






ಪುತ್ತೂರು: ನಕಲಿ ದಾಖಲೆ ಸೃಷ್ಟಿಸಿ ಕೆಂಪುಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದ ಘಟನೆ ಮೇ.16ರಂದು ಸಂಪ್ಯ ಪೊಲೀಸ್ ಠಾಣೆಯ ಮುಂದೆ ನಡೆದಿದೆ.


ಸಂಪ್ಯ ಪೊಲೀಸರು ಠಾಣೆಯ ಮುಂದೆ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಸಂಟ್ಯಾರು ಕಡೆಯಿಂದ ಬರುತ್ತಿದ್ದ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ ಲಾರಿ ಚಾಲಕ ಕೇರಳದ ಪೆರ್ಲ ಎಂಬಲ್ಲಿಂದ ಬೆಳ್ತಂಗಡಿ ತಾಲೂಕಿನ ಉಜಿರೆಗೆ ಕೆಂಪುಕಲ್ಲು ಸಾಗಾಟ ಮಾಡುವುದಾಗಿ ತಿಳಿಸಿದ್ದರು. ಈ ಕುರಿತು ಪರವಾನಿಗೆ ತಪಾಸಣೆ ಮಾಡಿದಾಗ ಕೆಂಪು ಕಲ್ಲು ಸಾಗಾಟದ ಇಪಾಸ್ನಲ್ಲಿ ದಿನಾಂಕ ಮತ್ತು ಸಮಯವನ್ನು ಅಳಿಸಿ ಹಾಕಿ ಅಪ್ರಾಮಾಣಿಕವಾಗಿ ಸುಳ್ಳು ದಾಖಲೆ ಪತ್ರವನ್ನು ಅಥವಾ ಹೊಸ ವಿದ್ಯುನ್ಮಾನ ದಾಖಲೆಯನ್ನು ಸೃಷ್ಟಿಸಿ ಬೆಲೆ ಬಾಳುವ ರವಾನೆಯ ಪತ್ರದ ಪ್ರತಿರೂಪ ಸಿದ್ಧಪಡಿಸಿ ಕೆಂಪುಕಲ್ಲುಗಳನ್ನು ಸಾಗಾಟ ಮಾಡಿ ಅಪರಾಧ ಎಸಗಿರುವುದು ಬೆಳಕಿಗೆ ಬಂದಿದ್ದು, ತಕ್ಷಣ ಲಾರಿಯನ್ನು ವಶಕ್ಕೆ ಪಡೆದು ಆರೋಪಿಗಳಾದ ಲಾರಿ ಮಾಲಕ ಇಸಾಕ್ ಟಿ., ಲಾರಿಯ ಚಾಲಕ ಸತೀಶ್, ಕೋರೆಯ ಮಾಲಕ ಜೋಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.













