ಕದಿಕ್ಕಾರು ಶ್ರೀ ಚಂದ್ರನಾಥ ಸ್ವಾಮಿ ಬಸದಿ : ಎ.29ರಿಂದ ಮೇ.3ರವರೆಗೆ ಪುನರ್ ಪ್ರತಿಷ್ಠಾ ಮಹೋತ್ಸವ

0

ಉಪ್ಪಿನಂಗಡಿ: ಇಲ್ಲಿನ ಗಾಂಧೀಪಾರ್ಕ್ ಎಂಬಲ್ಲಿ ಹೆದ್ದಾರಿ ಪಾರ್ಶ್ವದಲ್ಲಿ ಪುನರ್ ನಿರ್ಮಿತ ಕದಿಕ್ಕಾರು ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಏಕಶಿಲಾ ಚತುರ್ಮುಖ ಮಾನಸ್ತಂಭೋಪರಿ ಶ್ರೀ ಜಿನಬಿಂಬಗಳ ಪಂಚಕಲ್ಯಾಣ ಹಾಗೂ ಧಾಮ ಸಂಪ್ರೋಕ್ಷಣಾಪೂರ್ವಕ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಪದ್ಮಾವತೀ ದೇವಿ ಬಿಂಬಗಳ ಪುನರ್ ಪ್ರತಿಷ್ಠಾ ಮಹೋತ್ಸವವು ಎ.29ರಿಂದ ಮೇ.3ರವರೆಗೆ ನಡೆಯಲಿದೆ ಎಂದು ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರು ಗುತ್ತು ತಿಳಿಸಿದರು.


ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಕಾರಣಕ್ಕೆ ಬಸದಿಯ ಹಳೆ ಕಟ್ಟಡವನ್ನು ತೆರವುಗೊಳಿಸಬೇಕಾಗಿ ಬಂದಿದ್ದು, ಬಸದಿಯ ಪುರೋಹಿತ ಮನೆತನದವರು ಸ್ಥಳದಾನ ಮಾಡಿಕೊಟ್ಟ ಭೂಮಿಯಲ್ಲಿ ನೂತನ ಬಸದಿಯನ್ನು ಪುನರ್ ನಿರ್ಮಿಸಲಾಗಿದೆ. ಅಂದಾಜು ಸುಮಾರು 1.5 ಕೋಟಿ ರೂ. ವೆಚ್ಚದ ಈ ಕಾಮಗಾರಿಯಲ್ಲಿ ಬಸದಿ, ಗೋಪುರ, ಆವರಣಗೋಡೆ , ಏಕಶಿಲಾ ಚತುರ್ಮುಖ ಮಾನಸ್ತಂಭ, ಬಾವಿಗಳನ್ನು ನಿರ್ಮಿಸಲಾಗಿದೆ. ಬಸದಿಯಲ್ಲಿ ಬಿಳಿ ಅಮೃತಶಿಲಾ ಕೆತ್ತನೆಗಳನ್ನು , ಜೈನ ಪರಂಪರೆಯ ಇತಿಹಾಸವನ್ನು ಸಾರುವ ಆಕರ್ಷಕ ಕೆತ್ತನೆಗಳನ್ನು ರಾಜಸ್ಥಾನದ ಶಿಲ್ಪಿಗಳಿಂದ ರಚಿಸಲಾಗಿದೆ.


ಬಸದಿಯ ಪುನರ್ ಪ್ರತಿಷ್ಠಾ ಮಹೋತ್ಸವದಲ್ಲಿ ಜೈನ ದಿಗಂಬರ ಪರಂಪರೆಯ ಪರಮಪೂಜ್ಯ 108 ಶ್ರೀ ವೀರಸಾಗರ ಮುನಿ ಮಹಾರಾಜರು ಭಾಗವಹಿಸಿ ಮಂಗಲ ಪ್ರವಚನವನ್ನು ನೀಡಲಿರುವರು. ಐದು ದಿನಗಳ ಕಾಲ ನಡೆಯಲಿರುವ ಪುನರ್ ಪ್ರತಿಷ್ಠಾ ಮಹೋತ್ಸವದಲ್ಲಿ ಜೈನ ಮಹಾ ಸ್ವಾಮೀಜಿಯವರಾದ ಅತಿಶಯ ಶ್ರೀಕ್ಷೇತ್ರ ಹೊಂಬುಜ ಇಲ್ಲಿನ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ತೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು, ಶ್ರೀಕ್ಷೇತ್ರ, ಕಂಬದಹಳ್ಳಿ ಇಲ್ಲಿನ ಪರಮಪೂಜ್ಯ ಸ್ವಸ್ತಿಶ್ತೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು, ಶ್ರೀಕ್ಷೇತ್ರ ಜೈನ ಮಠ ಕಾರ್ಕಳ ಇಲ್ಲಿನ ಪರಮಪೂಜ್ಯ ಜಗದ್ಗುರು ರಾಜಗುರು ಧ್ಯಾನಯೋಗಿ ಸ್ವಸ್ತಿಶ್ತೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ದಿಗಂಬರ ಜೈನ ಮಹಾಸಂಸ್ಥಾನ ಮಠ ಶ್ರೀ ಕ್ಷೇತ್ರ ಶ್ರವಣಬೆಳಗೊಳ ಇಲ್ಲಿನ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ತೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಯವರು, ಮೂಡಬಿದ್ರೆ ಶ್ರೀ ಜೈನ ಮಠದ ಪರಮಪೂಜ್ಯ ಭಾರತಭೂಷಣ ಸ್ವಸ್ತಿಶ್ರೀ ಭಟ್ಟರಕ ಡಾ| ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಯವರು, ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠ, ನರಸಿಂಹರಾಜಪುರ ಇಲ್ಲಿನ ಪರಮಪೂಜ್ಯ ಸ್ವಸ್ತಿಶ್ತೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಯವರುಗಳ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದ್ದು, ಧಾರ್ಮಿಕ ಸಭೆಯಲ್ಲಿ ಪೂಜ್ಯ ಸ್ವಾಮಿಜಿಗಳ ಜೊತೆ ಮಂತ್ರಿ, ಶಾಸಕರಾದಿಯಾಗಿ ಹಲವಾರು ಗಣ್ಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಂಚಕಲ್ಯಾಣ ಸಮಿತಿಯ ಅಧ್ಯಕ್ಷ ವಿಧ್ಯಾಧರ ಜೈನ್, ಸಮಿತಿಯ ಸದಸ್ಯರಾದ ಪ್ರಶಾಂತ್ ಜೈನ್ ಬಾರ್ಯ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here