ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ “ಸಾಮರಸ್ಯದ ನೆಲೆಗಳು” ಪುಸ್ತಕ ಮಾಲಿಕೆಯಡಿ ಕೃತಿ ಬಿಡುಗಡೆ ಸಮಾರಂಭ

0

ಪುತ್ತೂರಿನ ಲೇಖಕಿ ಜೆಸ್ಸಿ ಪಿ.ವಿರವರ ಕೃತಿ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ

ಪುತ್ತೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ “ಸಾಮರಸ್ಯದ ನೆಲೆಗಳು” ಪುಸ್ತಕ ಮಾಲಿಕೆಯಡಿ ಕೃತಿ ಬಿಡುಗಡೆ ಸಮಾರಂಭವು ಇತ್ತೀಚೆಗೆ ಬೆಂಗಳೂರಿನ ಮಿನಿ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಜರಗಿದ್ದು ಈ ಸಮಾರಂಭದಲ್ಲಿ ಪುತ್ತೂರು ತಾಲೂಕಿನ ಲೇಖಕಿ ಶ್ರೀಮತಿ ಜೆಸ್ಸಿ ಪಿ.ವಿರವರು ರಚಿಸಿದ “ದಕ್ಷಿಣ ಕನ್ನಡ ಜಿಲ್ಲೆಯ ಭಾಷಾ ಸಾಮರಸ್ಯ ಮತ್ತು ಸಾಂಸ್ಕೃತಿಕ ವೈವಿಧ್ಯ” ಕೃತಿಯನ್ನು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯರವರು ಲೋಕಾರ್ಪಣೆ ಮಾಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರ ಅರ್ಥಪೂರ್ಣ ಹಾಗೂ ದೀರ್ಘದೃಷ್ಟಿಯ ಯೋಜನೆಯಾದ ‘ಸಾಮರಸ್ಯದ ನೆಲೆಗಳು’  ಪುಸ್ತಕ ಮಾಲಿಕೆಯ ಯೋಜನೆ ಅಡಿಯಲ್ಲಿ 41 ಕೃತಿಗಳು ಬಿಡುಗಡೆಯಾಗಿದ್ದು ಅವುಗಳಲ್ಲಿ,ನಮ್ಮ ನಾಡಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಾಮರಸ್ಯದ ಮೌಲ್ಯಗಳನ್ನು ಮಕ್ಕಳಿಗೆ ಸುಂದರವಾಗಿ ಪರಿಚಯಿಸುವ ಅಪೂರ್ವ ಪ್ರಯತ್ನವಾಗಿದೆ. ವಿಶೇಷವಾಗಿ ಈ ಪುಸ್ತಕ ಮಾಲಿಕೆಯಲ್ಲಿ ಪುತ್ತೂರು ತಾಲೂಕಿನ ಹೆಮ್ಮೆಯ ಲೇಖಕಿ ಶ್ರೀಮತಿ ಜೆಸ್ಸಿ ಪಿ.ವಿ. ಅವರು ರಚಿಸಿರುವ ‘ದಕ್ಷಿಣ ಕನ್ನಡ ಜಿಲ್ಲೆಯ ಭಾಷಾ ಸಾಮರಸ್ಯ ಮತ್ತು ಸಾಂಸ್ಕೃತಿಕ ವೈವಿಧ್ಯ’ ಎಂಬ ಕೃತಿ ಈ ಮಾಲಿಕೆಯಲ್ಲಿ ಸ್ಥಾನ ಪಡೆದಿರುವುದು ನಮ್ಮ ಪ್ರದೇಶದ ಸಾಹಿತ್ಯಿಕ ಸಾಮರ್ಥ್ಯಕ್ಕೆ ಪ್ರತೀಕವಾಗಿದೆ.

ಶ್ರೀಮತಿ ಜೆಸ್ಸಿ ಪಿವಿ ಅವರು ಪ್ರಸ್ತುತ ಕೆ.ಪಿ.ಎಸ್ ಕೆಯ್ಯೂರು  ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು, ನ್ಯಾನೋ ಕಥೆಗಳು, ಮಕ್ಕಳ ಕವನಗಳು, ಸಣ್ಣಕಥೆಗಳು, ಕವನಗಳು, ನುಡಿಚಿತ್ರಗಳು ಹಾಗೂ ಲೇಖನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿರುವ ಇವರು, ಉದಯವಾಣಿ, ಪ್ರಜಾವಾಣಿ, ವಿಜಯಕರ್ನಾಟಕ, ವಿಜಯವಾಣಿ, ಸಂಯುಕ್ತ ಕರ್ನಾಟಕ, ವಾರ್ತಾಭಾರತಿ ಸೇರಿದಂತೆ ಅನೇಕ ಪ್ರಸಿದ್ಧ ಪತ್ರಿಕೆಗಳಲ್ಲಿ ತಮ್ಮ ಬರಹಗಳನ್ನು ಪ್ರಕಟಿಸಿ ಓದುಗರ ಮನಗೆದ್ದಿದ್ದಾರೆ. ವಿವಿಧ ಆನ್‌ಲೈನ್ ಮಾಧ್ಯಮಗಳಲ್ಲಿಯೂ ಇವರ ಸಾಹಿತ್ಯ ಕಿರಣ ಹರಡಿದೆ. ಮಂಗಳೂರು ಆಕಾಶವಾಣಿಯಲ್ಲಿ “ಸ್ವಾತಂತ್ರ್ಯ ಪಥ” ಮತ್ತು ಗಾಂಧಿ ಚಿಂತನೆ ಕುರಿತಂತೆ ನೀಡಿದ ಭಾಷಣಗಳು ಇವರ ಚಿಂತನಾ ವೈಶಾಲ್ಯವನ್ನು ತೋರಿಸುತ್ತವೆ. ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ, ಸಾಹಿತ್ಯಿಕ ಚಟುವಟಿಕೆಗಳನ್ನು ಸಂಘಟಿಸಿ, “ಕಡಲೂರಿನ ಲೇಖಕರು” ಬಳಗದ ಮೂಲಕ ಸಾಹಿತ್ಯ ಸೇವೆಯನ್ನು ಮುಂದುವರಿಸುತ್ತಿರುವುದು ಅಭಿನಂದನೀಯ.

ಆರು ಕೃತಿಗಳು
ಪುಟ್ಟ ಮುತ್ತುಗಳ ಚಿಪ್ಪು, ಚಂದಮಾಮ ಬಾರೋ, ಅಡುಗೆ ಮನೆ – ಆಫೀಸುಗಳ ನಡುವೆ, ಯಾಂತ್ರಿಕ ಲೋಕದಲ್ಲಿ ಅಂತಃಕರಣದ ಮೊಗ್ಗುಗಳು, ಚಿಮಣಿ ದೀಪದ ಸ್ವಗತ, ಹಣತೆ ಸಾಲು — ಇವರ ಸಾಹಿತ್ಯ ವೈವಿಧ್ಯವನ್ನು ಪ್ರತಿಬಿಂಬಿಸುತ್ತವೆ.

ಸಮಾರಂಭದಲ್ಲಿಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು. ಲೇಖಕಿ ಶ್ರೀಮತಿ ಜೆಸ್ಸಿ ಪಿ.ವಿರವರು ಪತಿ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಆಡಳಿತ ಸಿಬ್ಬಂದಿ ಅರುಣ್ ರೆಬೆಲ್ಲೋ, ಈರ್ವರು ಪುತ್ರಿಯರು, ಓರ್ವ ಪುತ್ರಿಯೊಂದಿಗೆ ದರ್ಬೆಯಲ್ಲಿ ವಾಸ್ತವ್ಯ ಹೊಂದಿದ್ದಾರೆ.

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಂತಹ ‘ಸಾಹಿತ್ಯದ ನಡೆಗೆ ನಡಿಗೆ ಗ್ರಾಮದ ಕಡೆಗೆ’ ಘೋಷವಾಕ್ಯದ ಯೋಜನೆ ‘ಗ್ರಾಮ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮದ ಯಶಸ್ಸಿಗೆ  ಶ್ರಮಿಸಿರುವ ಶ್ರೀಮತಿ ಜೆಸ್ಸಿ ಪಿ ವಿ ಅವರ ಈ ಸಾಧನೆ ಇನ್ನಷ್ಟು ಎತ್ತರಗಳಿಗೆ ಕೊಂಡೊಯ್ಯಲಿ, ನಿಮ್ಮ ಸಾಹಿತ್ಯ ಪಯಣ ಇನ್ನಷ್ಟು ಸಮೃದ್ಧವಾಗಲಿ. ಈ ಮಹತ್ತರ ಯೋಜನೆಯನ್ನು ರೂಪಿಸಿ ಯಶಸ್ವಿಯಾಗಿ ಮುನ್ನಡೆಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ  ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಪ್ರಧಾನ ಸಂಪಾದಕರಾದ ಪುತ್ತೂರಿನ ಬೊಳುವಾರು ಮಹಮದ್ ಕುಂಞಿ ಹಾಗೂ ದಕ್ಷಿಣ ಕನ್ನಡ, ಹಾಸನ, ಉಡುಪಿ, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗೆ  ಸಂಪಾದಕರಾಗಿ ಕಾರ್ಯ ನಿರ್ವಹಿಸಿ ಪುತ್ತೂರು ತಾಲೂಕಿನ ಸಾಹಿತಿಯೊಬ್ಬರಿಗೆ ಅವಕಾಶ ಮಾಡಿಕೊಟ್ಟ ಹಿರಿಯ ಸಾಹಿತಿಗಳಾದ ಅರವಿಂದ ಚೊಕ್ಕಾಡಿಯವರಿಗೆ ಗೌರವ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ.
-ಪುತ್ತೂರು ಉಮೇಶ್ ನಾಯಕ್ 
ಅಧ್ಯಕ್ಷರು, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು

LEAVE A REPLY

Please enter your comment!
Please enter your name here