ಮೇ 7 ಕ್ಕೆ ಪುತ್ತೂರಿನಲ್ಲಿ ಶೃಂಗೇರಿ ಶ್ರೀಗಳಿಗೆ ಗುರುವಂದನೆ – ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಗಳ, ಪೀಠದ ಅನುಗ್ರಹ ಪಡೆಯಿರಿ – ಗೌಡ ಸಂಘ ಕರೆ

0

ಪುತ್ತೂರು: ಅಷ್ಟಮಂಗಲ, ಕಾರ್ಯಕ್ರಮ ಇತರೇ ವಿಚಾರಗಳಿರಲಿ ಶೃಂಗೇರಿಗೆ ಹೋಗಿ ಗುರುಪೀಠಕ್ಕೆ ಕಾಣಿಕೆ ಅಥವಾ ಗುರು ಪಾದ ಪೂಜೆ ಮಾಡಬೇಕಾದ ವಿಚಾರ ಕಂಡು ಬರುತ್ತದೆ. ಎಲ್ಲಾ ಸಮುದಾಯಕ್ಕೂ ಗುರುಪೀಠ ಶೃಂಗೇರಿ. ಈ ನಿಟ್ಟಿಬಲ್ಲಿ ಮೇ 7 ಕ್ಕೆ ಶೃಂಗೇರಿ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ಪುತ್ತೂರಿನಲ್ಲಿ ನಡೆಯಲಿದೆ. ಈ ಅವಕಾಶವನ್ನು ಸಮುದಾಯದ ಎಲ್ಲರೂ ಸದುಪಯೋಗ ಪಡೆದುಕೊಂಡು ಗುರುಗಳ ಮತ್ತು ಪೀಠದ ಅನುಗ್ರಹ ಪಡೆಯುವಂತೆ ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷರೂ ಮತ್ತು ಗುರುವಂದನಾ ಸಮಿತಿ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಹೇಳಿದ್ದಾರೆ.


ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ಮೇ.3 ರಂದು ನಡೆದ ಗೌಡ ಸಂಘದ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು. ಸುಮಾರು ಎಂಟು ಒಂಭತ್ತರ ಶತಮಾನದಲ್ಲಿ ಶ್ರೀ ಶಂಕರಾಚಾರ್ಯರವರು ಭಾರತವನ್ನು ಸುತ್ತಿ ಹಿಂದು ಧರ್ಮದ ಸಂಘಟನೆ ಮಾಡುವಲ್ಲಿ ತೊಡಗಿಸಿಕೊಂಡಿದ್ದರು. ಭಾರತದಲ್ಲಿ ಅವರು ಸ್ಥಾಪಿಸಿದ 4 ಪೀಠಗಳಲ್ಲೊಂದು ಶೃಂಗೇರಿ ಶಾರದಾ ಪೀಠ. ಈ ಗುರು ಪೀಠ ಎಲ್ಲಾ ಸಮುದಾಯದವರಿಗೆ ಬಹಳ ಅಗತ್ಯ. ನಮ್ಮ ಸಮುದಾಯದಲ್ಲಿ ಮದುವೆ ಸಹಿತ ಸಮಾರಂಭದಲ್ಲಿ ಶೃಂಗೇರಿಗೆ ಪಣವು ಕಟ್ಟಿ ಇಡುವ ಸಂಸ್ಕೃತಿ ಇತ್ತು. ಇತ್ತೀಚಿಗಿನ ದಿನದಲ್ಲಿ ಅದು ಕಡಿಮೆ ಆಗಿದೆ. ಹಾಗಾಗಿ ಸಮುದಾಯ ಭವನದಲ್ಲಿ ಮದುವೆಯಾದಾಗ ಒಂದಂಶ ಕಾಣಿಕೆ ತೆಗೆದಿಟ್ಟು ಸಂಘದ ಮೂಲಕ ವರ್ಷಕ್ಕೆ ಒಮ್ಮೆ ಹೋಗಿ ಶೃಂಗೇರಿಗೆ ಮುಟ್ಟಿಸಿ ಆಶೀರ್ವಾದ ಪಡೆಯುತ್ತಿದ್ದೆವು. ಆದರೆ ಇದೀಗ ಶ್ರೀಗಳು ಪುತ್ತೂರಿಗೆ ಬರುವುದು ನಮ್ಮ ಸುಯೋಗ. ಈ ಸಂದರ್ಭ ಆ ಗುರುಕಾಣಿಕೆಯನ್ನು ಇಲ್ಲೇ ಸಮರ್ಪಣೆ ಮಾಡಿ ಪಾದಪೂಜೆ ಸಂಘದ ಮೂಲಕ ನಡೆಯಲಿದೆ. ಈ ಸಂದರ್ಭ ಸಮಾಜದ ಎಲ್ಲಾ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಗಳ ಮತ್ತು ಪೀಠದ ಅನುಗ್ರಹ ಪಡೆಯುವಂತೆ ಅವರು ವಿನಂತಿಸಿದರು.


ಎಲ್ಲರಿಗೂ ಮಂತ್ರಾಕ್ಷತೆ :
ಶ್ರೀಗಳು ಮೇ 7 ಕ್ಕೆ ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲ ಸ್ಥಾನದಲ್ಲಿ ಚಂಡಿಕಾ ಹೋಮ ನೆರವೇರಿಸಲಿದ್ದಾರೆ. ಬಳಿಕ ಅಂಬಿಕಾದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪಾದಪೂಜೆಗೆ ಅವಕಾಶ ಇದೆ. ಶೃಂಗೇರಿಯಲ್ಲಿ ಯಾವ ರೀತಿ ಪಾದ ಪೂಜೆ ಆಗುತ್ತದೆಯೋ ಅದೇ ರೀತಿ ಪಾದಪೂಜೆ ನಡೆಯಲಿದೆ. ಗುರುವಂದನಾ ಕಾರ್ಯಕ್ರಮದಲ್ಲಿ ಎಲ್ಲಾ ಸಮುದಾಯದವರು ಸೇರಿ ಶ್ರೀಗಳಿಗೆ ಶಾರದೆಯ ಬೆಳ್ಳಿಯ ಪ್ರತಿಮೆ ಸಮರ್ಪಣೆ ಮಾಡಲಾಗುವುದು ಎಂದು ಚಿದಾನಂದ ಬೈಲಾಡಿ ತಿಳಿಸಿದರು.


ಆಮಂತ್ರಣ ಸಮಾಜದ ಎಲ್ಲರ ಮನೆಗೆ ತಲುಪಬೇಕು:
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು ಅವರು ಮಾತನಾಡಿ ಸಮಾಜದ ಪೀಠ ಆದಿಚುಂಚನಗಿರಿ ಆದರೂ ಗುರುಪೀಠ ಶೃಂಗೇರಿ. ಹಾಗಾಗಿ ಕಾರ್ಯಕ್ರಮದಲ್ಲಿ ಎಲ್ಲರು ಭಾಗವಹಿಸಬೇಕು. ಸಮಾಜದ ಎಲ್ಲಾ ಮನೆ ಮನೆಗೂ ಆಮಂತ್ರಣ ತಲುಪುವಲ್ಲಿ ಸಂಘದ ಸದಸ್ಯರು ಸಕ್ರೀಯರಾಗಿರಬೇಕೆಂದರು. ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಶ್ರೀಧರ ಗೌಡ ಪಾಣತ್ತಿಲ, ನಿಕಟಪೂರ್ವ ಅಧ್ಯಕ್ಷ ರವಿ ಮುಂಗ್ಲಿಮನೆ, ಗೌರವಾಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಖಜಾಂಚಿ ಶ್ರೀಧರ ಗೌಡ ಕಣಜಾಲು, ಮಹಿಳಾ ಗೌಡ ಸಂಘದ ಅಧ್ಯಕ್ಷೆ ಕುಸುಮ, ಯುವ ಗೌಡ ಸಂಘದ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಸಂಘದ ಪ್ರಮುಖರು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಮೇ 6 ಕ್ಕೆ ಶ್ರೀಗಳ ಸ್ಬಾಗತಕ್ಕೂ ಭಾಗವಹಿಸಿ
ಶೃಂಗೇರಿ ಗುರುಗಳು ಮೇ.6 ಕ್ಕೆ ಸಂಜೆ ಪುತ್ತೂರಿಗೆ ಆಗಮಿಸಲಿದ್ದಾರೆ. ಅವರನ್ನು ಮುರ ಪೋಳ್ಯದಿಂದ ವಾಹನ ಜಾಥಾ ಮೂಲಕ ಸ್ವಾಗತಿಸಲಾಗುವುದು. ಈ ಸಂದರ್ಭ ಸಮಾಜದ ಬಂಧುಗಳು ತಮ್ಮ ತಮ್ಮ ವಾಹನದ ಮೂಲಕ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿನಂತಿ.
ಚಿದಾನಂದ ಬೈಲಾಡಿ ಸಲಹಾ ಸಮಿತಿ ಉಪಾಧ್ಯಕ್ಷ
ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು

LEAVE A REPLY

Please enter your comment!
Please enter your name here