ರಾಮಕುಂಜ: ಭಾರೀ ಗಾಳಿ ಮಳೆಗೆ ವ್ಯಾಪಕ ಕೃಷಿ ಹಾನಿ

0

ರಾಮಕುಂಜ: ಕಡಬ ತಾಲೂಕಿನ ವಿವಿಧ ಕಡೆಗಳಲ್ಲಿ ಮೇ.8ರಂದು ಸಂಜೆ ಭಾರೀ ಗಾಳಿ ಹಾಗೂ ಮಳೆ ಬಂದಿದ್ದು ವ್ಯಾಪಕ ಕೃಷಿ ಹಾನಿ ಸಂಭವಿಸಿದೆ. ಹಲವು ಕಡೆಗಳಲ್ಲಿ ವಿದ್ಯುತ್ ತಂತಿಗಳ ಮೇಲೆ ಮರಬಿದ್ದ ಪರಿಣಾಮ ವಿದ್ಯುತ್ ಕಂಬಗಳಿಗೂ ಹಾನಿಯಾಗಿದ್ದು ವಿದ್ಯುತ್ ಸಂಚಾರದಲ್ಲೂ ಅಡಚಣೆ ಉಂಟಾಗಿದೆ.

ಭಾರೀ ಗಾಳಿ ಹಾಗೂ ಮಳೆಗೆ ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಅಲ್ಲಲ್ಲಿ ಮರಗಳು ಬಿದ್ದು ಸಂಚಾರಕ್ಕೆ ತೊಡಕುಂಟಾಗಿತ್ತು. ಕಡಬ, ಕುಟ್ರುಪ್ಪಾಡಿ, ಬಲ್ಯ, ಪೆರಾಬೆ, ಕುಂತೂರು, ಆಲಂಕಾರು, ರಾಮಕುಂಜ, ಕೊಲ, ನೂಜಿಬಾಳ್ತಿಲ, ಬಿಳಿನೆಲೆ, ಕೊಂಬಾರು ಮುಂತಾದ ಗ್ರಾಮಗಳಲ್ಲಿ ಭಾರೀ ಗಾಳಿ ಮಳೆಯಾಗಿದೆ. ಕೊಲ ಗ್ರಾಮದ ಕೆಮ್ಮಾರ ಬಡಿಲ ನಿವಾಸಿ ಮೋಹನ್‌ದಾಸ್ ಶೆಟ್ಟಿ ಎಂಬವರಿಗೆ ಸೇರಿದ ಕೋಳಿ ಫಾರ್ಮ್ ಕಟ್ಟಡಕ್ಕೆ ಮರಬಿದ್ದು ಛಾವಣಿ ಕುಸಿದಿದೆ. ಮನೆಯ ಪಕ್ಕದ ತೆಂಗಿನ ಮರವೊಂದು ಗಾಳಿಯ ಆರ್ಭಟಕ್ಕೆ ಮುರಿದು ಬಿದ್ದಿದೆ. ಇವರ ತೋಟದಲ್ಲಿ ಐವತ್ತಕ್ಕೂ ಹೆಚ್ಚು ಅಡಕೆ ಮರಗಳು ಧರೆಗೆ ಉರುಳಿವೆ. ಮಳೆ ಅನಾಹುತದಿಂದಾಗಿ ಮೋಹನ್‌ದಾಸ್ ಶೆಟ್ಟಿಯವರಿಗೆ ಲಕ್ಷಾಂತರ ರೂ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಕೆಮ್ಮಾರ ವ್ಯಾಪ್ತಿಯ ಹಲವು ಕಡೆಗಳಲ್ಲಿ ಅಡಿಕೆ ಕೃಷಿಗೆ ಹಾನಿ ಸಂಭವಿಸಿದೆ. ಪೆರಾಬೆ ಗ್ರಾಮದ ಮೂಲೆತ್ತಮಜಲು ಸರೋಜಿನಿ ಎಂಬವರಿಗೆ ಸೇರಿದ ಐವತ್ತಕ್ಕೂ ಹೆಚ್ಚು ಅಡಕೆ ಮರಗಳು ನಾಶವಾಗಿವೆ. ಕಡಬ ಸಮೀಪದ ಕೋಡಿಂಬಾಳ ಗ್ರಾಮದ ಹಲವೆಡೆ ಮರಗಳು ವಿದ್ಯುತ್ ಕಂಬಕ್ಕೆ ಬಿದ್ದು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. ಒಟ್ಟಾರೆ ಗಾಳಿ ಮಳೆಯ ಅಬ್ಬರಕ್ಕೆ ಹಲವಾರು ರೈತರಿಗೆ, ಮೆಸ್ಕಾಂಗೆ ಇಲಾಖೆಗೆ ಲಕ್ಷಾಂತರ ರೂ ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here