ಇರ್ದೆ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಅನುಜ್ಞಾಕಲಶ, ಬಾಲಾಲಯ ಪ್ರತಿಷ್ಠೆ ನವೀಕೃತ ಸಂಗಮಶ್ರೀ ಸಭಾಂಗಣದ ಲೋಕಾರ್ಪಣೆ

0

ಪುತ್ತೂರು: ಇರ್ದೆ ಬೈಲಾಡಿಯ ಶ್ರೀ ವಿಷ್ಣುಮೂರ್ತಿ ದೇವಾಲಯ ಗೋಪಾಲಕ್ಷೇತ್ರ ಮತ್ತು ಪೂಮಾಣಿ-ಕಿನ್ನಿಮಾಣಿ, ರಾಜನ್ ದೈವಗಳ ಕಡಿಕೆ ಚಾವಡಿಯಲ್ಲಿ ನಡೆಯಲಿರುವ ಜೀರ್ಣೋದ್ಧಾರ ಕಾರ್ಯಕ್ರಮವದ ಅಂಗವಾಗಿ ಮೇ.25ರಂದು ಅನುಜ್ಞಾ ಕಲಶ ಹಾಗೂ ಬಾಲಾಲಯ ಪ್ರತಿಷ್ಠೆ ಹಾಗೂ ನವೀಕೃತಗೊಂಡಿರುವ ಸಂಗಮಶ್ರೀ ಸಭಾಂಗಣವು ಲೋಕಾರ್ಪಣೆಗೊಂಡಿತು.


ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆದ ವಿವಿಧ ತಾಂತ್ರಿಕ ಹಾಗೂ ವೈದಿಕ ಕಾರ್ಯಕ್ರಮದಲ್ಲಿ ಬೆಳಿಗ್ಗೆ ದೇವರಿಗೆ ಅನುಜ್ಞಾ ಕಲಶ ನಡೆದು ನಂತರ ಗರ್ಭಗುಡಿಯಲ್ಲಿದ್ದ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠೆ, ಕಲಶಾಭಿಷೇಕ ನೆರವೇರಿತು. ನಂತರ ಕದಿಕೆ ಚಾವಡಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಅನುಜ್ಞಾ ಪ್ರಾರ್ಥನೆ ನೆರವೇರಿತು.


16,800 ಚದರ ಅಡಿಯ ವಿಶಾಲ ಛಾವಣಿ:
ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದ ಪ್ರಥಮ ಹಂತದಲ್ಲಿ ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣ ಸೇರಿದಂತೆ ಸುಮಾರು 16,800 ಚದರ ಅಡಿ ವಿಸ್ತೀರ್ಣದಲ್ಲಿ ರೂ.50ಲಕ್ಷ ವೆಚ್ಚದಲ್ಲಿ ನವೀಕೃತಗೊಂಡು ನಿರ್ಮಾಣಗೊಂಡಿರುವ ಛಾವಣಿಯ ಸಂಗಮಶ್ರೀ ಸಭಾಂಗಣದ ಸಾಂಕೇತಿಕ ಉದ್ಘಾಟನೆಯೂ ಇದೇ ಸಂದರ್ಭದಲ್ಲಿ ನೆರವೇರಿತು.


ಭಕ್ತಾದಿಗಳು ಏಕ ಚಿಂತನೆಯಲ್ಲಿ ಮುನ್ನಡೆದಾಗ ಯಶಸ್ಸು ಪ್ರಾಪ್ತಿ-ಕುಂಟಾರು ರವೀಶ ತಂತ್ರಿ:
ಸಭಾಂಗಣವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕ್ಷೇತ್ರದ ತಂತ್ರಿಗಳಾದ ಕುಂಟಾರು ರವೀಶ ತಂತ್ರಿಯವರು ಮಾತನಾಡಿ, ದೇವರಿಗೆ ಬ್ರಹ್ಮಕಲಶ ನೆರವೇರಿರುವ ಹಲವು ವರ್ಷಗಳ ಪ್ರಯತ್ನ ಈಗ ಈಡೇರುತ್ತಿದೆ. ದೇವರ ಪ್ರೇರಣೆಯಂತೆ ಕೆಲಸ ಅಗುತ್ತಿದೆ. ಆಯಾ ಕಾಲಕ್ಕೆ, ಯೋಗ್ಯ ವ್ಯಕ್ತಿಗಳನ್ನು ದೇವರೇ ನಿರ್ಧಾರ ಮಾಡುತ್ತಿದ್ದು ಅವರಿಗೆ ಗ್ರಾಮಸ್ಥರು ಬೆಂಬಲ ನೀಡಬೇಕು. ಟೀಕಿಸುವರು, ನಿಂದಿಸುವವರ ಬಗ್ಗೆ ತಲೆಕೆಡಿಸಿಕೊಳ್ಳದೆ ಆತ್ಮಸ್ಥೈರ್ಯದಿಂದ ಮುನ್ನಡೆದಾಗ ಒಳಿತಾಗಲಿದೆ. ಸಮರ್ಪಣಾ ಭಾವದಿಂದ ಭಕ್ತಾದಿಗಳು ಜೀರ್ಣೋದ್ಧಾರಸ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಭಕ್ತಾದಿಗಳು ಏಕ ಚಿಂತನೆಯಲ್ಲಿ ಮುನ್ನಡೆದಾಗ ಯಶಸ್ಸು ಪ್ರಾಪ್ತಿಯಾಗಲಿದೆ. ಶಶಿಕುಮಾರ್ ರೈಯವರ ನೇತೃತ್ವದಲ್ಲಿ ಜೀರ್ಣೋದ್ಧಾರದ ಕಾರ್ಯಗಳು ಪ್ರಾರಂಭಗೊಂಡು ವೇಗದಲ್ಲಿ ಮುನ್ನಡೆಯುತ್ತಿದೆ. ಅತ್ಯಲ್ಪ ಅವಧಿಯಲ್ಲಿ ದೇವರ ಬ್ರಹ್ಮಕಲಶ ನೆರವೇರಲಿದ್ದು ಇದಕ್ಕೆ ಗ್ರಾಮಸ್ಥರು ಕೈ ಜೋಡಿಸಿ, ಬೆಂಬಲ ನೀಡಬೇಕು ಎಂದು ಹೇಳಿದರು.


ಜೀರ್ಣೋದ್ದಾರ ಕಾರ್ಯದಲ್ಲಿ ಭಕ್ತಾದಿಗಳ ಕರ್ತವ್ಯವಿದೆ-ಮಹೇಶ್ ಮುನಿಯಂಗಲ:
ವಾಸ್ತು ಶಿಲ್ಪಿ ಮಹೇಶ್ ಮುನಿಯಂಗಲ ಮಾತನಾಡಿ, ಕ್ಷೇತ್ರದ ಜೀರ್ಣೋದ್ಧಾರ ಅಂಗವಾಗಿ ದೇವರ ಬಾಲಾಲಯ ಪ್ರತಿಷ್ಟೆ ನೆವೇರಿದೆ. ಜನವರಿಯಲ್ಲಿ ದೇವರ ಪ್ರತಿಷ್ಠೆ, ಬ್ರಹ್ಮಕಲಶ ನೆರವೇರಲಿದ್ದು ಇನ್ನು ಮುಂದೆ ಭಕ್ತಾದಿಗಳಿಗೂ ಕರ್ತವ್ಯವಿದೆ. ನಿತ್ಯ ದೇವರ ನಾಮಸ್ಮರಣೆ ನಡೆಯಬೇಕು ಎಂದು ಹೇಳಿದರು.


ರಾಜಕೀಯ ಬಿಟ್ಟು ದೇವರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು-ಶ್ರೀಕೃಷ್ಣ ಬೋಳಿಲ್ಲಾಯ:
ಪಾಣಾಜೆ ರಣಮಮಗಲ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಮಾತನಾಡಿ, ಪ್ರತಿವರ್ಷ ಉತ್ಸವದ ನೇಮೋತ್ಸವದಲ್ಲಿ ಬ್ರಹ್ಮಕಲಶದ ಬಗ್ಗೆ ಪ್ರಸ್ತಾಪವಾಗುತ್ತಿತ್ತು. ಆದರೆ ಅದು ಕೈಗೂಡಿರಲಿಲ್ಲ. ಈಗ ಕೈಗೂಡಿದ್ದು ಭಕ್ತಾದಿಗಳು ಸಹಕರಿಸಬೇಕು. ಕರಸೇವೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ಪಕ್ಷ ರಾಜಕೀಯ ಬಿಟ್ಟು ದೇವರ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಬ್ರಹ್ಮಕಲಶೋತ್ಸವ ವೈಭವವನ್ನು ಕಣ್ತುಂಬಿಕೊಳ್ಳಬೇಕು ಎಂದರು.


ಜನರಿವರಿಯಲ್ಲಿ ಬ್ರಹ್ಮಕಲಶೋತ್ಸವ-ಶಶಿಕುಮಾರ್ ರೈ ಬಾಲ್ಯೊಟ್ಟು
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಕ್ಷೇತ್ರದ ಜೀರ್ಣೋದ್ಧಾರ ಕಾಮಗಾರಿಯ ಪ್ರಥಮ ಹಂತವಾಗಿ ಸುಮಾರು 16,800 ಚದರ ಅಡಿ ವಿಸ್ತೀರ್ಣ ಛಾವಣಿ, ಸಂಗಮಶ್ರೀ ಸಭಾಂಗಣ ನವೀಕೃತಗೊಂಡು ಲೋಕಾರ್ಪಣೆಗೊಂಡಿದೆ. ಜೀರ್ಣೋದ್ಧಾರ ಕಾಮಗಾರಿಗಳಿಗೆ ಗ್ರಾಮಸ್ಥರಿಂದ ಉತ್ತಮ ಸ್ಪಂಧನೆ ದೊರೆತಿದೆ. ಈಗಾಗಲೇ ಹಲವು ಮಂದಿ ವಸ್ತು ರೂಪದ ದೇಣಿಗೆ ನೀಡಿ ಸಹಕರಿಸಿದ್ದಾರೆ. ಜೀರ್ಣೋದ್ಧಾರಕ್ಕಾಗಿ ಈಗಾಗಲೇ ಅಗತ್ಯ ವಸ್ತುಗಳ ಖರೀದಿಸಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಕಾಮಗಾರಿಗಳು ಪೂರ್ಣಗೊಂಡು ಜನವರಿಯಲ್ಲಿ ಬ್ರಹ್ಮಕಲಶೋತ್ಸವ ನೆರವೇರಲಿದೆ ಎಂದು ಹೇಳಿದರು.


ಯತೀಶ್ ರೈ ಚೆಲ್ಯಡ್ಕರಿಗೆ ಸನ್ಮಾನ:
ದೇವಸ್ಥಾನದ ಹೊರಾಂಗಣ ಹಾಗೂ ಒಳಾಂಗಣದ 16,800 ಚದರ ಅಡಿ ವಿಸ್ತೀರ್ಣದ ವಿಶಾಲ ಛಾವಣಿಯನ್ನು ಅತ್ಯಲ್ಪ ದಿನದಲ್ಲಿ ಪೂರ್ಣಗೊಳಿಸಿದ ಮಂಗಳೂರು ಶ್ರೀಗಣೇಶ್ ಇಂಜಿನಿಯರಿಂಗ್ ಇಂಡಸ್ಟ್ರೀಯ ಮ್ಹಾಲಕ ಯತೀಶ್ ರೈ ಚೆಲ್ಯಡ್ಕ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬಾಲ್ಯೊಟ್ಟುಗುತ್ತು, ವ್ಯವಸ್ಥಾಪನಾ ಸಮಿತಿ ಸದಸ್ಯರು, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಸದಸ್ಯರು ಸಹಿತ ನೂರಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶುಭಕರ ರೈ ಬಾಲ್ಯೊಟ್ಟುಗುತ್ತು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀದೇವರಿಗೆ ಮಹಾಪೂಜೆ ನಡೆದ ಬಳಿಕ ಉಪಹಾರ ನೆರವೇರಿತು.

ಭಕ್ತಾದಿಗಳ ಸಹಕಾರ ಅಗತ್ಯ
ಕ್ಷೇತ್ರದಲ್ಲಿ ರೂ.3.50ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆಯಲಿದೆ. ಯುದ್ದದ ಪರಿಣಾಮ ಸಾಮಾಗ್ರಿಗಳ ದರ ಏರಿಕೆಯ ಹೊಡೆತ ತಪ್ಪಿಸಲು ಈಗಾಗಲೇ ರೂ.೧ಕೋಟಿ ಮೊತ್ತದ ಅಗತ್ಯ ವಸ್ತುಗಳ ಸಂಗ್ರಹಿಸಿಡಲಾಗಿದೆ. ಕೇವಲ ರೂ.40ಲಕ್ಷ ಮಾತ್ರ ದೇಣಿಗೆ ಸಂಗ್ರಹವಾಗಿದೆ. ಮುಂದಿನ ಆಗಸ್ಟ್ ಅಂತ್ಯಕ್ಕೆ ಜೀರ್ಣೋದ್ಧಾರದ ಕಾಮಗಾರಿಗಳು ಪೂರ್ಣಗೊಂಡು ಜನವರಿಯಲ್ಲಿ ವೈಭವದ ಬ್ರಹ್ಮಕಲಶ ನೆರವೇರಲಿದೆ. ಈ ಎಲ್ಲಾ ಕಾರ್ಯಗಳಿಗೆ ರೂ.3.50ಕೋಟಿ ಆವಶ್ಯಕತೆಯಿದ್ದು ಭಕ್ತಾದಿಗಳೆಲ್ಲರ ಸಹಕಾರ ಅಗತ್ಯ. ಜೀರ್ಣೋದ್ಧಾರ ಕಾರ್ಯದಲ್ಲಿ ಕರಸೇವೆಯಲ್ಲಿಯೂ ಭಕ್ತಾದಿಗಳು ಸಹಕರಿಸುವಂತೆ ವಿನಂತಿ
-ಶಶಿಕುಮಾರ್ ರೈ ಬಾಲ್ಯೊಟ್ಟು,
ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ

ಜೀರ್ಣೋದ್ಧಾರ ಕಾರ್ಯಗಳು:
ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಕ್ಷೇತ್ರದ ಗರ್ಭಗುಡಿ, ನಮಸ್ಕಾರ ಮಂಟಪಕ್ಕೆ ತಾಮ್ರದ ಹೊದಿಕೆಯ ಛಾವಣಿ, ಪ್ರವೇಶ ಧ್ವಾರದ ಅಗಲೀಕರಣ, ಗೋಪುರಗಳಿಗೆ ಗ್ರಾನೈಟ್ ಅಳವಡಿಕೆ, ನೇಮೋತ್ಸವ ನಡೆಯುವ ಕಡಿಕೆ ಚಾವಡಿಯಲ್ಲಿ ಪಂಚಮುಖದ ಕದಿಕೆ ಚಾವಡಿ, ದೈವಗಳ ಬಂಡಿ ಇಡುವ ಕೊಠಡಿ, ಆವರಣಗೋಡೆ, ಇಂಟರ್‌ಲಾಕ್ ಅಳವಡಿಕೆ ಸೇರಿದಂತೆ ಸುಮಾರು ರೂ.3.50ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆದು 2027ರ ಜ.10ರಿಂದ ವೈಭವದ ಬ್ರಹ್ಮಕಲಶೋತ್ಸವ ನೆರವೇರಲಿದೆ ದೇವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here