






ನಾಳೆ(ಏ.27) ಭಕ್ತರ ಧರಣಿ
ದಬ್ಬಾಳಿಕೆ, ಅಧಿಕಾರ ದುರುಪಯೋಗ ಮಾಡಿಲ್ಲ- ಅಶೋಕ್ ರೈ ಸ್ಪಷ್ಟನೆ
ಪುತ್ತೂರು: ಇಲ್ಲಿನ ಮಹಿಳಾ ಪೊಲೀಸ್ ಠಾಣೆಯ ಮುಂಭಾಗದ ಹಳೆಯ ಕಟ್ಟಡವನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹಾಗೂ ಅವರ ಬೆಂಬಲಿಗರು ಕಟ್ಟಡದ ಜಮೀನಿನ ಮಾಲಕತ್ವದ ಬಗ್ಗೆ, ಸ್ವಾಧಿನತೆಯ ಬಗ್ಗೆ ಹಾಗೂ ಜಮೀನಿಗೆ ಸಂಬಂಧಿಸಿದ ಕೋರ‍್ಟ್ ಕೇಸ್‌ನ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಜೆಸಿಬಿ ಮೂಲಕ ಭಾಗಶ: ಕೆಡವಿದ್ದಾರೆ ಎಂದು ಕೇದಿಗೆ ಕುಟುಂಬಸ್ಥರಾದ ಡಾ.ಅರವಿಂದ ರಾವ್ ಕೇದಿಗೆ ಆರೋಪಿಸಿದ್ದಾರೆ.


ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 10 ಸಾವಿರ ಚದರ ಅಡಿಯಲ್ಲಿದ್ದ ಎರಡು ಮಹಡಿಯ ಕಟ್ಟಡ ಕೆಡವಿ ಹಾಕಲಾಗಿದೆ. ಮಧ್ಯರಾತ್ರಿ ಅಕ್ರಮವಾಗಿ ಪ್ರವೇಶಿಸಿ ಕಟ್ಟಡದಲ್ಲಿದ್ದ ಬೆಲೆಬಾಳುವ ಮರ, ಹಂಚುಗಳನ್ನು ನಿರ್ದಾಕ್ಷಿಣ್ಯವಾಗಿ ಧ್ವಂಸ ಮಾಡಲಾಗಿದೆ. ಕೋರ‍್ಟ್‌ನ ಅಧಿನದಲ್ಲಿರುವ ಜಾಗ ಅತಿಕ್ರಮಿಸಿ ಕಟ್ಟಡ ಧ್ವಂಸಗೊಳಿಸಿ ನ್ಯಾಯಾಂಗ ನಿಂದನೆ ಮಾಡಲಾಗಿದೆ. ನಮ್ಮ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಸಹ ದಾಖಲಾಗಿದೆ. ಕೋರ‍್ಟ್‌ನಿಂದ ಅಶೋಕ್‌ಕುಮಾರ್ ರೈ ಹಾಗೂ ಪಂಜಿಗುಡ್ಡೆ ಈಶ್ವರ ಭಟ್ ಅವರಿಗೆ ನೋಟಿಸ್ ಜಾರಿಯಾಗಿದೆ ಎಂದು ಡಾ.ಅರವಿಂದ ರಾವ್ ಹೇಳಿದರು.



ಕೇದಿಗೆ ಕುಟುಂಬಕ್ಕೆ ಸೇರಿದ 9.79 ಎಕ್ರೆ ಜಾಗದ ಪಾಲು ಪಟ್ಟಿಯ ಕೇಸ್ ಕೋರ‍್ಟ್‌ನಲ್ಲಿದೆ. ಈ ಜಮೀನನನ್ನು ಕೋರ‍್ಟ್ ಸುಪರ್ದಿಗೆ ತೆಗೆದುಕೊಂಡಿದೆ. ಈ ಜಮೀನನ್ನು ಕೋರ‍್ಟ್ ರಿಸೀವರ್ ಆಗಿರುವ ನನ್ನ ಸ್ವಾಧಿನಕ್ಕೆ ಬಿಟ್ಟುಕೊಟ್ಟಿದೆ. ನಾನು 2018ರಿಂದ ಈ ಜಾಗ ನೋಡಿಕೊಳ್ಳುತ್ತಿದ್ದೇನೆ ಎಂದ ಡಾ.ಅರವಿಂದ ರಾವ್ ಅವರು ಸದ್ರಿ ಜಮೀನಿನಲ್ಲಿರುವ ದೇವರ ಕಟ್ಟೆ 80 ವರ್ಷಗಳ ಹಿಂದೆ ನಮ್ಮ ಅಜ್ಜ ಕೇದಿಗೆ ಶಿವರಾವ್ ಕಟ್ಟಿಸಿದ್ದರು. ಆಗ ಅಲ್ಲಿ ಕಟ್ಟಡ, ಗದ್ದೆ ಇತ್ತು. ಇದರ ನಡುವೆ ಬಲ್ನಾಡು ಉಳ್ಳಾಲ್ತಿಯ ಭಂಡಾರ ಬರುತಿತ್ತು. 1946ರಲ್ಲಿ ಕಟ್ಟೆ ಕಟ್ಟಿ ಉಳ್ಳಾಲ್ತಿಗೆ ಮಲ್ಲಿಗೆ ನೀಡುವ ಸಂಪ್ರದಾಯ ಆರಂಭಿಸಿದ್ದು ಅದು ಈಗಾಲೂ ನಡೆಯುತ್ತಿದೆ. ಇದು ಕೇದಿಗೆ ಮನೆತನಕ್ಕೆ ಸೇರಿದ ಆಸ್ತಿ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ ಅಕ್ರಮ ಪ್ರವೇಶಿಸಿ ದಬ್ಬಾಳಿಕೆ ಮಾಡಿ ಕಟ್ಟಡವನ್ನು ರಾತ್ರೋ ರಾತ್ರಿ ತೆರವುಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಕೇದಿಗೆ ಕುಟುಂಬಸ್ಥರಾದ ಭವಾನಿಶಂಕರ್, ಸುಮಿತ್, ಧಿರಜ್, ಮನೋಜ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನಾಳೆ(ಏ.27) ಪುತ್ತೂರು ಪೊಲೀಸ್ ಠಾಣೆ ಬಳಿ ಮಹಾಲಿಂಗೇಶ್ವರನ ಭಕ್ತರ ಧರಣಿ
ಮಹಾಲಿಂಗೇಶ್ವರ ದೇವರ ಭಕ್ತಾದಿಗಳ ಹಿತದೃಷ್ಟಿಯಿಂದ ಮಾಡಲಾದ ಕಾರ್ಯಕ್ಕೆ ಸಂಬಂಧಿಸಿ ಶಾಸಕ ಅಶೋಕ್ ಕುಮಾರ್ ರೈ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ಟರ ವಿರುದ್ಧ ದೂರು ನೀಡಿರುವವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಮಹಾಲಿಂಗೇಶ್ವರನ ಭಕ್ತಾದಿಗಳಿಂದ ಏ.27ರಂದು ಸಂಜೆ 5.30ಕ್ಕೆ ಪುತ್ತೂರು ಪೊಲೀಸ್ ಠಾಣೆ ಬಳಿ ಧರಣಿ ನಡೆಯಲಿದೆ ಎಂದು ತಿಳಿದು ಬಂದಿದೆ.
ದಬ್ಬಾಳಿಕೆ, ಅಧಿಕಾರ ದುರುಪಯೋಗ ಮಾಡಿಲ್ಲ- ಅಶೋಕ್ ರೈ ಸ್ಪಷ್ಟನೆ
ಮಹಿಳಾ ಪೊಲೀಸ್ ಠಾಣೆ ಬಳಿಯ ಹಳೆಯ ಕಟ್ಟಡ ತೆರವು ವಿಚಾರದಲ್ಲಿ ಯಾವುದೇ ದಬ್ಬಾಳಿಕೆ ಮಾಡಿಲ್ಲ, ಅಧಿಕಾರ ದುರುಪಯೋಗ ಆಗಿಲ್ಲ ಎಂದು ಶಾಸಕ ಅಶೋಕ್‌ಕುಮಾರ್ ರೈ ಸ್ಪಷ್ಟಪಡಿಸಿದ್ದಾರೆ.
ಮಹಾಲಿಂಗೇಶ್ವರ ದೇವರ ಜಾತ್ರೆಯ ವೇಳೆ ಉಳ್ಳಾಲ್ತಿಯ ಭಂಡಾರ ಬರುವ ಸಂದರ್ಭದಲ್ಲಿ ಇಲ್ಲಿ 30 ರಿಂದ 35 ಸಾವಿರ ಜನ ಸೇರುತ್ತಾರೆ. 100 ವರ್ಷ ಹಳೆಯ ಈ ಕಟ್ಟಡ ಅನ್‌ಫಿಟ್ ಆಗಿದೆ ಎಂದು ಪಿಡಬ್ಲ್ಯುಡಿ ಹಾಗೂ ನಗರಸಭೆಯೂ ವರದಿ ನೀಡಿದೆ. ಬೆಂಗಳೂರಿನಲ್ಲಿ ಆದಂತೆ ಹಳೆಯ ಕಟ್ಟಡದಿಂದ ಇಲ್ಲಿಯೂ ಜನರಿಗೆ ತೊಂದರೆ ಆಗಬಾರದು. ಯಾರೂ ಭಕ್ತಾಧಿಗಳು ಜೀವ ಕಳೆದುಕೊಳ್ಳಬಾರದು ಎಂಬುದು ನಮ್ಮ ಉದ್ದೇಶ. ಇಲ್ಲಿ ಉಳ್ಳಾಲ್ತಿ ಬರುವ ರಸ್ತೆಗೆ ಕಬ್ಬಿಣದ ಬೀಮ್ ಅಳವಡಿಸಿರುವುದರಿಂದ ರಸ್ತೆ ಒಂದೂವರೇ ಫಿಟ್ ಕಿರಿದಾಗಿದೆ. ಬೀಮ್ ತೆಗೆಯಲು ಹೋದ ವೇಳೆ 1 ಅಂಗಡಿ ಹೋಗಿದೆ. ಉಳಿದಂತೆ ಏನೂ ಆಗಿಲ್ಲ. ಭಕ್ತಾದಿಗಳ ರಕ್ಷಣೆ ಬಗ್ಗೆ ಗಮನಹರಿಸಿ ಈ ಕೆಲಸ ಮಾಡಿದ್ದೇವೆ. ಎಲ್ಲಿಯೂ ದಬ್ಬಾಳಿಕೆ, ಅಧಿಕಾರ ದುರುಪಯೋಗ ಮಾಡಿಲ್ಲ. ಜನರ ರಕ್ಷಣೆ ನಮ್ಮ ಕರ್ತವ್ಯ, ಮಹಾಲಿಂಗೇಶ್ವರನ ಭಕ್ತರ ಅನುಕೂಲಕ್ಕೆ ಮಾಡಿದ್ದೇವೆ. ಅವರ ಖಾಸಗಿ ಆಸ್ತಿಯ ಬಗ್ಗೆ ನಾವು ಯಾವುದೇ ಆಸಕ್ತಿ ವಹಿಸಿಲ್ಲ. ಅವರು ಸಹ ಈ ಹಳೆಯ ಕಟ್ಟಡ ತೆರವುಗೊಳಿಸುವ ಸಂಬಂಧ ಕೋರ‍್ಟ್‌ನಲ್ಲಿ ವಾದ ಮಾಡುತ್ತಿದ್ದಾರೆ. ಮಹಾಲಿಂಗೇಶ್ವರ ದೇವರು ಹಾಗೂ ಉಳ್ಳಾಲ್ತಿ ಭೇಟಿ ಮಾಡುವ ಜಾಗ ದೇವರಿಗೆ ಸೇರಬೇಕೆಂಬ ಕೂಗು ಭಕ್ತರಲ್ಲಿ ಇದೆ ಎಂದು ಅಶೋಕ್ ರೈ ಸ್ಪಷ್ಟಪಡಿಸಿದ್ದಾರೆ.










