‘ನಾವು ನಿಮ್ಮ ವಿರುದ್ಧ ಪ್ರತಿಭಟನೆ ಮಾಡಿಲ್ಲ-ಬಿಜೆಪಿಯವರನ್ನು ಕರೆದಿಲ್ಲʼ, ನಮ್ಮ ಸಮಸ್ಯೆಯನ್ನು ಬಿಜೆಪಿಯವರು ಅವರ ಲಾಭಕ್ಕಾಗಿ ಬಳಸಿಕೊಂಡರು’ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸಿದ್ದ ಪುಣಚದ ಫಲಾನುಭವಿಗಳಿಂದ ಶಾಸಕ ರೈಯವರಿಗೆ ಸ್ಪಷ್ಟನೆ

0

ಪುತ್ತೂರು:ನಾವು ನಿಮ್ಮ ವಿರುದ್ಧ ಪ್ರತಿಭಟನೆ ಮಾಡಿದ್ದಲ್ಲ.ಬಿಜೆಪಿಯವರೇ ನಮ್ಮನ್ನು ಕರೆದುಕೊಂಡು ಹೋಗಿ ಹಾಗೆ ಹೇಳಿ,ಹೀಗೆ ಹೇಳಿ ಎಂದು ಒತ್ತಾಯ ಮಾಡಿದ್ದು ಹೊರತು ನಾವು ಬಿಜೆಪಿಯವರನ್ನು ಕರೆದು ಹೋರಾಟ ಮಾಡಿಲ್ಲ ಎಂದು ಹಕ್ಕುಪತ್ರಕ್ಕಾಗಿ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದ ಪುಣಚದ ಫಲಾನುಭವಿಗಳೇ ಶಾಸಕ ಅಶೋಕ್ ಕುಮಾರ್ ರೈಯವರ ಕಚೇರಿಗೆ ಬಂದು ಶಾಸಕರಲ್ಲಿ ಹೇಳಿರುವುದಾಗಿ ವರದಿಯಾಗಿದೆ.


ಪುಣಚ ದೇವಿನಗರ ಕಾಲನಿಯ ಮೂರು ಕುಟುಂಬಗಳಿಗೆ 94ಸಿ ಹಕ್ಕು ಪತ್ರ ನೀಡಿಲ್ಲ.ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಫಲಾನುಭವಿಗಳ ಕುಟುಂಬ ಬಿ.ಸಿ.ರೋಡ್‌ನಲ್ಲಿರುವ ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಕೆಲ ದಿನಗಳ ಹಿಂದೆ ಪ್ರತಿಭಟನೆ ನಡೆಸಿತ್ತು.ಮೂರನೇ ದಿನ ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ ಹಾಗೂ ಜಿಲ್ಲಾ ಬಿಜೆಪಿ ಪ್ರತಿಭಟನೆಗೆ ಸಾಥ್ ನೀಡಿತ್ತು.ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಮತ್ತು ಬಂಟ್ವಾಳ ಮಂಡಲ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಬಡವರ ಶೋಷಣೆ ಮಾಡುತ್ತಿರುವ ಆರೋಪ ಹೊರಿಸಿ ಸರ್ಕಾರ ಮತ್ತು ಪುತ್ತೂರು ಶಾಸಕರ ವಿರುದ್ಧ ಪ್ರತಿಭಟನೆಯಲ್ಲಿ ದಿಕ್ಕಾರ ಕೂಗಲಾಗಿತ್ತು.ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ ಹಾಗೂ ದ.ಕ.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸಹಿತ ಪಕ್ಷದ ಹಲವು ಪ್ರಮುಖರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ನಾವು ಬಿಜೆಪಿಯವರನ್ನು ಕರೆದು ಹೋರಾಟ ಮಾಡಿಲ್ಲ:
ಹಕ್ಕು ಪತ್ರ ವಂಚಿತರಾಗಿ, ಪ್ರತಿಭಟನೆ ನಡೆಸಿದ್ದ ಕುಟುಂಬದ ಪ್ರಮುಖರೇ ಇದೀಗ ಶಾಸಕ ಅಶೋಕ್ ಕುಮಾರ್ ರೈಯವರ ಕಚೇರಿಗೆ ಬಂದು, ಶಾಸಕರ ಜೊತೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.‘ನಾವು ನಿಮ್ಮ ವಿರುದ್ದ ಪ್ರತಿಭಟನೆ ಮಾಡಿದ್ದಲ್ಲ,ನಾವು ಬಿಜೆಪಿಯವರನ್ನು ಕರೆದು ಹೋರಾಟ ಮಾಡಿಲ್ಲ,ಅವರೇ ನಮ್ಮನ್ನು ಕರೆದುಕೊಂಡು ಹೋಗಿ ಹಾಗೆ ಹೇಳಿ. ಹೀಗೆ ಹೇಳಿ ಎಂದು ನಮ್ಮಲ್ಲಿ ಒತ್ತಾಯ ಮಾಡಿದ್ದಾರೆ ಹೊರತು ನಾವು ಯಾರ ವಿರುದ್ದವೂ ಪ್ರತಿಭಟನೆ ಮಾಡಿಲ್ಲ.ಬಿಜೆಪಿಯವರೇ ನಮ್ಮ ಸಮಸ್ಯೆಯನ್ನು ಅವರ ಲಾಭಕ್ಕಾಗಿ ಬಳಸಿಕೊಂಡರು’ ಎಂದು ತಿಳಿಸಿದ್ದಾರೆ.


‘ನಮ್ಮ ಜಾಗದ ಹಕ್ಕು ಪತ್ರ ಮಾಡಿಸಿದ್ದು ಅಶೋಕ್ ರೈ ಅವರೇ ಎಂದು ನಾವು ಅವರಲ್ಲಿ ಮೊದಲಿಗೆ ಹೇಳಿದ್ದೆವು.ಆಗ ಅವರು ಅದು ಅಲ್ಲಿರಲಿ ಈಗ ನಿಮಗೆ ಹಕ್ಕು ಪತ್ರ ಕೈಗೆ ಸಿಗಲಿಲವಲ್ಲ,ನೀವು ಪ್ರತಿಭಟನೆ ಮಾಡಿದರೆ ಬೇಗ ಕೊಡ್ತಾರೆ,ಕಾನೂನು ಪ್ರಕಾರ ನಿಮಗೆ ಕೊಡುವುದಕ್ಕೆ ಆಗುವುದಿಲ್ಲ,ಕಾನೂನು ಮೀರಿ ನಿಮಗೆ ಹಕ್ಕು ಪತ್ರ ಅಶೋಕ್ ರೈ ಮಾಡಿಸಿದ್ದಾರೆ.ಅದನ್ನು ಆದಷ್ಟು ಬೇಗ ಪಡೆಯಬೇಕು ಇಲ್ಲವಾದರೆ ಕಷ್ಟ ಎಂದು ಹೇಳಿ ನಮ್ಮನ್ನು ಬಂಟ್ವಾಳ ತಾಲೂಕು ಕಚೇರಿ ಎದರು ಕೂರಿಸಿದ್ದಾರೆ.ನಾವು ನಿಮ್ಮ ವಿರುದ್ದ ಏನೂ ಮಾತನಾಡಿಲ್ಲ,ಸರಕಾರದ ವಿರುದ್ದವೂ ಮಾತನಾಡಿಲ್ಲ.ಎಲ್ಲವನ್ನೂ ಮಾಡಿದ್ದು ಮಾಜಿ ಶಾಸಕ ಸಂಜೀವ ಮಠಂದೂರು ಮತ್ತು ಇನ್ನೊಬ್ಬರು’ ಎಂದು ಫಲಾನುಭವಿಗಳು ಶಾಸಕರಲ್ಲಿ ಹೇಳಿದಾಗ ಪ್ರತಿಕ್ರಿಯಿಸಿದ ಶಾಸಕರು ‘ನಿಮಗೆ ಹಕ್ಕು ಪತ್ರ ಕೊಟ್ಟು ನಾನು ಕಳೆದುಕೊಳ್ಳುವಂಥದ್ದು ಏನೂ ಇಲ್ಲ.ಬಿಜೆಪಿ ಶಾಸಕರು ನಿಮ್ಮ ಹಕ್ಕು ಪತ್ರ ಮಾಡಿಸಿದ್ದಲ್ಲ,ನಾನೇ ಮಾಡಿಸಿದ್ದು.ಎಲ್ಲವೂ ಸರಿಯಾಗುವಾಗ ನೀವು ಪ್ರತಿಭಟನೆ ಮಾಡಿದ್ದೀರಿ.ಈಗ ಅದಕ್ಕೆ ಬೇರೆಯವರು ಕೇಸು ಹಾಕಿದ್ದಾರೆ.ಮುಂದೆ ಕಾನೂನು ಪ್ರಕಾರ ಏನು ಆಗುತ್ತದೆಯೋ ಅದೇ ರೀತಿ ಆಗಲಿದೆ’ ಎಂದು ಹೇಳಿದರಲ್ಲದೆ,‘ನಿಮ್ಮನ್ನು ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡಿಸಿದವರು ಈಗ ನಿಮ್ಮ ಜೊತೆ ಇದ್ದಾರ? ನೀವು ಬಲಿಪಶುವಾಗಿದ್ದೀರಿ.ಮುಂದಕ್ಕೆ ಏನಾಗುತ್ತೋ ನೋಡೋಣ’ ಎಂದು ಹೇಳಿದರು ಎಂದು ವರದಿಯಾಗಿದೆ.ಹಕ್ಕುಪತ್ರ ವಂಚಿತರಾಗಿ ಪ್ರತಿಭಟನೆ ನಡೆಸಿದ್ದ ಪ್ರೇಮ,ವಿಜಯಲಕ್ಷ್ಮೀ ಹಾಗೂ ಬೇಬಿ ಅವರು ಶಾಸಕರ ಕಚೇರಿಗೆ ಆಗಮಿಸಿ ಶಾಸಕರೊಂದಿಗೆ ಮಾತನಾಡಿ ಘಟನೆ ಕುರಿತು ವಿವರಿಸಿದರು.

LEAVE A REPLY

Please enter your comment!
Please enter your name here