ಪುತ್ತೂರಿನಲ್ಲಿ ಉಚಿತ ವಸಂತ ವೇದಪಾಠ ಶಿಬಿರದ ಸಮಾರೋಪ

0

‘ಪೋಷಕರು ಮಕ್ಕಳನ್ನು ಸುಸಂಸ್ಕೃತರನ್ನಾಗಿ ರೂಪಿಸಬೇಕು’ – ಡಾ. ಧನಂಜಯ ಕುಂಬ್ಳೆ


ಪುತ್ತೂರು: “ಶ್ರೇಷ್ಠ ವಿಚಾರಗಳನ್ನು ಗಳಿಸಿಕೊಳ್ಳುವ ಕಾರ್ಯ ಉಪನಯನ ಸಂಸ್ಕಾರದ ನಂತರ ಆರಂಭವಾಗುತ್ತದೆ. ಪೋಷಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರಗಳನ್ನು ನೀಡಿ ಬದುಕಿನಲ್ಲಿ ಮುನ್ನಡೆಯಲು ಪ್ರೇರೇಪಿಸಬೇಕು” ಎಂದು ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ಹೇಳಿದರು.

ಅವರು ಪುತ್ತೂರಿನ ಮುಕ್ರಂಪಾಡಿಯ ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ದ್ವಾರಕಾ ಪ್ರತಿಷ್ಠಾನ ಪುತ್ತೂರು ಆಶ್ರಯದಲ್ಲಿ, ಕೃಷ್ಣಭಟ್ಟ ಪ್ರತಿಷ್ಠಾನ ಚೂಂತಾರು ಸಹಕಾರದಲ್ಲಿ ಮೇ.10ರಂದು ನಡೆದ ಐದನೇ ವರ್ಷದ ಉಚಿತ ವಸಂತ ವೇದಪಾಠ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

“ನಮ್ಮ ಪಠ್ಯಕ್ರಮಗಳಲ್ಲಿ ವೇದಮಂತ್ರಗಳ ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ಸೇರ್ಪಡೆಗೊಳಿಸುವುದು ಅತ್ಯಗತ್ಯ. ನಾವೆಲ್ಲರೂ ಸಂಘಟಿತರಾಗಿ ಒಳ್ಳೆಯ ಚಟುವಟಿಕೆಗಳನ್ನು ಹಮ್ಮಿಕೊಂಡು ನಮ್ಮ ಪ್ರದೇಶಗಳನ್ನು ಸುಸಂಸ್ಕೃತವಾಗಿ ರೂಪಿಸಬೇಕು” ಎಂದು ಕರೆ ನೀಡಿದರು.

‘ಮಕ್ಕಳು ಸುಶಿಕ್ಷಿತರಾದರೆ ಸಮಾಜ ಜಾಗೃತ’:
ಸಮಾರಂಭದಲ್ಲಿ ಮಾತನಾಡಿದ ಹಿರಿಯ ಭೂಗರ್ಭಶಾಸ್ತ್ರಜ್ಞ ಮಧುರಕಾನನ ಗಣಪತಿ ಭಟ್ಟ, “ಮಕ್ಕಳು ಸುಶಿಕ್ಷಿತರಾದರೆ ಸಮಾಜ ಜಾಗೃತವಾದಂತೆ. ಸಮಾಜ ಜಾಗೃತಗೊಂಡರೆ ದೇಶ ಪ್ರಗತಿಯೆಡೆಗೆ ಸಾಗಬಹುದು. ಕಲಿಕೆ, ನಿತ್ಯದ ಅನುಷ್ಠಾನಗಳೊಂದಿಗೆ ಕೃಷಿ ಕಾರ್ಯದಲ್ಲೂ ಆಸಕ್ತಿ ವಹಿಸುವುದು ಮುಖ್ಯ” ಎಂದರು.ವೈದಿಕ ಹಾಗೂ ಶಿಬಿರದ ವೇದಾಧ್ಯಾಪಕ ದುರ್ಗಾಭಿರಾಮ ಭಟ್ಟ ಮಾತನಾಡಿ, “ವೇದವಿದ್ಯೆ ಅತ್ಯಂತ ಪವಿತ್ರವಾಗಿದ್ದು ಸದಾಕಾಲ ಅಭ್ಯಾಸ ಮಾಡುವುದು ಅವಶ್ಯಕ. ತಂದೆ-ತಾಯಿಯರ ಆಶೀರ್ವಾದ ಯಶಸ್ಸಿಗೆ ಮುಖ್ಯ” ಎಂದರು.ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ಟ ಅರ್ತ್ಯಡ್ಕ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ಸನ್ಮಾನ-ಅಭಿನಂದನೆ:
ಕಾರ್ಯಕ್ರಮದಲ್ಲಿ ಹಿರಿಯ ವೈದಿಕ ಪರಿಚಾರಕ ಮಾರ್ಗ ತಿರುಮಲೇಶ್ವರ ಭಟ್ಟ ಅವರನ್ನು ಕೃಷ್ಣಭಟ್ಟ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ವೇದ ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರ ವಿತರಿಸಲಾಯಿತು. ಗುರುವೃಂದ, ಸಂಯೋಜಕರು, ಪಾಕಶಾಸ್ತ್ರಜ್ಞರು ಹಾಗೂ ಶಿಬಿರದ ಯಶಸ್ಸಿಗೆ ಸಹಕರಿಸಿದವರನ್ನು ಗೌರವಿಸಲಾಯಿತು.ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕೆ ನಡೆಯಿತು.ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ ಸ್ವಾಗತಿಸಿ, ಕಾರ್ಯದರ್ಶಿ ಗಣರಾಜ ಕುಂಬ್ಳೆ ವಂದಿಸಿದರು. ವೇದಾಧ್ಯಾಪಕ ನವೀನಕೃಷ್ಣ ಎಸ್. ಉಪ್ಪಿನಂಗಡಿ ನಿರೂಪಿಸಿದರು.

LEAVE A REPLY

Please enter your comment!
Please enter your name here