ಪೆರ್ನಾಜೆ ಶ್ರೀ ಸೀತಾರಾಘವ ಪ್ರೌಢಶಾಲೆಯಲ್ಲಿ ವಿಶ್ವಕಲಾ ದಿನಾಚರಣೆ

0


ಮಕ್ಕಳಿಗೆ ಹೊಸ ಕಲ್ಪನೆಯೊಂದಿಗೆ ಕ್ರಿಯಾತ್ಮಕ ಮತ್ತು ಸೃಜನಶೀಲತೆ ಕಲಿಸಿ- ಸೋಮಾಯಾಜಿ

ಪೆರ್ನಾಜೆ : ಎಲ್ಲ ಪಾಠಗಳ ತಳಹದಿಯೇ ಚಿತ್ರಕಲೆಯಾಗಿದ್ದು, ಇದರ ಕೀರ್ತಿಯನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದು ಜಗತ್ತು ಕಂಡು ಶ್ರೇಷ್ಠ ಚಿತ್ರ ಕಲಾವಿದ ಮೋನಾಲಿಸಾಳಿಗೆ ನಿಗೂಢ ನಗು ಕೊಟ್ಟ ಲಿಯೋನಾರ್ಡೋ ಡಾ ವಿಂಚಿ. ಹೀಗಾಗಿ ಆತನ ಹುಟ್ಟಿದ ದಿನವಾದ ಏಪ್ರಿಲ್ 15ನ್ನು ವಿಶ್ವ ಕಲಾ ದಿನವೆಂದು ಆಚರಿಸಲಾಗುತ್ತಿದೆ ಎಂದು ಚಿತ್ರ ಕಲಾವಿದ ಗಣೇಶ ಸೋಮಾಯಾಜಿ ಹೇಳಿದರು.


ಪುತ್ತೂರು ತಾಲೂಕಿನ ಪೆರ್ನಾಜೆ ಶ್ರೀಸೀತಾರಾಘವ ಪ್ರೌಢಶಾಲಾ ಸಭಾಂಗಣದಲ್ಲಿ ಎ.15ರಂದು ಕರ್ನಾಟಕ ಇಂಟರ್‌ನ್ಯಾಷನಲ್ ಆರ್ಟಿಸ್ಟ್ ವಿಲೇಜ್ ಚಾರಿಟೇಬಲ್ ಟ್ರಸ್ಟ್, ಸ್ವರೂಪ ಶಿಕ್ಷಣ ಅಧ್ಯಯನ ಕೇಂದ್ರ ಮಂಗಳೂರು, ಭಾರತ ಕೃಷಿ ಅಭಿವೃದ್ಧಿ ಸಂಘ ವಿಟ್ಲ ಸಹಯೋಗದಲ್ಲಿ ಆಯೋಜಿಸಲಾದ ವಿಶ್ವಕಲಾ ದಿನಾಚರಣೆ -2026 ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.


ಎರಡು ನೂರು ಪುಟಗಳ ಪುಸ್ತಕ ಓದಲು ಸಾಕಷ್ಟು ಸಮಯ ಬೇಕಾಗುತ್ತದೆ. ಒಂದು ಸಿನಿಮಾ ವೀಕ್ಷಿಸಲು ಕೂಡ ಸಮಯ ಅಗತ್ಯವಾಗಿ ಬೇಕೇ ಬೇಕು. ಆದರೆ ಒಂದು ಶ್ರೇಷ್ಠ ಚಿತ್ರವನ್ನು ಕಡಿಮೆ ಸಮಯದಲ್ಲಿ ವೀಕ್ಷಿಸಿ, ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬುದು ನಿತ್ಯಸತ್ಯ ಎಂದರು. ಲಿಯೊನಾರ್ಡೊ ಡಾ ವಿಂಚಿ ಕೇವಲ ಚಿತ್ರಕಾರ ಮಾತ್ರವಲ್ಲ ಆತನೊಬ್ಬ ವಿಜ್ಞಾನಿ, ಇಂಜಿನಿಯರ್, ಅಂಗರಚನಾ ಶಾಸ್ತ್ರಜ್ಞ, ಸಂಗೀತಗಾರ, ತತ್ವಜ್ಞಾನಿ. ಹೀಗೆ ಜಗತ್ತಿನ ಬಹುಮುಖ ಪ್ರತಿಭೆಯ ಸಾಕಾರಮೂರ್ತಿ ಎಂದರು.


ಗಣಪತಿ ಚಿತ್ರವನ್ನು ಬಿಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಚಿತ್ರಕಲಾವಿದ ಬಿ.ಎಸ್.ದೇಸಾಯಿ ಮಾತನಾಡಿ, ಲಿಯೋನಾರ್ಡೋ ಡಾ.ವಿಂಚಿ ಅವರು ನಮ್ಮ ಚಿತ್ರಕಲಾವಿದರಿಗೆ ಹಿರೋ. ಆತನಲ್ಲಿ ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು. ಸಮಾಜದಲ್ಲಿ ಹೆಣ್ಣೇ ಸುಂದರ ಎಂದು ನಾವು ಭಾವಿಸಿದ್ದೇವೆ. ಆದರೆ ಪ್ರಕೃತಿಯಲ್ಲಿ ಕಾಣುವ ಪಕ್ಷಿ ಪ್ರಾಣಿಗಳಲ್ಲಿ ಗಂಡೇ ಸುಂದರ. ಇವುಗಳಿಗೂ ಕೂಡ ಮಾತನಾಡುವ ಶಕ್ತಿಯನ್ನು ಹೊಂದಿವೆ. ಕೇಳುವ ಕಿವಿಗಳಿರಬೇಕು. ಅದು ಚಿತ್ರಕಲೆಯಿಂದ ಮಾತ್ರ ಸಾಧ್ಯ. ಅವರ ಪ್ರಕಾರ ಕಲಾವಿದ ಅಂದ್ರೆ ಕೇವಲ ಬಣ್ಣ ಬಳಿಯೋನಲ್ಲ, ಜಗತ್ತನ್ನೇ ಬದಲಾಯಿಸೋ ಶಕ್ತಿ ಇರೋನು ಅಂತ ತೋರಿಸಿಕೊಟ್ಟರು ಎಂದು ತಿಳಿಸಿ ಗೋಪಾಡ್ಕರ್ ಅವರು 40 ವರ್ಷಗಳ ಸಂಶೋಧನೆಯ ಫಲ ಇನ್ನೂ ಕೆಲವೇ ದಿನಗಳಲ್ಲಿ ನಾವು ಅನುಭವಿಸುತ್ತೇವೆ ಎಂದು ತಿಳಿಸಿದರು.


ದಕ್ಷಿಣ ಕನ್ನಡ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಮಂಚಿ ಮಾತನಾಡಿ, ಜಗತ್ಪçಸಿದ್ಧ ಚಿತ್ರಕಲಾವಿದ ಲಿಯೋನಾರ್ಡೋ ಡಾ ವಿಂಚಿ ವಿಶೇಷವಾಗಿ ಕತ್ತರಿ, ಸೈಕಲ್ ಡಿಸೈನ್, ಹೆಲಿಕಾಪ್ಟರ್, ಪ್ಯಾರಾಚೂಟ್, ವಿಮಾನದ ಡಿಸೈನ್ ಬಿಡಿಸಿದ್ದು, ಯುದ್ಧ ಟ್ಯಾಂಕ್, ಮೆಷಿನ್ ಗನ್, ದೊಡ್ಡ ಫಿರಂಗಿ ಚಿತ್ರ, ಪ್ರಾಣಿ ಪಕ್ಷಿಗಳ ಎಲುಬುಗಳ ಆಕಾರ, ರಾತ್ರಿ ಸ್ಮಶಾನಕ್ಕೆ ಹೋಗಿ ಶವ ಪರೀಕ್ಷೆ ಮಾಡಿ ಮನುಷ್ಯನ ಹೃದಯ, ಮೆದುಳು, ಗರ್ಭದಲ್ಲಿರೋ ಮಗು – ಎಲ್ಲದರ ಚಿತ್ರ ಬಿಡಿಸಿ ವೈದ್ಯಕೀಯ ಜಗತ್ತಿಗೆ ದೊಡ್ಡ ಕೊಡುಗೆ ನೀಡಿದ ಮಹಾಸಾಧಕ ಎಂದು ತಿಳಿಸಿದರು.


ಕೃಷಿ ಭಾರತ ಅಭಿವೃದ್ಧಿ ಸಂಘ ವಿಟ್ಲ ಉಪಾಧ್ಯಕ್ಷ ಪ್ರಸಾದ ಶೆಟ್ಟಿ ಮಾತನಾಡಿ, ಶಿಕ್ಷಣ ಮತ್ತು ಕೃಷಿ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ವಿದ್ಯಾರ್ಥಿಗಳು ನಮ್ಮ ಸಂಘವು ಉಚಿತ ವಸತಿ ಸಹಿತ ಶಿಕ್ಷಣ ನೀಡಲು ಮುಂದಾಗಿದೆ. ಇದರ ಅನುಭವದೊಂದಿಗೆ ಸದುಪಯೋಗ ಪಡೆದುಕೊಳ್ಳಬೇಕೆಂದರು.


ಸಂಘದ ಖಜಾಂಚಿ ಸುಮಂಗಲ ಗೋಪಾಡ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ಸಂಚಾಲಕ ಎ. ಜಯಪ್ರಕಾಶ, ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಶಿವಾನಂದ ಉಪಸ್ಥಿತರಿದ್ದರು. ವಿಶ್ವಕಲಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಅಶ್ವಿತಾ, ಆರ್ಯ ಪಿ., ಜರ್ನಾಧನ ಎ., ಚಿಂತನ ಬಿ.ಎಚ್, ಶಿವಕವಿ ಪರಮೇಶ್ವರ, ಅಕ್ಷರ ಎಚ್.ಎಸ್, ತನುಕೃಷ್ಣ ಬಿ.ಎಚ್, ವೈಧವ ಎನ್, ವೇದಿಕಾ, ಶ್ರೀವರ್ಷ, ನವ್ಯಶ್ರೀ ಎ.ಪಿ, ಡಾ|| ದೀಪಿಕಾ ವೆಂಕಟೇಶ ರವರುಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸೀತಾರಾಘವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಿ.ಜಿ.ಆವಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವರೂಪ ಅಧ್ಯಯನ ಕೇಂದ್ರದ ಉತ್ತರ ಕರ್ನಾಟಕ ವಿಭಾಗದ ಶಿಕ್ಷಕಿ ಆರ್.ಶಿವಮ್ಮ ಶರಣಬಸವ ಪ್ರಾರ್ಥಿಸಿದರು. ಕಲಿಕಾರ್ಥಿ ಬಸವರಾಜ ಬ್ಯಾಗವಾಟ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here