







ಪುತ್ತೂರು: ಸರಕಾರದಿಂದ ಎರಡನೇ ಬಾರಿಗೆ ಕಾರ್ಮಿಕರ ಕಲ್ಯಾಣ ಮಂಡಳಿಯ ವಸತಿ ಶಾಲೆ ಮಂಜೂರಾಗಿದ್ದು ಈ ಶಾಲೆಯನ್ನು ಪುತ್ತೂರಿಗೆ ವರ್ಗಾವಣೆ ಮಾಡುವಂತೆ ಶಾಸಕ ಅಶೋಕ್ ರೈ ಅವರು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಸಲ್ಲಿಸಿದ್ದಾರೆ.


ಪುತ್ತೂರಿಗೆ ಈಗಾಗಲೇ ಒಂದು ಕಾರ್ಮಿಕ ವಸತಿ ಶಾಲೆ ಮಂಜೂರಾಗಿದ್ದು, ಕುರಿಯದಲ್ಲಿ ಈ ಶಾಲೆ ನಿರ್ಮಾಣವಾಗಲಿದ್ದು ಇದಕ್ಕೆ ಕೆಲದಿನಗಳ ಹಿಂದೆ ಗುದ್ದಲಿಪೂಜೆಯನ್ನು ನೆರವೇರಿಸಲಾಗಿದೆ. ಇದೀಗ ರಾಜ್ಯ ಸರಕಾರ ಕಾರ್ಮಿಕರ ಮಕ್ಕಳಿಗಾಗಿ ಎರಡನೇ ಕಾರ್ಮಿಕ ವಸತಿ ಶಾಲೆಯನ್ನು ದ ಕ ಜಿಲ್ಲೆಗೆ ಮಂಜೂರು ಮಾಡಿದ್ದು, ಇದನ್ನು ಉಳ್ಳಾಲ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳ ಸೂಚಿಸಿತ್ತು. ಉಳ್ಳಾಲದಲ್ಲಿ ಜಾಗದ ಕೊರತೆ ಇದ್ದು ಪುತ್ತೂರಿಗೆ ವರ್ಗಾವಣೆ ಮಾಡುವುದರಲ್ಲಿ ಯಾವುದೇ ಆಕ್ಷೇಪವಿಲ್ಲ ಎಂದು ಉಳ್ಳಾಲ ಶಾಸಕರೂ, ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್ ಸರಕಾರಕ್ಕೆ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಮಂಜೂರುಗೊಂಡ ಕಾರ್ಮಿಕ ವಸತಿ ಶಾಲೆಯನ್ನು ಪುತ್ತೂರಿಗೇ ನೀಡಬೇಕೆಂದು ಶಾಸಕರು ಮನವಿ ಮಾಡಿದ್ದಾರೆ. ಶಾಸಕರ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.



ನಮ್ಮ ವಿಧಾನಸಭಾ ಕ್ಷೇತ್ರಕ್ಕೆ ಈಗಾಗಲೇ ಒಂದು ಕಾರ್ಮಿಕ ವಸತಿ ಶಾಲೆ ಮಂಜೂರಾಗಿದ್ದು ಅದಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. ಎರಡನೇ ಬಾರಿ ದ ಕ ಜಿಲ್ಲೆಗೆ ವಸತಿ ಶಾಲೆ ಮಂಜೂರಾಗಿದ್ದು ಅದನ್ನು ಪುತ್ತೂರಿಗೆ ನೀಡಬೇಕೆಂದು ಸಚಿವರಿಗೆ ಮನವಿ ಮಾಡಿದ್ದೇನೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಕಾರ್ಮಿಕರಿದ್ದು ಅವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಇದು ಸಹಕಾರಿಯಾಗಲಿದೆ. ಮನವಿಗೆ ಸಕಾರಾತ್ಮಕವಾಗಿ ಸ್ಪಂದನೆ ದೊರಕಿದೆ.
ಅಶೋಕ್ ರೈ, ಶಾಸಕರು ಪುತ್ತೂರು










