






ಮಕ್ಕಳಿಗೆ ಸರ್ಕಸ್ಸಿನ ವಿಶಿಷ್ಟತೆಯನ್ನು ತೋರಿಸುವ ಕೆಲಸವಾಗಬೇಕು: ಅಶೋಕ್ ಕುಮಾರ್ ರೈ


*ಮೈ ರೋಮಾಂಚನಗೊಳಿಸುವ ಸನ್ನಿವೇಶ
*ವಿಶೇಷ ಆಕರ್ಷಣೆ ರೊಬೋಟಿಕ್ ಅನಿಮಲ್
*ಎರಡು ಗಂಟೆಯ ಪ್ರದರ್ಶನ
*30 ಕ್ಕೂ ಅಧಿಕ ಆಟಗಳು
ಪುತ್ತೂರು: ಹಲವಾರು ಹೊಸತನಗಳೊಂದಿಗೆ ಎಂಟು ವರ್ಷಗಳ ಬಳಿಕ ಇದೀಗ ಮತ್ತೆ ಜಂಬೋ ಸರ್ಕಸ್ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಆರಂಭಗೊಂಡಿದೆ. ಸರ್ಕಸ್ ಪ್ರದರ್ಶನವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈರವರು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು.



ಬಳಿಕ ಮಾತನಾಡಿದ ಅವರು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ಜಂಬೋ ಸರ್ಕಸ್ ಆರಂಭಗೊಂಡಿದೆ. ಈ ಹಿಂದೆ ಸರ್ಕಸ್ ನೋಡುವಾಗ ಅದರಲ್ಲಿ ಪ್ರಾಣಿ ಪಕ್ಷಿಗಳ ಆಟ ಎಲ್ಲವೂ ಇತ್ತು. ಆದರೆ ಈಗ ಸರಕಾರದ ಸುತ್ತೋಲೆಯಂತೆ ಅದನ್ನು ಬಳಸುವಂತಿಲ್ಲ. ಈ ಆದೇಶದಿಂದ ಸರ್ಕಸ್ನಲ್ಲಿ ಪ್ರಾಣಿ ಪಕ್ಷಿಗಳು ನಮಗೆ ಕಾಣಲು ಸಿಗುವುದಿಲ್ಲ. ಆದರೂ ಜಂಬೋ ಸರ್ಕಸ್ ಸಾಂಪ್ರದಾಯಿಕ ಕ್ರೀಡೆಯನ್ನು ಉಳಿಸುವ ನಿಟ್ಟಿನಲ್ಲಿ ಬೇರೆ ಬೇರೆ ಆಟಗಳ ಮೂಲಕ ಜನರನ್ನು ರಂಜಿಸುತ್ತಿದೆ. ಈಗ ಪುತ್ತೂರಿನ ಜನರಿಗೆ, ಮಕ್ಕಳಿಗೆ ಸರ್ಕಸ್ಸಿನ ವಿಶಿಷ್ಟತೆಯನ್ನು ತೋರಿಸುವ ಕೆಲಸ ಮಾಡಲು ಮುಂದಾಗಿದೆ. ಇವತ್ತಿನಿಂದ ಒಂದು ತಿಂಗಳ ಕಾಲ ಪುತ್ತೂರಿನಲ್ಲಿ ಸರ್ಕಸ್ ಪ್ರದರ್ಶನಗೊಳ್ಳಲಿದೆ. ಸಾರ್ವಜನಿಕರು ತಮ್ಮ ಮಕ್ಕಳಿಗೆ ಸರ್ಕಸ್ ಏನೆಂಬುದನ್ನು ತೋರಿಸಬೇಕು ಎಂದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭಹಾರೈಸಿದರು. ಜಂಬೋ ಸರ್ಕಸ್ ನ ವ್ಯವಸ್ಥಾಪಕ ಸುರೇಶ್ ಬಾಬು ಸ್ವಾಗತಿಸಿದರು.

ದಿನಂಪ್ರತಿ ಮೂರು ಪ್ರದರ್ಶನ
ಪ್ರತೀ ದಿನ ಮೂರು ಪ್ರದರ್ಶನ ನಡೆಯಲಿದೆ. ಮದ್ಯಾಹ್ನ 1 ಗಂಟೆ, ಸಾಯಂಕಾಲ 4 ಗಂಟೆ, ರಾತ್ರಿ 7ಗಂಟೆಗೆ ಪ್ರದರ್ಶನ ನಡೆಯಲಿದೆ. ರೂ 300 ಕ್ಕೆ ಅಡ್ವಾನ್ಸ್ ಬುಕ್ಕಿಂಗ್ ನಡೆಯಲಿದ್ದು, ವಿಶೇಷ ಆಕರ್ಷಣೆಯಾಗಿ ರೊಬೋಟಿಕ್ ಅನಿಮಲ್ ಪ್ರದರ್ಶನವಿದೆ. 2 ಗಂಟೆಗಳ ಕಾಲ ನಡೆಯಲಿರುವ ಪ್ರದರ್ಶನದಲ್ಲಿ ಸುಮಾರು 30ಕ್ಕೂ ಅಧಿಕ ಆಟಗಳು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8667013077, 7907089704ಯನ್ನು ಸಂಪರ್ಕಿಸಬಹುದಾಗಿದೆ.
ಹೊಚ್ಚಹೊಸ ಆಟಗಳು
ಜಂಬೋ ಸರ್ಕಸ್ ಹಲವಾರು ವರುಷಗಳ ಇತಿಹಾಸವಿರುವ ಒಂದು ಪರಿಣತ ಸರ್ಕಸ್ ತಂಡವಾಗಿದೆ. ಪ್ರದರ್ಶನ ನೀಡಿದಲ್ಲೆಲ್ಲಾ ಜನರಿಂದ ಪ್ರಶಂಸೆಗೆ ಪಾತ್ರವಾಗಿದೆ. ಎಂಟು ವರುಷಗಳ ಹಿಂದೆ ಇದೇ ಜಾಗದಲ್ಲಿ ನಾವು ಪ್ರದರ್ಶನ ನೀಡಿದ್ದು, ಈ ಭಾಗದ ಜನರಿಂದ ಉತ್ತಮ ಸಹಕಾರ ಸಿಕ್ಕಿತ್ತು. ಕಳೆದ ಭಾರಿಗಿಂತ ಈ ಬಾರಿ ಹಲವಾರು ಹೊಸತನಗಳೊಂದಿಗೆ ಪ್ರದರ್ಶನ ನಡೆಯಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ಎಲ್ಲರ ಸಹಕಾರ ಅಗತ್ಯ.
ಸುರೇಶ್ ಬಾಬು ವ್ಯವಸ್ಥಾಪಕರು ಜಂಬೋ ಸರ್ಕಸ್










