







ಪುತ್ತೂರು: ಆಹಾರ ಧಾನ್ಯ ವಿತರಿಸುವ ಪಡಿತರ (ರೇಷನ್) ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಗಳು ತಲೆದೋರಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಪಡಿತರ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ ತೀವ್ರಗೊಂಡಿದ್ದು, ಗಂಟೆಗಟ್ಟಲೆ ಸರತಿಯಲ್ಲಿ ನಿಂತರೂ ರೇಷನ್ ಸಿಗದೆ ಜನರು ಬರಿಗೈಲಿ ಮನೆಗೆ ಮರಳುವಂತಾಗಿದೆ. ಒಂದೊಂದು ರೇಷನ್ ಅಂಗಡಿಗಳಲ್ಲಿ ಸಾವಿರಕ್ಕೂ ಅಧಿಕ ಕಾರ್ಡ್‌ದಾರರಿದ್ದು ದಿನದಲ್ಲಿ ಕೇವಲ ಬೆರಳೆಣಿಕೆಯ ಕಾರ್ಡ್‌ದಾರರಿಗೆ ಮಾತ್ರ ಆಹಾರ ಧಾನ್ಯಗಳನ್ನು ವಿತರಿಸಲು ಸಾಧ್ಯವಾಗುತ್ತಿದೆ. ಇದರಿಂದಾಗಿ ಜನರು ಕೂಲಿ ಕೆಲಸ ಬಿಟ್ಟು ರೇಷನ್ ಅಂಗಡಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.



ಎರಡು ಬಾರಿ ಬಯೋಮೆಟ್ರಿಕ್, ಹೆಚ್ಚಿದ ತಲೆನೋವು
ಸರ್ವರ್ ಸಮಸ್ಯೆಯ ನಡುವೆ, ಪಡಿತರ ಪಡೆಯಲು ಎರಡು ಬಾರಿ ಬಯೋಮೆಟ್ರಿಕ್ (ಹೆಬ್ಬೆಟ್ಟಿನ ಗುರುತು) ನೀಡಬೇಕಾಗಿರುವುದರಿಂದ ಮತ್ತಷ್ಟು ತೊಂದರೆಯಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಪೋರ್ಟಲ್ ಮುಖಾಂತರ ಪಡಿತರ ಚೀಟಿದಾರರಿಗೆ ನೀಡಲಾಗುತ್ತಿರುವ ಮೇ ಮತ್ತು ಜೂನ್ ತಿಂಗಳ ಅಕ್ಕಿಯನ್ನು ಮೇ ತಿಂಗಳಿನಲ್ಲಿಯೇ ವಿತರಣೆ ಮಾಡುತ್ತಿರುವುದರಿಂದ ಪ್ರತಿ ಕಾರ್ಡ್‌ದಾರರು ಎರಡು ಬಾರಿ ಬಯೋ ದೃಢೀಕರಣ ನೀಡಬೇಕಾಗಿದೆ. ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಯಡಿ ಮೇ ಹಾಗೂಜೂನ್ ತಿಂಗಳಿನಲ್ಲಿ ನೀಡಲಾಗುತ್ತಿರುವ ಪ್ರತಿ 5 ಕೆ.ಜಿ ಅಕ್ಕಿ ಜೂನ್ ತಿಂಗಳಿನಲ್ಲಿ ವಿತರಣೆಯಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ. “ಒಂದೇ ಬಾರಿ ಹೆಬ್ಬೆಟ್ಟಿನ ಗುರುತು ಮ್ಯಾಚ್ ಆಗುವುದು ಕಷ್ಟವಿರುವಾಗ, ಈಗ ಎರಡು ಬಾರಿ ಬಯೋಮೆಟ್ರಿಕ್ ಇರುವುದರಿಂದ ವೃದ್ಧರು ಮತ್ತು ಕೂಲಿ ಕಾರ್ಮಿಕರು ದಿನವಿಡೀ ರೇಷನ್ ಅಂಗಡಿಯಲ್ಲೇ ಕಳೆಯುವಂತಾಗಿದೆ,” ಎಂದು ಸ್ಥಳೀಯ ಗ್ರಾಹಕರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಸರ್ವರ್ ವಿಳಂಬದಿಂದಾಗಿ ಪಡಿತರ ವಿತರಕರು (ಡೀಲರ್ಸ್) ಕೂಡ ಇಕ್ಕಟ್ಟಿಗೆ ಸಿಲುಕಿದ್ದಾರೆ. ದಿನವೊಂದಕ್ಕೆ ನೂರಾರು ಜನರಿಗೆ ವಿತರಿಸಬೇಕಾದ ಜಾಗದಲ್ಲಿ, ಕೇವಲ 20-30 ಜನರಿಗೆ ಮಾತ್ರ ರೇಷನ್ ನೀಡಲು ಸಾಧ್ಯವಾಗುತ್ತಿದೆ. ಈ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ನಾವು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಒಂದೆರಡು ದಿನಗಳಲ್ಲಿ ಸರ್ವರ್ ಸಮಸ್ಯೆ ಸರಿಯಾಗುತ್ತದೆ ಎಂದು ಉತ್ತರಿಸುತ್ತಿದ್ದಾರೆ.



ಕೇಂದ್ರ ಸರಕಾರದಿಂದ ನೀಡಲಾಗುವ ಮೇ ಮತ್ತು ಜೂನ್ ತಿಂಗಳ ಅಕ್ಕಿಯನ್ನು ಮೇ ತಿಂಗಳಿನಲ್ಲಿಯೇ ವಿತರಣೆ ಮಾಡುತ್ತಿರುವುದರಿಂದ ಕಾರ್ಡ್‌ದಾರರು ಎರಡು ಬಾರಿ ಬಯೋ ದೃಢೀಕರಣ ಮಾಡಬೇಕಾಗುತ್ತದೆ. ಮೇ ತಿಂಗಳ ಬಯೋ ಮೆಟ್ರಿಕ್ ದೃಢೀಕರಣವಾದ ಬಳಿಕ ಜೂನ್ ತಿಂಗಳ ಬಯೋ ಪಡೆಯಲಾಗುತ್ತದೆ. ಮೇ ತಿಂಗಳ ಬಯೋ ಮೆಟ್ರಿಕ್ ದೃಢೀಕರಣಗೊಂಡು ಜೂನ್ ತಿಂಗಳ ಬಯೋ ಆಗದಿದ್ದರೆ ಮತ್ತೆ ಶುರುವಿನಿಂದ ಬಯೋ ಪಡೆಯಬೇಕಾಗಿದೆ. ಇದರಿಂದಾಗಿ ಪಡಿತರ ಚೀಟಿದಾರರು ಅಲೆದಾಡುವಂತಾಗಿದೆ.









