ಕೆಮ್ಮಾರ ಶರೀಅತ್ ಕಾಲೇಜು ಸನದುದಾನ ಸಮಾರಂಭ

0

ಕುರಾನ್ ಆಶಯ ತಿಳಿದುಕೊಳ್ಳುವುದು ಮುಖ್ಯ: ಜಿಫ್ರಿ ಮುತ್ತುಕೋಯ ತಂಙಳ್


ಉಪ್ಪಿನಂಗಡಿ: ಉಲಮಾ ನಾಯಕನಾಗುವುದು, ವಾಗ್ಮಿ, ಪಂಡಿತನಾಗುವುದು ಅವರುಗಳ ಪ್ರತಿಭೆ, ವ್ಯಕ್ತಿತ್ವಕ್ಕೆ ಬಿಟ್ಟ ವಿಚಾರ. ಆದರೆ ಕುರಾನ್‌ನ ಮಹತ್ವ, ಅದಕ್ಕೆ ನೀಡಬೇಕಾದ ಗೌರವ, ಆಶಯಗಳನ್ನು ತಿಳಿದುಕೊಂಡು ಇನ್ನೊಬ್ಬರಿಗೆ ತಿಳಿಸುವುದು ಅತೀ ಮಹತ್ವದ್ದು ಮತ್ತು ಅಗತ್ಯವಾದುದು ಎಂದು “ಸಮಸ್ತ” ರಾಷ್ಟ್ರೀಯ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.


ಅವರು ಮೇ. ೨೩ರಂದು ಶಂಸುಲ್ ಉಲಮಾ ಮಹಿಳಾ ಶರೀಅತ್ ಕಾಲೇಜು ಕೆಮ್ಮಾರ ಇದರ ೮ನೇ ವಾರ್ಷಿಕೋತ್ಸವ ಹಾಗೂ ಸನದುದಾನ ಸಮಾರಂಭದಲ್ಲಿ ಮಾತನಾಡಿ, ನೆಬಿವರ್ಯರು ಸ್ತ್ರೀ ವರ್ಯರ ವಿದ್ಯಾಭ್ಯಾಸಕ್ಕೆ ಬಹಳ ಒತ್ತು ಕೊಟ್ಟಿದ್ದು, ಹಾಗಾಗಿ ಶರೀಅತ್ ಕಲಿಕೆಗೆ ಮಹತ್ವ ದೊರಕಿದೆ. ಈ ಮೂಲಕ ಸ್ತ್ರೀ ಮಾನ್ಯತೆ ಮತ್ತು ಅವರುಗಳ ರಕ್ಷಣೆ ಇಸ್ಲಾಮಿನ ಬದ್ಧತೆ ಆಗಿದೆ. ತಾಯಂದಿರು, ಹೆಣ್ಣು ಮಕ್ಕಳು ತಮ್ಮ ಕಲಿಕೆಯ ಮೂಲಕ ಕುಟುಂಬದಲ್ಲಿ, ಸಮಾಜದಲ್ಲಿ ಸಂಸ್ಕಾರ, ವಿದ್ಯಾಭ್ಯಾಸ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.


ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸಯ್ಯದ್ ಜುನೈದ್ ಜಿಫ್ರಿ ತಂಙಳ್ ದುವಾಃ ನೆರವೇರಿಸಿ ಮಾತನಾಡಿ, ಸಮುದಾಯದ ಉನ್ನತಿಗೆ ಮಹಿಳೆಯರು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಬಗ್ಗೆ ಚಿಂತಿತರಾಗಬೇಕು ಎಂದರು. ಶರೀಅತ್ ಕಾಲೇಜು ಸಮಿತಿ ಅಧ್ಯಕ್ಷ ಎಸ್.ಬಿ. ಮುಹಮ್ಮದ್ ದಾರಿಮಿ ಮಾತನಾಡಿ, ಹೆಣ್ಣು ಕಲಿತರೆ ಗ್ರಾಮವೇ ಕಲಿತ ಹಾಗೇ. ಹೀಗಿರುವಾಗ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.


ಗಂಡಿಬಾಗಿಲು ಮಸೀದಿ ಖತೀಬ್ ಇಲ್ಯಾಸ್ ಅರ್ಶದಿ ಕುಂಡಾಜೆ ಧಾರ್ಮಿಕ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ರಹಿಮಾನ್ ಫೈಝಿ ಮಾತನಾಡಿದರು. ಸಮಾರಂಭದಲ್ಲಿ ಶರೀಅತ್ ಕಾಲೇಜು ಸಮಿತಿ ಪದಾಧಿಕಾರಿಗಳಾದ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಎಲ್.ಟಿ. ಅಬ್ದುಲ್ ರಜಾಕ್ ಹಾಜಿ, ಬಡಿಲ ಹುಸೇನ್, ಗಂಡಿಬಾಗಿಲು ಮಸೀದಿ ಅಧ್ಯಕ್ಷ ಎಸ್. ಅಬ್ದುಲ್ ರಹಿಮಾನ್, ಕಾರ್ಯದರ್ಶಿ ನಝೀರ್ ಪೂರಿಂಗ, ಕೆಮ್ಮಾರ ಮದ್ರಸ ಕಮಿಟಿ ಅಧ್ಯಕ್ಷ ಕೆ.ಕೆ. ಕಮಾಲ್, ಉಪಾಧ್ಯಕ್ಷ ಎನ್.ಎ. ಇಸಾಕ್, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳಾದ ಇಸ್ಮಾಯಿಲ್ ತಂಙಳ್, ಯುನಿಕ್ ಅಬ್ದುಲ್ ರಹಿಮಾನ್, ಅಬ್ದುಲ್ಲಾ ಮುಸ್ಲಿಯಾರ್, ಜಿ. ರಫೀಕ್ ಮತ್ತಿತರರು ಉಪಸ್ಥಿತರಿದ್ದರು. ಕೆ.ಎಂ. ಕೊಡುಂಗೈ ಸ್ವಾಗತಿಸಿದರು. ರಫೀಕ್ ಗೋಳಿತ್ತಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here