ಮೇ 20ಕ್ಕೆ ದ.ಕ.ದಲ್ಲಿ ಮೆಡಿಕಲ್ ಶಾಪ್ ಬಂದ್: ಆನ್‌ಲೈನ್ ಔಷಧ ಮಾರಾಟಕ್ಕೆ ವಿರೋಧ

0

ಮಂಗಳೂರು: ಆನ್‌ಲೈನ್ ಮೂಲಕ ಔಷಧ ಮಾರಾಟವನ್ನು ವಿರೋಧಿಸಿ ಮೇ 20ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಮೆಡಿಕಲ್ ಶಾಪ್‌ಗಳನ್ನು ಬಂದ್ ಮಾಡಲಾಗುವುದು ಎಂದು ದ.ಕ. ಔಷಧ ವ್ಯಾಪಾರಿಗಳ ಸಂಘ ಪ್ರಕಟಿಸಿದೆ.

ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ, ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಆ್ಯಂಡ್ ಡ್ರಗ್ಗಿಸ್ಟ್ಸ್ ಹಾಗೂ ಕರ್ನಾಟಕ ಕೆಮಿಸ್ಟ್ಸ್ ಆ್ಯಂಡ್ ಡ್ರಗ್ಗಿಸ್ಟ್ಸ್ ಅಸೋಸಿಯೇಶನ್ ಕರೆಯಂತೆ ರಾಷ್ಟ್ರವ್ಯಾಪಿ ಈ ಬಂದ್ ನಡೆಯಲಿದೆ. ಸೌತ್ ಕೆನರಾ ಕೆಮಿಸ್ಟ್ಸ್ ಆ್ಯಂಡ್ ಡ್ರಗ್ಗಿಸ್ಟ್ಸ್ ಅಸೋಸಿಯೇಶನ್‌ನ ಎಲ್ಲ ಸದಸ್ಯರು ಬಂದ್‌ಗೆ ಬೆಂಬಲಿಸಲಿದ್ದು, ಮೇ 20ರಂದು 24 ಗಂಟೆಗಳ ಕಾಲ ಮೆಡಿಕಲ್ ಬಂದ್ ಇರಲಿದೆ ಎಂದರು.

ಅನಿಯಂತ್ರಿತ ಆನ್‌ಲೈನ್ ಔಷಧ ಮಾರಾಟದಿಂದ ಶೆಡ್ಯೂಲ್ ಡ್ರಗ್ಸ್ ದುರುಪಯೋಗ, ಸ್ವಯಂ ಚಿಕಿತ್ಸೆ, ನಕಲಿ ಔಷಧ ಚೀಟಿಗಳ ಮೂಲಕ ಔಷಧ ಖರೀದಿಯ ಅಪಾಯವಿದೆ. ಆನ್‌ಲೈನ್ ಮೂಲಕ ಪೂರೈಕೆಯಾಗುವ ಔಷಧ ಅಸುರಕ್ಷಿತ ದಾಸ್ತಾನು ಮತ್ತು ಪೂರೈಕೆಯಾಗುವ ಸಾಧ್ಯತೆಯಿದೆ. ಆನ್‌ಲೈನ್ ಮೂಲಕ ಖರೀದಿಸಿದ ಔಷಧಗಳ ದುರುಪಯೋಗ ಉಂಟಾದಾಗ ಮೆಡಿಕಲ್ ಶಾಪ್‌ಗಳ ಬಗ್ಗೆ ಅನುಮಾನ ಮೂಡುತ್ತದೆ ಎಂದು ಅವರು ಆರೋಪಿಸಿದರು.ಈ ಬಗ್ಗೆ ಕೇಂದ್ರ ಸರಕಾರಕ್ಕೆ ಎಐಒಸಿಡಿ ವತಿಯಿಂದ ಹಲವಾರು ಬಾರಿ ಮನವಿ ನೀಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ವೆಬ್‌ಸೈಟ್ ಪೋರ್ಟಲ್ ಮೂಲಕ ಆನ್‌ಲೈನ್ ಮಾದರಿಯಲ್ಲಿ ಔಷಧ ಮಾರಾಟ ನಿಷೇಧಕ್ಕೆ ಆಗ್ರಹಿಸಿ ಬಂದ್ ನಡೆಸಲಾಗುತ್ತಿದೆ ಎಂದು ಅರುಣ್ ಶೆಟ್ಟಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಡಾ. ಎ.ಕೆ. ಜಮಾಲ್, ಉಪಾಧ್ಯಕ್ಷ ಅಮೃತ್ ಕಿರಣ್ ರೈ, ಜತೆ ಕಾರ್ಯದರ್ಶಿ ಶ್ರೀನಿವಾಸ ಭಟ್, ಕೋಶಾಧಿಕಾರಿ ಚಂದ್ರಶೇಖರ ಭಟ್, ಸಮಿತಿ ಸದಸ್ಯರಾದ ಸುರೇಶ್ ಆಳ್ವ, ಶರಣಂ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here