ವಿವೇಕಾನಂದ ಸೆಂಟ್ರಲ್ ಸ್ಕೂಲ್, ಕರ್ಣಾಟಕ ಬ್ಯಾಂಕ್ ಸಹಯೋಗ : ತಾಲೂಕಿನ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆಯ ಕುರಿಯ ಅಜಲಾಡಿ ಕೆರೆ ಪುನಶ್ಚೇತನಕ್ಕೆ ಚಾಲನೆ

0

ಪುತ್ತೂರು: ತಾಲೂಕಿನ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆಯ ಕುರಿಯ ಗ್ರಾಮದ ಅಜಲಾಡಿ ಕೆರೆಯ ಪುನಶ್ಚೇತನ ಕಾಮಗಾರಿಯ ಮೊದಲ ಹಂತಕ್ಕೆ ಏಪ್ರಿಲ್ ತಿಂಗಳಲ್ಲಿ ಚಾಲನೆ ನೀಡಲಾಗಿದೆ.

ಸುಮಾರು 3.5 ಎಕರೆ ವ್ಯಾಪ್ತಿಯಲ್ಲಿರುವ ಈ ಕೆರೆಯಲ್ಲಿ ಪ್ರಸ್ತುತ ಗಡಿ ಗುರುತು, ನೀರಿನ ಒಳಹರಿವು ಮತ್ತು ಹೊರಹರಿವಿನ ವ್ಯವಸ್ಥೆಯ ಅಭಿವೃದ್ಧಿ ಹಾಗೂ ಹೂಳು ತೆಗೆಯುವ ಕಾಮಗಾರಿಗಳು ಭರದಿಂದ ನಡೆಯುತ್ತಿವೆ.ಜಾಗತಿಕ ತಾಪಮಾನ ಏರಿಕೆ ಮತ್ತು ನೀರಿನ ಕೊರತೆಯ ಸವಾಲಿನ ನಡುವೆ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಇದರ ಅಂಗಸಂಸ್ಥೆ ವಿವೇಕಾನಂದ ಸೆಂಟ್ರಲ್ ಸ್ಕೂಲ್ (CBSE), ಕರ್ಣಾಟಕ ಬ್ಯಾಂಕ್‌ನ ಸಿಎಸ್‌ಆರ್ ಸಹಕಾರ ಹಾಗೂ ತಾಲೂಕು ಪಂಚಾಯತ್‌ನ ಸಕ್ರಿಯ ಬೆಂಬಲದೊಂದಿಗೆ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಯೋಜನೆಯ ಉದ್ದೇಶ:
ಅಂತರ್ಜಲ ಮಟ್ಟ ಪುನರುಜ್ಜೀವನ, ಸ್ಥಳೀಯ ಜೀವ ವೈವಿಧ್ಯತೆಯ ಸಂರಕ್ಷಣೆ ಹಾಗೂ ಭವಿಷ್ಯದ ಪೀಳಿಗೆಗೆ ಶಾಶ್ವತ ಜಲ ಸಂಪನ್ಮೂಲ ಉಳಿಸುವುದು.ಪೂರ್ಣಗೊಂಡ ಬಳಿಕ ಅಜಲಾಡಿ ಕೆರೆ ಬೆಳೆಯುತ್ತಿರುವ ಪುತ್ತೂರು ನಗರಕ್ಕೆ ಜಲಭದ್ರತೆಯ ಆಧಾರವಾಗುವುದರ ಜೊತೆಗೆ ಪರಿಸರ ಸಂರಕ್ಷಣೆ ಮತ್ತು ಗ್ರಾಮೀಣ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುವ ನಿರೀಕ್ಷೆಯಿದೆ.

ಸಿಎಸ್‌ಆರ್ ನಿಧಿಯ ಮೂಲಕ ಉದಾರ ಸಹಕಾರ ನೀಡಿದ ಕರ್ಣಾಟಕ ಬ್ಯಾಂಕ್‌ನ ಪರಿಸರ ಸಂರಕ್ಷಣೆ ಮತ್ತು ಸಮಾಜಮುಖಿ ಬದ್ಧತೆಯನ್ನು ವಿವೇಕಾನಂದ ಸೆಂಟ್ರಲ್ ಸ್ಕೂಲ್ (CBSE) ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದೆ.

ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಯೋಜನೆಗೆ ಡಿ.ಕೆ. ಜಿಲ್ಲಾ ಪಂಚಾಯತ್ ಸಿಇಒ ನರ್ವಾಡೆ ವಿನಾಯಕ ಕೆ., IAS, ಕಾರ್ಯನಿರ್ವಾಹಕ ಇಂಜಿನಿಯರ್ ವೇಣುಗೋಪಾಲ್, ಪುತ್ತೂರು ತಾ.ಪಂ. ಇಒ ನವೀನ್ ಭಂಡಾರಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಭರತ್, ಕಿರಿಯ ಇಂಜಿನಿಯರ್ ಸಂದೀಪ, ಆರ್ಯಾಪು ಗ್ರಾ.ಪಂ. ಪಿಡಿಒ, ಅಧ್ಯಕ್ಷರು ಮತ್ತು ಸದಸ್ಯರು ಮಹತ್ವದ ಪಾತ್ರ ವಹಿಸಿದ್ದಾರೆ.

LEAVE A REPLY

Please enter your comment!
Please enter your name here