ಹಾಸ್ಯಭರಿತ 90 ಎಂಎಲ್- ಕುಲ್ಲುಗನ ಚಿತ್ರ ತಂಡದಿಂದ ಪುತ್ತೂರಿನಲ್ಲಿ ಭರ್ಜರಿ ಪ್ರಚಾರ

0

ಪುತ್ತೂರು: 90 ಎಂಎಲ್- ಕುಲ್ಲುಗನ ಎಂಬ ತುಳು ಹಾಸ್ಯಮಯ ಚಲನಚಿತ್ರ ಏ.10ರಂದು ಕರಾವಳಿ ಭಾಗದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇದರ ಭಾಗವಾಗಿ ಚಿತ್ರತಂಡ ಪ್ರಚಾರ ಕಾರ್ಯವನ್ನು ಹಮ್ಮಿಕೊಂಡಿದೆ. ಏ.20ರಂದು ಪುತ್ತೂರಿನಲ್ಲಿ ಚಿತ್ರ ತಂಡ ಭರ್ಜರಿ ಪ್ರಚಾರ ನಡೆಸಿದೆ.


ನೆಹರುನಗರದಿಂದ ಪ್ರಾರಂಭವಾದ ಜಾಥಾಕ್ಕೆ ಯುವ ಉದ್ಯಮಿ ಸಹಜ್ ರೈ ಬಳಜ್ಜ, ಎನ್‌ಎಸ್‌ಯುಐ ಮುಖಂಡ ಫಾರೂಕ್ ಬಾಯಬೆ ಹಾಗೂ ಮಾಜಿ ಪುರಸಭಾ ಸದಸ್ಯ ಇಸಾಕ್ ಸಾಲ್ಮರ ಅವರು ಈಡುಗಾಯಿ ಹೊಡೆಯುವ ಮೂಲಕ ಚಾಲನೆ ನೀಡಿದರು. ನಗರದಿಂದ ಪುತ್ತೂರು ಕೇಂದ್ರ ಭಾಗದ ಮೂಲಕ ಸಾಗಿ ದರ್ಬೆವರೆಗೆ ಪ್ರಚಾರ ನಡೆಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಸಹಜ್ ರೈ ಅವರು ನಟ ವಿನೀತ್ ಕುಮಾರ್ ತುಳು ಸಿನೆಮಾ ರಂಗದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ರೋಶನ್ ಶೆಟ್ಟಿ ಕೂಡ ಚಿತ್ರಕ್ಕೆ ವಿಶೇಷ ಬಣ್ಣ ಹಚ್ಚಿದ್ದಾರೆ. ಕುಟುಂಬ ಸಮೇತವಾಗಿ ಕುಳಿತು ನೋಡಬಹುದಾದ ಉತ್ತಮ ಮನರಂಜನಾ ಚಿತ್ರ ಇದಾಗಿದೆ‌. ಎಲ್ಲರೂ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸಬೇಕು ಎಂದು ಮನವಿ ಮಾಡಿದರು. ಇಸಾಕ್ ಸಾಲ್ಮರ ಮಾತನಾಡಿ ಈ ಸಿನಿಮಾ ಪುತ್ತೂರಿನಲ್ಲಿಯೂ ಯಶಸ್ವಿಯಾಗಿ ಪ್ರದರ್ಶನಗೊಳ್ಳಲಿದೆ. ಸ್ಥಳೀಯರು ಚಿತ್ರಕ್ಕೆ ಉತ್ತಮ ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಫಾರೂಕ್ ಬಾಯಬೆ ಮಾತನಾಡಿ ಉತ್ತಮ ಸಂದೇಶವನ್ನು ಒಳಗೊಂಡಿರುವ ಈ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದು ಹಾರೈಸಿದರು.
ಫ್ರೆಂಡ್ಸ್ ಟೀಂನ ಗಗನ್ ಕರ್ಮಲ, ನವೀನ್ ರೈ, ಆಶಿಕ್, ಇಸ್ಮಾಯಿಲ್, ಚಿತ್ರತಂಡದ ಸಮತಾ ಅಮೀನ್, ವಿನೀತ್ ಕುಮಾರ್, ರೋಶನ್ ಶೆಟ್ಟಿ, ರಂಜಿತ್ ಸಿ. ಬಜಾಲ್, ಸಂಭಾಷಣೆಕಾರ ತುಳಸಿದಾಸ ಮಂಜೇಶ್ವರ, ನಿರ್ದೇಶನ ವಿಭಾಗದ ಜುಬೈರ್ ಸೇರಿದಂತೆ ಹಲವರು ಭಾಗವಹಿಸಿದ್ದರು.


ರಂಜಿತ್ ಸಿ. ಬಜಾಲ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಹಾಸ್ಯಭರಿತ ಕಥಾಹಂದರವನ್ನು ಹೊಂದಿದೆ. ಅಜಾಗರೂಕ ಹಾಗೂ ಮದ್ಯಾಸಕ್ತ ನಾಯಕನ ಪಾತ್ರವನ್ನು ಕೇಂದ್ರವಾಗಿರಿಸಿಕೊಂಡಿದೆ. ವಿನೀತ್ ಕುಮಾರ್, ರೋಶನ್ ಶೆಟ್ಟಿ, ದೀಪಕ್ ರೈ ಪಾಣಾಜೆ, ಉಮೇಶ್ ಮಿಜಾರ್, ರುಹಾನಿ ಶೆಟ್ಟಿ, ನವೀನ್ ಡಿ. ಪಡೀಲ್ ಮತ್ತು ಅರವಿಂದ್ ಬೋಳಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸೃಜನ್ ಕುಮಾರ್ ತೋನ್ಸೆ ಸಂಗೀತ ನಿರ್ದೇಶನ ನೀಡಿದ್ದಾರೆ.

LEAVE A REPLY

Please enter your comment!
Please enter your name here