ಎಸ್‌ಎಸ್‌ಎಲ್‌ಸಿಯಲ್ಲಿ 621 ಅಂಕ : ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆದ ಹನುಮಗಿರಿಯ ಅನನ್ಯ ಮನೆಗೆ ಡಿಡಿಪಿಐ ಶಶಿಧರ್ ಭೇಟಿ, ಅಭಿನಂದನೆ

0

ಪುತ್ತೂರು: ಇತ್ತೀಚೆಗೆ ಪ್ರಕಟಗೊಂಡ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಹನುಮಗಿರಿಯ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನನ್ಯ ಎ. ಅವರು 625ಕ್ಕೆ 621 ಅಂಕ ಪಡೆಯುವ ಮೂಲಕ ಅತ್ಯುನ್ನತ ಸಾಧನೆ ಮಾಡಿದ್ದಾರೆ. ರಾಜ್ಯಕ್ಕೆ 5ನೇ ರ‍್ಯಾಂಕ್, ಜಿಲ್ಲೆಗೆ 3ನೇ ರ‍್ಯಾಂಕ್ ಹಾಗೂ ತಾಲೂಕಿಗೆ 2ನೇ ರ‍್ಯಾಂಕ್ ಪಡೆದು ವಿದ್ಯಾಸಂಸ್ಥೆ ಮತ್ತು ಹೆತ್ತವರಿಗೆ ಕೀರ್ತಿ ತಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣಾ ಇಲಾಖೆಯ ಉಪನಿರ್ದೇಶಕ ಶಶಿಧರ್ ಅವರು ಅನನ್ಯ ಅವರ ಮನೆಗೆ ಭೇಟಿ ನೀಡಿ ಅಭಿನಂದಿಸಿದರು. ಕಮಲಾಕ್ಷ ಎ. ಹಾಗೂ ಪ್ರಶಾಂತಿ ಜಿ. ಕೆ. ದಂಪತಿಯ ಪುತ್ರಿಯಾದ ಅನನ್ಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಹರಿಪ್ರಸಾದ್, ಡಯಟ್ ಮಂಗಳೂರು ಉಪನ್ಯಾಸಕ ತಾರೇಶ್ ನಾಯ್ಕ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಾಹಂ, ಶ್ರೀ ಗಜಾನನ ಹಿ. ಪ್ರಾ. ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶಿವರಾಮ ಶರ್ಮ ಕತ್ರಿಬೈಲು ಸೇರಿದಂತೆ ಅನನ್ಯ ಅವರ ತಂದೆ-ತಾಯಿ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

“ಮಿಷನ್ 95 ಪ್ಲಸ್ ನನಸಾಗಿದೆ” – ಡಿಡಿಪಿಐ ಶಶಿಧರ್
ಮಾತನಾಡಿದ ಡಿಡಿಪಿಐ ಶಶಿಧರ್, “ಈ ಬಾರಿಯೂ ದ.ಕ. ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನ ಉಳಿಸಿಕೊಂಡಿದೆ. ಕಳೆದ ಬಾರಿ 92.12% ಇದ್ದ ಫಲಿತಾಂಶ ಈ ಬಾರಿ 98.40% ತಲುಪಿ ಶೇ. 100ರ ಗಡಿಯ ಹತ್ತಿರ ಬಂದಿದ್ದೇವೆ. ಇದಕ್ಕೆ ಮೂಲ ಕಾರಣಕರ್ತರು ನಮ್ಮ ಮಕ್ಕಳು. ಅವರ ಸಾಧನೆಯನ್ನು ಗುರುತಿಸಲು ಇಡೀ ಜಿಲ್ಲೆಯ ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಪುತ್ತೂರಲ್ಲಿ ‘ಮಿಷನ್ 95 ಪ್ಲಸ್’ ಎನ್ನುವ ಕನಸು ಕಂಡಿದ್ದೆವು, ಅದು ಜಿಲ್ಲೆಯಲ್ಲಿ ನನಸಾಗಿದೆ. ಇದು ದೊಡ್ಡ ಖುಷಿ. ಈ ಖುಷಿಗಾಗಿ ಅನನ್ಯ ಅವರನ್ನು ಇಡೀ ಜಿಲ್ಲೆಯ ತಂಡ ಬಂದು ಅಭಿನಂದಿಸಿದ್ದೇವೆ. ಅನನ್ಯ ಅವರ ದೊಡ್ಡ ಕನಸಾದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಭಾರತೀಯ ಸೇವೆಯಲ್ಲಿ ಅಧಿಕಾರಿಯಾಗಲಿ” ಎಂದು ಹಾರೈಸಿದರು.

“625 ಅಂಕದ ಆಸೆ ಇತ್ತು” – ವಿದ್ಯಾರ್ಥಿನಿ ಅನನ್ಯ
ವಿದ್ಯಾರ್ಥಿನಿ ಅನನ್ಯ ಮಾತನಾಡಿ, “ತುಂಬಾ ಖುಷಿಯಾಗಿದೆ. 625 ಅಂಕ ಗಳಿಸಬೇಕೆಂಬ ಆಸೆ ಇತ್ತು, ಆದರೆ 621 ಅಂಕ ಲಭಿಸಿದೆ. ವಿಜ್ಞಾನದಲ್ಲಿ 4 ಅಂಕ ಕೈತಪ್ಪಿದೆ. ಶಿಕ್ಷಕರು ಮೊದಲಿನಿಂದಲೂ ತುಂಬಾ ಸಪೋರ್ಟ್ ಮಾಡಿದ್ದಾರೆ. ತಂದೆ-ತಾಯಿಯ ಸಹಕಾರ ಮುಖ್ಯವಾಗಿತ್ತು. ಶಾಲೆಯಿಂದ ಎಲ್ಲ ಚಟುವಟಿಕೆಗಳಿಗೆ ಉತ್ತಮ ಸ್ಪಂದನೆ ದೊರಕಿದೆ. ನನ್ನ ಭರತನಾಟ್ಯ ಶಿಕ್ಷಕರು ಸಹಾಯ ಮಾಡಿದ್ದಾರೆ. ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಚಿನ್ಮಯಿ ಸರ್ ತುಂಬಾ ಸಪೋರ್ಟ್ ಮಾಡಿದ್ದಾರೆ” ಎಂದರು.

“ಕಲೆ ಕಲಿಕೆಗೆ ಅಡ್ಡಿಯಲ್ಲ” – ತಾಯಿ ಪ್ರಶಾಂತಿ
ತಾಯಿ ಪ್ರಶಾಂತಿ ಜಿ. ಕೆ. ಮಾತನಾಡಿ, “ತುಂಬಾ ಹೆಮ್ಮೆ ಅನಿಸುತ್ತದೆ. ಕಲಿಕೆ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಯಲ್ಲೂ ಚುರುಕು. ಕಲೆ ಕಲಿಕೆಗೆ ಯಾವುದೇ ರೀತಿಯ ಅಡ್ಡಿಯಾಗುವುದಿಲ್ಲ ಎಂದು ಸಾಧಿಸಿ ತೋರಿಸಿದ್ದಾಳೆ. ನಮ್ಮೂರಿನ ಶಾಲೆ ಗಜಾನನ ನಮ್ಮೆಲ್ಲರಿಗೆ ಹೆಮ್ಮೆ. ಆ ಶಾಲೆಯ ಆಡಳಿತ ಮಂಡಳಿ, ನಿರ್ದೇಶಕರು, ಪದಾಧಿಕಾರಿಗಳು, ಶಿಕ್ಷಕರು ಅವಳ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಎಲ್ಲರಿಗೂ ಕೃತಜ್ಞತೆಗಳು” ಎಂದರು.

LEAVE A REPLY

Please enter your comment!
Please enter your name here