ನರೇಂದ್ರ ಪ.ಪೂ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರಾರಂಭೋತ್ಸವ

0

ಪುತ್ತೂರು : ವಿದ್ಯಾರ್ಥಿ ಸಾಧಕನಾಗಬೇಕಾದರೆ ಒಳ್ಳೆಯ ಹವ್ಯಾಸಗಳ ಜೊತೆಗೆ ಕ್ರಿಯಾಶೀಲರಾಗಿ ಅಭ್ಯಾಸದ ಕಡೆ ಗಮನ ಹರಿಸಿದರೆ ಮಾತ್ರ ಉತ್ತಮ ಭವಿಷ್ಯತ್ತಿಗೆ ನಾಂದಿಯಾಗುತ್ತದೆ.ದೇಶದ ಭವಿಷ್ಯವು ಯುವ ಶಕ್ತಿಯನ್ನು ಅವಲಂಬಿಸಿದೆ.ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವ ಜನಾಂಗವು ಅತ್ಯಾಧುನಿಕ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರಬೇಕು ಹಾಗೂ ತನ್ನಲ್ಲಿರುವ ದೌರ್ಬಲ್ಯವನ್ನು ಅರಿತುಕೊಂಡು ಶಕ್ತಿ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು.ಸರಿಯಾದ ಸಮಯದಲ್ಲಿ ಸರಿಯಾದ ಶಿಕ್ಷಣ ದೊರಕಿದಾಗಒಬ್ಬ ಸಾಮಾನ್ಯ ವ್ಯಕ್ತಿಯು ಅಸಾಮಾನ್ಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ.ಎಂದು ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಹೇಳಿದರು.


ನರೇಂದ್ರ ಪ.ಪೂ ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರಾರಂಭೋತ್ಸವ ಮತ್ತು ಇಂಟರ್‌ಲಾಕ್‌ನ್ನು ಅಳವಡಿಸಿ ನವೀಕರಿಸಲಾಗಿರುವ ನೂತನ ಹಂಸಧ್ವನಿ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಸಭಾಂಗಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ ಕೊಳತ್ತಾಯ ರವರು ಮಾತನಾಡುತ್ತಾ, ಬದುಕಿನ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ಉತ್ತಮ ಗುಣಮಟ್ಟದ ಶಿಕ್ಷಣದಿಂದ ಪಡೆಯಲು ಸಾಧ್ಯ.ವಿದ್ಯಾರ್ಥಿಗಳೆಲ್ಲರೂ ವಿದ್ಯೆಯ ಪ್ರಾಮುಖ್ಯತೆಯನ್ನು ಅರಿತುಅದರ ಸದುಪಯೋಗವನ್ನು ಪಡೆಯಬೇಕು.ಈ ಮೂಲಕ ಆ ದೇವರ ಅನುಗ್ರಹ ಪ್ರಾಪ್ತಿಯಾಗಲಿ ಎಂದು ಶುಭಹಾರೈಸಿದರು.


ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ರವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಅನುಸರಿಸಬೇಕಾದ ನಿಯಮಗಳನ್ನು ವಿವರಿಸಿದರು.
ಪ್ರಾರಂಭೋತ್ಸವದ ಅಂಗವಾಗಿ ಗಣಪತಿಹೋಮ ಮತ್ತು ಸರಸ್ವತಿ ಪೂಜೆಯು ಮೇ.25 ರಂದು ಕಶೆಕೋಡಿ ಸೂರ್ಯನಾರಾಯಣ ಭಟ್ ಇವರ ನೇತೃತ್ವದಲ್ಲಿ ನಡೆಯಿತು. ಅವರ ಜೊತೆಗೆ ಹರಿಪ್ರಸಾದ್ ಮತ್ತು ಪ್ರಕಾಶ್ ಇವರು ಸಹಕರಿಸಿದರು. ಪ್ರಥಮ ವರ್ಷದ ಪಿ ಯು ಸಿ ವಿದ್ಯಾರ್ಥಿಗಳಿಗೆ ತಿಲಕ ಧಾರಣೆ ಮಾಡುವುದರ ಮೂಲಕ ಸಂಸ್ಥೆಗೆ ಆತ್ಮೀಯ ವಾಗಿ ಬರಮಾಡಿಕೊಳ್ಳಲಾಯಿತು.ನಂತರದಲ್ಲಿ ವಿದ್ಯಾರ್ಥಿಗಳು ಭಾರತಮಾತೆಗೆ ಪುಷ್ಪಾರ್ಚಣೆ ಮಾಡಿ ನಮಿಸಿದರು.

ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಸಂತೋಷ ಬಿ., ಕೋಶಾಧಿಕಾರಿಗಳಾದ ಸಂಪತ್‌ಕುಮಾರ್, ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು.
ಕಾರ‍್ಯಕ್ರಮದಲ್ಲಿ ಉಪನ್ಯಾಸಕರು, ಪೋಷಕರು,ಸಿಬ್ಬಂದಿ ವರ್ಗ ಮತ್ತು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಉಪನ್ಯಾಸಕ ಮಧುರಾ ಸ್ವಾಗತಿಸಿ,ವಂದಿಸಿದರು.

LEAVE A REPLY

Please enter your comment!
Please enter your name here