






ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಸೂಕ್ತ ಭದ್ರತೆ ನೀಡುವಂತೆ ಆಗ್ರಹಿಸಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಅವರು ಸಲ್ಲಿಸಿದ್ದ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ.ರವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಪುತ್ತೂರು ನಗರ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಜಾನ್ಸನ್ ಡಿ ಸೋಜಾರವರಿಗೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ಇನ್ಸ್ಪೆಕ್ಟರ್ ಅವರು ಜಯಪ್ರಕಾಶ್ ಬದಿನಾರು ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.


ಘಟನೆಯ ವಿವರ:



ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಈ ಬಾರಿ ಯಶಸ್ವಿಯಾಗಿ ನಡೆದಿದೆ. ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ಬಲ್ನಾಡು ಉಳ್ಳಾಲ್ತಿ ದೈವಗಳ ಭಂಡಾರ ಬರುವ ದಾರಿ ಕಿರಿದಾದ ಕಾರಣ ಈ ರಸ್ತೆಯಲ್ಲಿ ಹಳೆಯ ಕಟ್ಟಡ ಬೀಳುವ ಪರಿಸ್ಥಿತಿಯಲ್ಲಿರುವುದನ್ನು ಅರಿತು ಸಾರ್ವಜನಿಕರು ಕಟ್ಟಡ ತೆರೆವು ಮಾಡಿದ ವಿಚಾರ ಪತ್ರಿಕಾ ಮಾಧ್ಯಮದಲ್ಲಿ ಪ್ರಕಟವಾಗಿರುತ್ತದೆ. ಕಟ್ಟಡ ತೆರವು ಕಾರ್ಯಾಚರಣೆಯ ವೇಳೆ ಶಾಸಕ ಅಶೋಕ್ ಕುಮಾರ್ ರೈ ಅವರು ಸದ್ರಿ ಸ್ಥಳದಲ್ಲಿ ಇದ್ದರು ಎನ್ನುವ ನೆಪವನ್ನು ಒಡ್ಡಿ ಯಾರೋ ಕಿಡಿಗೇಡಿಗಳು ದೆಹಲಿಯಿಂದ ಶಾಸಕರಿಗೆ ಫೋನ್ ಕರೆ ಮಾಡಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಶಾಸಕರು ನಡೆಸಿದ ಪತ್ರಿಕಾಗೋಷ್ಠಿಯ ಮುಖಾಂತರ ತಿಳಿದು ಬಂದಿದೆ. ಪುತ್ತೂರಿನ ಸಮಗ್ರ ಅಭಿವೃದ್ಧಿ ಮತ್ತು ದೇವಸ್ಥಾನದ ಕೆಲಸಗಳಿಗೆ ನಿರಂತರವಾಗಿ ಕೆಲಸ ಮಾಡುತ್ತಿರುವ ಶಾಸಕರಿಗೆ ಕೊಲೆ ಬೆದರಿಕೆ ಬಂದಿರುವುದು ಆತಂಕಕಾರಿಯಾಗಿದೆ. ಈ ಘಟನೆ ಶಾಸಕರ ಬೆಂಬಲಿಗರಾದ ನಮಗೆ ದಿಗ್ಬ್ರಮೆ ಮೂಡಿಸಿದೆ. ಆದ್ದರಿಂದ ತಾವು ಶಾಸಕರಿಗೆ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ಓರ್ವ ಅಂಗರಕ್ಷಕರನ್ನು ನಿಯೋಜನೆ ಮಾಡಬೇಕು ಎಂದು ಕೋಡಿಂಬಾಡಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಅವರು ಎಸ್ಪಿಗೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿದ ಎಸ್ಪಿ ಡಾ. ಅರುಣ್ ಕೆ. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಲು ಪುತ್ತೂರು ನಗರ ಠಾಣಾ ವೃತ್ತ ನಿರೀಕ್ಷಕ ಜಾನ್ಸನ್ ಡಿ ಸೋಜ ಅವರಿಗೆ ಸೂಚಿಸಿದ್ದರು. ಕೂಡಲೇ ವೃತ್ತ ನಿರೀಕ್ಷಕರು ಜಯಪ್ರಕಾಶ್ ಅವರಿಂದ ಶಾಸಕರಿಗೆ ಎಲ್ಲಿಂದ ಮತ್ತು ಯಾರಿಂದ ಹಾಗೂ ಯಾವಾಗ ಬೆದರಿಕೆ ಬಂದಿದೆ ಎಂದು ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.










