






ಪುತ್ತೂರು: ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ಕುಲಗದ್ದೆಯಲ್ಲಿ ಅನಾದಿ ಕಾಲದಿಂದಲೂ ದೈವಿಕ ಸಾನಿಧ್ಯವಿದ್ದು, ಕಾಲಾಂತರದಲ್ಲಿ ಭೂಗರ್ಭ ಸೇರಿದ್ದ ಶ್ರೀ ಉಮಾಮಹೇಶ್ವರ ಕ್ಷೇತ್ರ ಇದೀಗ ಪುನರ್ ನಿರ್ಮಾಣಗೊಳ್ಳುತ್ತಿದೆ. ಸುಮಾರು 9.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ದೇವಾಲಯದ ಶಿಲಾನ್ಯಾಸ ಕಾರ್ಯಕ್ರಮ ಏ.13ರಂದು ಬೆಳಿಗ್ಗೆ ವಿಜೃಂಭಣೆಯಿಂದ ನಡೆಯಲಿದೆ.



ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳ ಶುಭಾಶೀರ್ವಾದದೊಂದಿಗೆ, ವರ್ಮುಡಿ ವೇದಮೂರ್ತಿ ಗೋಪಾಲಕೃಷ್ಣ ಭಟ್ ತಂತ್ರಿಯವರ ಪೌರೋಹಿತ್ಯದಲ್ಲಿ ಶ್ರೀ ಉಮಾಮಹೇಶ್ವರ ದೇವಾಲಯದ ಶಿಲಾನ್ಯಾಸ ಕಾರ್ಯಕ್ರಮ ಜರುಗಲಿದೆ.




ಗಣ್ಯರ ಉಪಸ್ಥಿತಿ:
ಏ.13ರಂದು ಬೆಳಿಗ್ಗೆ 9ಗಂಟೆಗೆ ಶಿಲಾನ್ಯಾಸ ನೆರವೇರಲಿದ್ದು 10:30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಶ್ರೀ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಕಮಲಾದೇವಿ ಪ್ರಸಾದ ಅಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಮುಂಬೈಯ ಉದ್ಯಮಿ ಬಾಲಕೃಷ್ಣ ರೈ ತಿಪ್ಪಕೋಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕ್ಷೇತ್ರದ ಇತಿಹಾಸ
ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡುಬಂದಂತೆ, ಈ ಕ್ಷೇತ್ರವು ಪ್ರಾಚೀನ ಕಾಲದಲ್ಲಿ ಅತ್ಯಂತ ಶಕ್ತಿಶಾಲಿಯಾಗಿದ್ದು, ಯುದ್ಧದ ಸಂದರ್ಭದಲ್ಲಿ ರಕ್ಷಣೆಗಾಗಿ ಕಪ್ಪುಶಿಲೆಯಲ್ಲಿ ಲಿಂಗರೂಪಿ ಉಮಾಮಹೇಶ್ವರನನ್ನು ಆರಾಧಿಸಲಾಗುತ್ತಿತ್ತು. ನಂತರದ ದಿನಗಳಲ್ಲಿ ಪ್ರವಾಹದಿಂದಾಗಿ ಈ ಸಾನಿಧ್ಯವು ಮರೆಯಾಗಿತ್ತು. ಇದೀಗ ಗ್ರಾಮಸ್ಥರು ಮತ್ತು ಭಕ್ತಾದಿಗಳ ಸಹಕಾರದೊಂದಿಗೆ ಗರ್ಭಗುಡಿ, ತೀರ್ಥಮಂಟಪ ಹಾಗೂ ಪರಿವಾರ ದೈವಗಳ ಗುಡಿಗಳನ್ನೊಳಗೊಂಡ ಭವ್ಯ ದೇಗುಲ ತಲೆಯೆತ್ತಲಿದೆ.
ದೇವಾಲಯದ ಪುನರ್ ನಿರ್ಮಾಣ ಕಾರ್ಯಕ್ಕೆ ಅಂದಾಜು ರೂಪಾಯಿ 9.5 ಕೋಟಿ ವೆಚ್ಚವಾಗಲಿದೆ. ಶಿಲಾನ್ಯಾಸ ಕಾರ್ಯಕ್ರಮ ನಾಳೆ ನೆರವೇರಲಿದೆ. ಬಿಳಿಯೂರಿನ 5 ಗ್ರಾಮಕ್ಕೆ ಸಂಬಂಧಪಟ್ಟ ಭಕ್ತಾಭಿಮಾನಿಗಳೆಲ್ಲರ ಮತ್ತು ವೀರಮಂಗಲ ಕೈಮಾರು ಬಂಜನ್ ಕುಟುಂಬಸ್ಥರ ಸಹಕಾರದೊಡನೆ, ನೇತ್ರಾವತಿ ನದಿಯ ತಟದಲ್ಲಿರುವ ಕುಲಗದ್ದೆಯಲ್ಲಿ ಭವ್ಯ ದೇಗುಲ ನಿರ್ಮಾಣಗೊಳ್ಳಲಿದೆ.












