






ಪುತ್ತೂರು:ಬಂಗಾರದ ಮಲ್ಲಿಗೆಯನ್ನೇ ತೊಟ್ಟು ನೇಮ ಪಡೆದುಕೊಳ್ಳುವ ಸೀಮೆಯೊಡತಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮ ನಡಾವಳಿಯು ಏ.28ರಂದು ನಡೆಯಲಿದೆ.


ನೇಮ ನಡಾವಳಿಯ ಪೂರ್ವಭಾವಿಯಾಗಿ ಏ.27ರಂದು ಮಧ್ಯಾಹ್ನ ಬಲ್ನಾಡು ಶ್ರೀ ವಿನಾಯಕ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ವಿಶೇಷ ಮಹಾಪೂಜೆ, ಸಂಜೆ ರಂಗಪೂಜೆ, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಮಕರತೋರಣರೋಹಣ, ಶ್ರೀ ದೈವಗಳ ಭಂಡಾರ ತೆಗೆದು ಮೂಲಸ್ಥಾನದಿಂದ ನೇಮ ನಡೆಯುವ ದೈವಸ್ಥಾನಕ್ಕೆ ಆಗಮನ, ತಂಬಿಲ ಸೇವೆಗಳು ನಡೆದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.



ಎ.28ರಂದು ಮುಂಜಾನೆ ದೈವಸ್ಥಾನದಲ್ಲಿ ಗಣಪತಿ ಹೋಮ ನಡೆದ ಬಳಿಕ ಶ್ರೀ ದಂಡನಾಯಕ ದೈವದ ವಾಲಸರಿ ನೇಮ ಆರಂಭಗೊಂಡು ಕಿರುವಾಳು ಭಂಡಾರ ವಾಲಸರಿ ಗದ್ದೆಗೆ ತೆರಳಿ, ದಂಡನಾಯಕ ದೈವದ ಮುಖಾಮುಖಿ ನಡೆಯಲಿದೆ. ವಾಲಸರಿ ಗದ್ದೆಯಲ್ಲಿ ದೈವದ ನೇಮ ನಡೆದು ಕಟ್ಟೆ ಮನೆಯ ಬಳಿಯಿರುವ ಕಟ್ಟೆಯಲ್ಲಿ ಪೂಜೆ ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ ಶ್ರೀ ಉಳ್ಳಾಲ್ತಿ ದೈವದ ನೇಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಶ್ಯಾರ ಮನೆಯಿಂದ ವರ್ಷಂಪ್ರತಿ ತರುವ ಚಿನ್ನದ ಮುಗುಳು ಮಲ್ಲಿಗೆಯನ್ನು ಉಳ್ಳಾಲ್ತಿ ದೈವಕ್ಕೆ ಮುಡಿದು ನೇಮ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಅಪರಾಹ್ನ 2 ಗಂಟೆಯಿಂದ ಶ್ರೀಕಾಳರಾಹು ಮತ್ತು ಮಲರಾಯ ದೈವಗಳ ನೇಮ ನಡೆಯಲಿದೆ.
ನೇಮೋತ್ಸವ ಸಂದರ್ಭದಲ್ಲಿ ಹರಕೆ ಸಲ್ಲಿಸುವ ಭಕ್ತಾದಿಗಳು ಶುದ್ಧ ಕುಂಕುಮ ಹಾಗೂ ಶುದ್ಧಿ ಹತ್ತಿ ಸೀರೆಗಳನ್ನೇ ಸಮರ್ಪಿಸಿವಂತೆ ದೈವಸ್ಥಾನದ ಪ್ರಕಟಣೆ ತಿಳಿಸಿದೆ.










