ಇಂದು(ಏ.25)ಗೋಳಿತ್ತಟ್ಟು ಶಾಲಾ ಮಕ್ಕಳು ಬರೆದ ’ ಮಾತನಾಡುವ ಪುಸ್ತಕ ’ ಕಥೆಗಳ ಗೊಂಚಲು ಕಥಾಸಂಕಲನ ಬಿಡುಗಡೆ

0

ನೆಲ್ಯಾಡಿ: ಶತಮಾನೋತ್ಸವ ಸಂಭ್ರಮದಲ್ಲಿರುವ ಗೋಳಿತ್ತಟ್ಟು ಸರಕಾರಿ ಉ.ಹಿ.ಪ್ರಾ.ಶಾಲೆಯ 8ನೇ ತರಗತಿಯ ನಾಲ್ವರು ವಿದ್ಯಾರ್ಥಿನಿಯರು ಬರೆದ ಕಥೆಗಳ ಗೊಂಚಲು ಕಥಾ ಸಂಕಲನ ’ ಮಾತನಾಡುವ ಪುಸ್ತಕ ’ ಏ.೨೫ರಂದು ನಡೆಯುವ ಶಾಲಾ ಶತಮಾನೋತ್ಸವ ಸಮಾರಂಭದಲ್ಲಿ ಬಿಡುಗಡೆಗೊಳ್ಳಲಿದೆ.


ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಅವರು ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಬರೆದ ಸುಮಾರು 60 ಕಥೆಗಳನ್ನು ಸಂಪಾದಿಸಿ ಅದಕ್ಕೆ ಪುಸ್ತಕದ ರೂಪ ಕೊಟ್ಟು ತಮ್ಮ ಅಕ್ಷಿ ಪ್ರಕಾಶನದ ಮೂಲಕ ಪ್ರಕಟಿಸಿ ಶಾಲಾ ಶತಮಾನೋತ್ಸವ ಸಂಭ್ರಮದಲ್ಲಿ ಬಿಡುಗಡೆ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. 8ನೇ ತರಗತಿ ವಿದ್ಯಾರ್ಥಿನಿಯರಾದ ಶ್ರೀರಕ್ಷಾ ಕೆ.ಜಿ. ಅವರು ಬರೆದ ಮೊಲವಾದ ರಾಜಕುಮಾರಿ, ಸೊಳ್ಳೆಗಳ ಕಾಟ, ಆಕಾಶ ನೀಲಿಯೋ ಬಿಳಿಯೋ, ಕಪ್ಪು ಗಿಳಿ ಮುಂತಾದ 14 ಕಥೆಗಳು, ಫಾತಿಮಾತ್ ಆಶುರಾ ಅವರು ಬರೆದ ಭಯವೇ ಭೂತ, ಪ್ರಕೃತಿಯ ಪಾಠ, ಮಾಂತ್ರಿಕ ಪೆನ್ಸಿಲ್, ಪುಸ್ತಕ ಪ್ರೇಮಿ ರಾಹುಲ್ ಮುಂತಾದ 14 ಕಥೆಗಳು, ಆರಾಧ್ಯ ಅವರು ಬರೆದ ಮ್ಯಾಜಿಕ್ ಗುಹೆ, ಮಾಂತ್ರಿಕ ಹಕ್ಕಿ, ಹಾರುವ ಮನೆ, ಮಾಯಾ ಕನ್ನಡಿ ಮುಂತಾದ ೧೩ ಕಥೆಗಳು ಹಾಗೂ ಚಿಂತನ ಅವರು ಬರೆದಿರುವ ಸುರೇಶ ಮತ್ತು ಕಮಲ, ಮ್ಯಾಜಿಕ್ ಟೈಲರ್ ಮೆಷಿನ್, ಚಿನ್ನದ ಶಾಲೆ ಮುಂತಾದ 11 ಕಥೆಗಳು ಈ ಸಂಕಲನದಲ್ಲಿ ಒಳಗೊಂಡಿದೆ. ಹೀಗೆ ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಬರೆದ ಸುಮಾರು ೫೨ ಕಥೆಗಳು ಪುಸ್ತಕ ರೂಪವನ್ನು ಪಡೆದು ’ಮಾತನಾಡುವ ಪುಸ್ತಕ’ ಎಂಬ ಹೆಸರಿನಲ್ಲಿ ಶಾಲಾ ಶತಮಾನೋತ್ಸವದ ಸಂಭ್ರಮದಲ್ಲಿ ಬಿಡುಗಡೆಗೊಳ್ಳುತ್ತಿದೆ.


ಈ ಸುಂದರ ಹೊತ್ತಿಗೆಗೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶಶಿಧರ್ ಜಿ.ಎಸ್., ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಸಿ. ಶುಭ ಹಾರೈಸಿದ್ದಾರೆ. ಹಿರಿಯ ಮಕ್ಕಳ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಅವರು ಬೆನ್ನುಡಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮೇಶ್ ಉಳಯ ಅವರು ತನ್ನ ಮೊದಲ ಓದಿನ ಅನುಭವ ಹಂಚಿಕೊಂಡಿದ್ದಾರೆ. ಕೊಂಬೆಟ್ಟು ಪ್ರೌಢಶಾಲಾ ಚಿತ್ರಕಲಾ ಶಿಕ್ಷಕ ಜಗನ್ನಾಥ ಇವರ ಮುಖಪುಟ ವಿನ್ಯಾಸ, ಬಾಲಾಜಿ ಪ್ರಿಂಟರ್ಸ್‌ನ ನಿರ್ಮಲ ಇವರ ಪುಟ ವಿನ್ಯಾಸ ಮಾಡಿದ್ದು, ಶ್ರೀಸ್ಕಂದ ಪ್ರಿಂಟರ್ಸ್ ಮರಿಲ್ ಪುತ್ತೂರು ಇಲ್ಲಿ ಮುದ್ರಣಗೊಂಡಿದೆ. ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಅವರ ಪ್ರಯತ್ನದ ಈ ಕೃತಿ ಏ.೨೫ರಂದು ನಡೆಯುವ ಶಾಲಾ ಶತಮಾನೋತ್ಸವ ಸಂಭ್ರಮದಲ್ಲಿ ಬಿಡುಗಡೆಗೊಳ್ಳಲಿದೆ.

LEAVE A REPLY

Please enter your comment!
Please enter your name here