ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ವಾರ್ಷಿಕೋತ್ಸವ

0

ಪುತ್ತೂರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ 2025-26ನೇ ಸಾಲಿನ ವಾರ್ಷಿಕೋತ್ಸವ ಏ.28ರಂದು ಕಾಲೇಜಿನ ಎಸ್‌ಜೆಎಂ ಸಭಾಂಗಣದಲ್ಲಿ ನಡೆಯಿತು.

ಮಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಪ್ರೊ. ಕವಿತಾ ಕೆ. ಆರ್.ರವರು ಮಾತನಾಡಿ ಅವಕಾಶಗಳನ್ನು ಬಳಸಿಕೊಳ್ಳಲು ನೀವು ಬಹಳ ವೇಗವಾಗಿ ಯೋಚಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ನಾವು ಮೊದಲು ರೂಢಿಸಿಕೊಳ್ಳಬೇಕಾದ ಗುಣವಿದು. ಜಗತ್ತು ವೇಗವಾಗಿ ಬದಲಾಗುತ್ತಿದೆ. ಕಾಲೇಜುಗಳು ನೀವು ಬೆಳೆಯಲು ಮತ್ತು ಉತ್ತಮ ವ್ಯಕ್ತಿಯಾಗಲು ಅವಕಾಶಗಳನ್ನು ನೀಡುತ್ತವೆ, ಆದ್ದರಿಂದ ನಿಮ್ಮಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಗುಣ ಇರಲೇಬೇಕು. ಬದಲಾಗುತ್ತಿರುವ ಜಗತ್ತಿಗೆ ನೀವು ಹೊಂದಾಣಿಕೆ ಮಾಡಿಕೊಳ್ಳದಿದ್ದರೆ, ನೀವು ದಾರಿ ತಪ್ಪುತ್ತೀರಿ ಮತ್ತು ನಿಮ್ಮ ಕನಸುಗಳನ್ನು ನನಸಾಗಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಂ| ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ ವಿದ್ಯಾರ್ಥಿಗಳು ಈ ಸಂಸ್ಥೆಯ ಹೃದಯವಿದ್ದಂತೆ. ಇಲ್ಲಿ ನಿಮಗೆ ಎಲ್ಲಾ ರೀತಿಯ ಅವಕಾಶಗಳನ್ನು ನೀಡಲಾಗಿದೆ, ಈ ಅವಕಾಶಗಳನ್ನು ಬಳಸಿಕೊಂಡು ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ. ನೀವು ಉತ್ತಮ, ಸೃಜನಶೀಲ ಮತ್ತು ಕ್ರಿಯಾಶೀಲ ವಿದ್ಯಾರ್ಥಿಗಳಾಗಿರುವುದಕ್ಕಾಗಿ ನಾವೆಲ್ಲರೂ ನಿಮ್ಮನ್ನು ಅಭಿನಂದಿಸುತ್ತೇವೆ. ಪ್ರಾಂಶುಪಾಲರು ಮತ್ತು ಅಧ್ಯಾಪಕ ವೃಂದದ ಮಾರ್ಗದರ್ಶನದಿಂದಾಗಿ ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಸನ್ಮಾನ:
ಪಿಎಚ್.ಡಿ. ಪದವಿ ಪಡೆದ ಡಾ. ವಿನಯಚಂದ್ರ, ಡಾ. ಗೀತಾ ಪೂರ್ಣಿಮ ಕೆ. ಮತ್ತು ಡಾ. ಭಾರತಿ ಎಸ್. ರೈ ಅವರನ್ನು ಸನ್ಮಾನಿಸಲಾಯಿತು. ಕಾಲೇಜು ಎನ್‌ಸಿಸಿ ನೌಕಾದಳದ ಅಧಿಕಾರಿಯಾಗಿ “ಸಬ್ ಲೆಫ್ಟಿನೆಂಟ್” ಶ್ರೇಣಿಗೆ ಆಯ್ಕೆಯಾದ ತೇಜಸ್ವಿ ಭಟ್ ಕೆ. ಹಾಗೂ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ ಮೈಸೂರಿನಲ್ಲಿ ನಡೆದ ರಾಷ್ಟೀಯ ಏಕತಾ ಶಿಬಿರದಲ್ಲಿ ಭಾಗವಹಿಸಿದ ಡಾ| ಕೆ. ಚಂದ್ರಶೇಖರ್‌ರವರನ್ನು ಸನ್ಮಾನಿಸಲಾಯಿತು. ಕೆ-ಸೆಟ್ ಪರೀಕ್ಷೆಯಲ್ಲಿ ಉತ್ತಿರ್ಣರಾದ ಉಪನ್ಯಾಸಕ ಮತ್ತು ವಿದ್ಯಾರ್ಥಿಯರನ್ನು ಗೌರವಿಸಲಾಯಿತು.

ಪುತ್ತೂರು ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ| ಅಶೋಕ್ ರಾಯನ್ ಕ್ರಾಸ್ತ, ಗೌರವ ಅತಿಥಿಗಳಾಗಿ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಡಾ.ಅಬೂಬಕ್ಕರ್ ಅರ್ಲಪದವು, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಝಾಮಿಲ್, ಕಾರ್ಯದರ್ಶಿ ಯೂಸುಫ್ ಅಲ್ಫಾಜ್, ಜತೆ ಕಾರ್ಯದರ್ಶಿ ಹಿಬಾ ಶೇಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಕ್ರೀಡಾಕೂಟಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟನಿ ಪ್ರಕಾಶ್ ಮೊಂತೇರೊರವರು ವಾರ್ಷಿಕ ಚಟುವಟಿಕೆಗಳ ವರದಿ ಮಂಡಿಸಿದರು.
ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯಸ್ಥರಾದ ವಂ| ಮ್ಯಾಕ್ಸಿಮ್ ಎಂ. ಡಿಸೋಜಾ, ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿ ಮಾಜಿ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ತಾ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ವಾಣಿಜ್ಯ ಆಡಳಿತ ವಿಭಾಗದ ಡೀನ್ ಮತ್ತು ಮುಖ್ಯಸ್ಥರಾದ ಡಾ| ರಾಧಾಕೃಷ್ಣ ಗೌಡ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾದ ಸ್ಪರ್ಲ್ ಫಿಯೋನಾ ಪಿರೇರಾ, ಐಕ್ಯೂಎಸಿ ಸಂಯೋಜಕರಾದ ಡಾ| ಎಡ್ವಿನ್ ಎಸ್. ಡಿಸೋಜಾ, ಮತ್ತು ಪರೀಕ್ಷಾಂಗ ಕುಲಸಚಿವರಾದ ಡಾ| ವಿನಯಚಂದ್ರ ಹಾಗೂ ಪಿಆರ್‌ಒ ಡಾ| ಭಾರತಿ ಎಸ್. ರೈ ಹಾಗೂ ಹಲವು ಗಣ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಲಲಿತ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ| ವಿಜಯಕುಮಾರ್ ಎಂ. ಸ್ವಾಗತಿಸಿ ಕಾಲೇಜಿನ ಶೈಕ್ಷಣಿಕ ರಿಜಿಸ್ಟ್ರಾರ್ ಡಾ| ನಾರ್ಬರ್ಟ್ ಮಸ್ಕರೇನ್ಹಸ್ ವಂದಿಸಿದರು, ಭೌತಶಾಸ್ತ್ರ ವಿಭಾಗದ ಪೂಜಾಶ್ರೀ ವಿ. ರೈ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮ ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಆರೋಗ್ಯ, ವಿದ್ಯಾಭ್ಯಾಸ, ಉದ್ಯೋಗವಿದ್ದಾಗ ವ್ಯಕ್ತಿ ಪರಿಪೂರ್ಣ- ಅಶೋಕ್ ಕುಮಾರ್ ರೈ
ಮುಖ್ಯ ಅತಿಥಿ, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈರವರು ಮಾತನಾಡಿ ನೀವೆಲ್ಲರೂ ಯುವ ಪೀಳಿಗೆಯವರು. ಹಿಂದೆ ನಿರುದ್ಯೋಗದ ಸಮಸ್ಯೆ ಹೆಚ್ಚಿತ್ತು, ಆದರೆ ಈಗ ಕೆಲಸಕ್ಕೆ ಜನರ ಕೊರತೆ ಉಂಟಾಗಿದೆ. ಕೆಲವು ಕಡೆಗಳಲ್ಲಿ ಕೆಲಸ ಮಾಡಲು ಜನರಿದ್ದರೂ ಸಹ ಅವರಲ್ಲಿ ಕೌಶಲ್ಯದ ಕೊರತೆಯಿದೆ. ಆದ್ದರಿಂದ ಪ್ರಾಯೋಗಿಕ ಜ್ಞಾನ ಬಹಳ ಮುಖ್ಯ. ನಿಮ್ಮಲ್ಲಿ ಕೌಶಲ್ಯ ವೃದ್ಧಿಯಾಗಬೇಕು, ಕೌಶಲ್ಯವಿದ್ದರೆ ಯಾವುದೇ ಸವಾಲನ್ನು ನಿಭಾಯಿಸಬಹುದು. ಶಿಕ್ಷಣದ ಜೊತೆಗೆ ಪ್ರಾಯೋಗಿಕವಾಗಿಯೂ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು ಎಂದರು. ಒಬ್ಬ ವ್ಯಕ್ತಿಯು ಪರಿಪೂರ್ಣನಾಗುವುದು ಒಳ್ಳೆಯ ಆರೋಗ್ಯ, ಉತ್ತಮ ವಿದ್ಯಾಭ್ಯಾಸ ಮತ್ತು ಗೌರವಯುತ ಉದ್ಯೋಗವಿದ್ದಾಗ ಮಾತ್ರ. ವಿದ್ಯಾರ್ಥಿಗಳಲ್ಲಿ ನಿಷ್ಠೆ, ಪ್ರಾಮಾಣಿಕತೆ, ಸರಿಯಾದ ಯೋಜನೆ ಮತ್ತು ಗುರಿ ಇದ್ದರೆ ಖಂಡಿತವಾಗಿಯೂ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

LEAVE A REPLY

Please enter your comment!
Please enter your name here