







ಬಡ ಜನರು ಹುಡುಕಿಕೊಂಡು ಬರುವಂತಹ ಆಸ್ಪತ್ರೆಯನ್ನಾಗಿ ಮಾಡೋಣ -ಮೈಕೆಲ್ ಡಿ ಸೋಜಾ


ಪುತ್ತೂರು: 1971ರಲ್ಲಿ ಮೊನ್ಸಿಂಜೊರ್ ಅಂತೋನಿ ಪತ್ರಾವೋ ಅವರಿಂದ ಸ್ಥಾಪನೆಗೊಂಡಿರುವ ಮೈಸೂರು ಪ್ರಾಂತ್ಯದ ಸೇಂಟ್ ಜೋಸೆ- ಆ- ತಾರ್ಬ್ಸ್ ಭಗಿನಿಯರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಸುಮಾರು 54 ವರುಷಗಳಿಂದ ಅತ್ಯುನ್ನತ ಆರೋಗ್ಯ ಸೇವೆಯನ್ನು ಒದಗಿಸುತ್ತಿರುವ ದರ್ಬೆಯ ಫಾ.ಪತ್ರಾವೋ ಆಸ್ಪತ್ರೆ ಇದೀಗ ಅತ್ಯಾಧುನಿಕ ಸೌಕರ್ಯದೊಂದಿಗೆ, ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಸಲುವಾಗಿ ನವೀಕರಣಗೊಂಡು ಮೇ.21ರಂದು ಅದ್ಧೂರಿಯಾಗಿ ಶುಭಾರಂಭಗೊಂಡಿತು.




ಸೇಂಟ್ ಜೋಸೆಫ್ ಆಫ್ ತಾರ್ಬ್ಸ್ ನ ಭಗಿನಿಯರ ಸುಪೀರಿಯರ್ ಜನರಲ್ ಸಿಸ್ಟರ್ ಜೀಸಸ್ ಸೆವಾಲೋಸ್ ಇವರು ಆಸ್ಪತ್ರೆಯ ಉದ್ಘಾಟನೆಯನ್ನು ನೆರವೇರಿಸಿ, ಶುಭ ಹಾರೈಸಿದರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು (ವಿ.ಜಿ) ಮ್ಯಾಕ್ಸಿಮ್ ಎಲ್ ನೊರೊನ್ಹಾ ಅವರು ಶುಭಾಶೀರ್ವಾದವನ್ನು ನೀಡಿ, ಆ ಬಳಿಕ ಪವಿತ್ರ ಜಲವನ್ನು ಸಂಪ್ರೋಕ್ಷಣೆ ಮಾಡಿದರು. ಈ ವೇಳೆ ಅತಿಥಿಗಳಾಗಿ ಪುತ್ತೂರು ಮಾಯಿದೇ ದೇವುಸ್ ಚರ್ಚ್ನ ಧರ್ಮಗುರು ರೆ.ಫಾ.ಡಾ. ಜೆ ಬಿ ಸಲ್ಡಾನ್ಹಾ ಮತ್ತು ದಾನಿ ಮೈಕೆಲ್ ಡಿಸೋಜಾ ಸಹಿತ ವಿವಿಧ ಕ್ರೈಸ್ತ ದೇವಾಲಯಗಳ ಧರ್ಮಗುರುಗಳ ಸಹಿತ ಸಮಾಜ ಬಾಂಧವರು, ಹಿತೈಷಿಗಳು ಹಾಜರಿದ್ದರು.

ಬಳಿಕ ಜರುಗಿದ ಸಭಾ ಕಾರ್ಯಕ್ರಮದಲ್ಲಿ ದಾನಿ ಮೈಕೆಲ್ ಡಿಸೋಜಾ ರವರು ಮಾತನಾಡಿ, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಯಾವುದೇ ಅವಕಾಶವನ್ನು ನಾವು ಎಂದಿಗೂ ಕಳೆದುಕೊಳ್ಳಬಾರದು. ಆ ಸೇವೆಯ ಮೂಲಕ ನಾವು ಸಂತೋಷವಾಗಿರುತ್ತೇವೆ, ಅವರೂ ಸಂತೋಷವಾಗಿರುತ್ತಾರೆ. ಜೊತೆಗೆ ದೇವರ ಆಶೀರ್ವಾದವು ಖಂಡಿತವಾಗಿಯೂ ಇರುತ್ತದೆ ಎಂದ ಅವರು, ನಾನು ಪುತ್ತೂರಿನಲ್ಲಿದ್ದಾಗ ನನ್ನ ಹಿರಿಯ ಮಗಳು ನತಾಶಾ ಇಲ್ಲೇ ಜನಿಸಿದಳು. ಹಾಗಾಗಿ ಆ ಒಂದು ಭಾವನಾತ್ಮಕ ಸಂಬಂಧವೂ ಇಲ್ಲಿದೆ. ಮತ್ತು ಇಲ್ಲಿನ ಮರೆಯಲು ಸಾಧ್ಯವಿಲ್ಲವೆಂದು ನೆನಪು ಮಾಡಿಕೊಂಡರು.

ನನ್ನ ಕುಟುಂಬ, ನಮ್ಮ ಚಾರಿಟಿ ಉಪಕ್ರಮದ ಸದಸ್ಯರು ಮತ್ತು ಎಲ್ಲಾ ಸಮುದಾಯದ ಸದಸ್ಯರ ಪರವಾಗಿ, ನಾನು ಸಿಸ್ಟರ್ ಡಾ.ಸಿ ಜಾನಾ ಅವರಿಗೆ ಮತ್ತು ಈಗ ಇದರ ಉಸ್ತುವಾರಿ ವಹಿಸಿಕೊಂಡಿರುವ ಇತರ ಮೇಲಾಽಕಾರಿಗಳಿಗೆ ಜನಸೇವೆ ಮಾಡಲು ಶುಭ ಹಾರೈಸುತ್ತೇನೆ. ನಾವು ನಿಮ್ಮೊಂದಿಗಿದ್ದೇವೆ. ಸಿಸ್ಟರ್, ನೀವು ಮುಂದೆ ಯಾವುದೇ ರೀತಿಯ ವಿಸ್ತರಣೆಯನ್ನು ಮಾಡಲು ಬಯಸಿದರೂ, ನಾವು ಅದರಲ್ಲಿ ನಿಮ್ಮ 20% ಪಾಲುದಾರರಾಗಿರುತ್ತೇವೆ ಎಂದು ಹೇಳಿದರು.

ನಿಮ್ಮ ಕನಸು ಏನೇ ಇರಲಿ, ಅದನ್ನು ನಿರ್ಮಿಸಲು ನೀವು ಬಯಸಿದರೆ, ಸುಮಾರು 30 ಕೋಟಿ ರೂಪಾಯಿಗಳವರೆಗಿನ ಯೋಜನೆ ಇರಲಿ, ಅದು 50 ಹಾಸಿಗೆಗಳ ಆಸ್ಪತ್ರೆಯಾಗಿರಲಿ ಅಥವಾ ಬೇರೆ ಏನೇ ಇರಲಿ ನಾವು ನಿಮ್ಮ 20% ಪಾಲುದಾರರಾಗಿರುತ್ತೇವೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಮತ್ತು ಸಮುದಾಯವೂ ನಮ್ಮೊಂದಿಗಿರುತ್ತದೆ. ನಿಮ್ಮ ಸಮುದಾಯವೂ ಜೊತೆಗಿರುತ್ತದೆ. ನಾವು ಈ ಆಸ್ಪತ್ರೆಯನ್ನು ಬಡ ಜನರಿಗೆ ಅತ್ಯಂತ ಪ್ರಮುಖವಾದ ಮತ್ತು ಹುಡುಕಿಕೊಂಡು ಬರುವಂತಹ ಆಸ್ಪತ್ರೆಯನ್ನಾಗಿ ಮಾಡೋಣ ಮತ್ತು ಫಾದರ್ ಮುಲ್ಲರ್ ಆಸ್ಪತ್ರೆಯೊಂದಿಗೆ ನಿಯಮಿತವಾಗಿ ನಮ್ಮ ಸಂಪರ್ಕವನ್ನು ಇಟ್ಟುಕೊಳ್ಳೋಣ. ಆ ರೀತಿಯ ಆತ್ಮವಿಶ್ವಾಸ ಮೂಡಿಬರಲಿ ಮತ್ತು ದೇವರು ಎಲ್ಲರಿಗೂ ಶುಭವನ್ನುಂಟು ಮಾಡಲಿಯೆಂದು ಹೇಳಿದರು.
ಅಸಿಸ್ಟೆಂಟ್ ಸುಪೀರಿಯರ್ ಜನರಲ್ ಸಿಸ್ಟರ್ ಜೂಲಿಯಾನ ಡಿ ಸೋಜಾ , ಮಾಜಿ ಪ್ರಾಂತ್ಯಧಿಕಾರಿ ಸಿಸ್ಟರ್ ಜಯರಾಣಿ , ಸಹಾಯಕ ಪ್ರಾಂತ್ಯಾಧಿಕಾರಿ ಸಿಸಿಲಿ ಜೋಸೆಫ್, ಫಾ.ಪತ್ರಾವೋ ಆಸ್ಪತ್ರೆಯಲ್ಲಿ 40 ವರುಷಗಳ ಕಾಲ ಸೇವೆ ಸಲ್ಲಿಸಿದ್ದ ಡಾ. ಸಿಸ್ಟರ್ ಪ್ರೋರಿನಾ ಮಥಾಯಿಸ್ , ಡಾ.ದೀಪಕ್ ರೈ ಶುಭ ಹಾರೈಸಿದರು. ಬಳಿಕ ಎಲ್ಲಾ ಅತಿಥಿಗಳನ್ನು ಸನ್ಮಾನಿಸಲಾಯಿತು. ಸಂತ ಜೋಸೆಫ್ ರ ತಾರ್ಬ್ಸ್ ನ ಸಂಸ್ಥೆ ಅಮೇರಿಕಾ ದಿಂದ ಸಿಸ್ಟರ್ ವಿಟಾ ಲೋಬೊ, ಯುಗಾಂಡದಿಂದ ಸಿಸ್ಟರ್ ಕ್ರಿಸ್ಟಿನಾ ಗೋಮ್ಸ್ , ಆಸ್ಟ್ರೀಯಾ ದಿಂದ ಸಿಸ್ಟರ್ ಮಾರ್ಸೆಲಿನ್ ಫೆರಾವೊ ಹಾಗೂ ಮೈಸೂರು,ಮಡಿಕೇರಿ ಮತ್ತು ಮಂಗಳೂರಿನಿಂದಲೂ
ತಾರ್ಬ್ಸ್ ನ ಪ್ರತಿನಿಧಿಗಳು ಆಗಮಿಸಿ ಶುಭ ಹಾರೈಸಿದರು.
ಆಸ್ಪತ್ರೆ ಆರಂಭದ ದಿನಗಳಲ್ಲಿ ಸೇವೆ ಸಲ್ಲಿಸಿದ್ದ ಸಿಸ್ಟರ್ ಮರ್ಸಿ ಜೆಕಾಬ್ ಮತ್ತು ಸಿಸ್ಟರ್ ಮಾರಿ ಸೇಲಿನಾ ಇವರುಗಳು ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಹಾರೈಸಿದರು. ತದನಂತರ ಕಾಮಗಾರಿ ನಿರ್ವಹಿಸಿದ ಜೆ ಜಿ ಕೆ ಬೆಂಗಳೂರು ಇದರ ಸೆಬೆಸ್ಟಿನ್ ಮತ್ತು ದಿನೇಶ್ ಜಾರ್ಜ್ ಸಹಿತ ಸೈಟ್ ಇಂಜಿನಿಯರ್ ದಿನೇಶ್ ಕಾಂಟ್ರಾಕ್ಟರ್ ಪ್ರಮೋದ್ ಇವರುಗಳನ್ನು ಸನ್ಮಾನಿಸಲಾಯಿತು. ಈ ವೇಳೆ ವಿವಿಧ ಧಾರ್ಮಿಕ ಮತ್ತು ಶಿಕ್ಷಣ ಸಂಸ್ಥೆಯ ಧರ್ಮಗುರುಗಳು , ಭಗಿನಿಯರು, ಉದ್ಯಮಿಗಳು ಹಾಗೂ ವೈದ್ಯರಾದ ಡಾ. ಎ.ಕೆ.ರೈ, ಡಾ. ಚಂದ್ರಶೇಖರ್ ರಾವ್, ಡಾ. ಶ್ರೀ ದೇವಿ ವಿಕ್ರಂ, ಡಾ.ಕಿಶೋರ್ ಮಯ್ಯ, ಡಾ. ಸುಲೇಖಾ ಭಾರದ್ವಾಜ್ ಮತ್ತು ಡಾ.ಪ್ರಭು ಎನ್ ಹಾಗೂ ಡಾ.ಶ್ರೀಪತಿ ರಾವ್ ಸಹಿತ ಗಣ್ಯ ಅತಿಥಿಗಳು ಹಾಜರಿದ್ದರು.
ಆಸ್ಪತ್ರೆಯ ಆಡಳಿತಾಧಿಕಾರಿಣಿ ಸಿಸ್ಟರ್ ಪ್ರೋರಾ ಮೊರಾಸ್ ಸ್ವಾಗತಿಸಿ, ಸಂತ ಜೋಸೆಫ್ ಕಾನ್ವೆಂಟ್ ನ ಸುಪೀರಿಯರ್ ಸಿಸ್ಟರ್ ಜಾನೆಟ್ ಕುಟಿನ್ಹಾ ಸನ್ಮಾನ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಸಿಸ್ಟರ್ ಜನರಲ್ ಸರ್ಜನ್ ಡಾ. ಸಿ.ಜಾನಾ ವಂದಿಸಿ , ಸಿಸ್ಟರ್ ತೆರೆಸಾ ಕಾರ್ಯಕ್ರಮ ನಿರ್ವಹಿಸಿದರು.
ಸೌಲಭ್ಯಗಳು
ಉತ್ಕೃಷ್ಟ ಗುಣಮಟ್ಟದ, ಅತ್ಯಾಧುನಿಕ ಸೌಕರ್ಯವನ್ನೆಲ್ಲಾ ಅಳವಡಿಸಿಕೊಂಡು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಹೊಸ ICU, ಆಪರೇಷನ್ ಥಿಯೇಟರ್, Digital Xray. ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್, NICU, ನವೀಕೃತ ಹೆರಿಗೆ ಕೊಠಡಿ, ಲ್ಯಾಬ್, ಫಾರ್ಮಸಿ, ಎಮರ್ಜೆನ್ಸಿ ವಾರ್ಡ್ ಮತ್ತು ಡಿ ಆ್ಯಡಿಕ್ಷನ್ ಸೌಲಭ್ಯವನ್ನೆಲ್ಲಾ ಕಲ್ಪಿಸಲಾಗಿದೆ










