀಸಲಿಡುವಂತೆ ಅವರು ಒತ್ತಾಯಿಸಿದರು.



ಮನವಿಗೆ ತಕ್ಷಣ ಸ್ಪಂದಿಸಿದ ಜಂಟಿ ನಿರ್ದೇಶಕರು ಸಂಬಂಧಪಟ್ಟ ಇಂಜಿನಿಯರ್ರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು ಎಂದು ತಿಳಿದುಬಂದಿದೆ.
ಇದೇ ವೇಳೆ ಸುಳ್ಯ ತಾಲೂಕಿನ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಹೈ ಜಂಪ್ ಬೆಡ್ ಸೇರಿದಂತೆ ಅಗತ್ಯ ಕ್ರೀಡಾ ಪರಿಕರಗಳನ್ನು ಒದಗಿಸುವುದು ಹಾಗೂ ಕ್ರೀಡಾ ಹಾಸ್ಟೆಲ್ನಲ್ಲಿ ಸುಳ್ಯದ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸುವಂತೆ ಕೂಡ ಮನವಿ ಸಲ್ಲಿಸಲಾಯಿತು.









