ಕುದ್ಮಾರು ಶಾಲೆಯಲ್ಲಿ ಪ್ರಾರಂಭೋತ್ಸವ, ವಿವಿಧ ಸೌಲಭ್ಯಗಳ ಉದ್ಘಾಟನೆ- ವರ್ಗಾವಣೆಗೊಂಡ ಶಿಕ್ಷಕಿ ಶ್ರೀಲತಾ ಅವರಿಗೆ ಬೀಳ್ಕೊಡುಗೆ

0

ಕಾಣಿಯೂರು: ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪ್ರಾಥಮಿಕ ಹಂತದ ಶಿಕ್ಷಣವು ಅತ್ಯಂತ ಮುಖ್ಯವಾದ ಬುನಾದಿಯಾಗಿದೆ ಎಂದು ಕುದ್ಮಾರು ಶಾಲೆಯ ಹಿರಿಯ ವಿದ್ಯಾರ್ಥಿ ಪ್ರಶಾಂತ್ ಶರ್ಮ ಕಜೆ ಹೇಳಿದರು.

ಅವರು ಕುದ್ಮಾರು ಸ. ಉ.ಹಿ.ಪ್ರಾ.ಶಾಲೆಯಲ್ಲಿ ಜೂ.1ರಂದು ನಡೆದ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ, ವಿವಿಧ ಸೌಲಭ್ಯಗಳ ಉದ್ಘಾಟನೆ,
ವರ್ಗಾವಣೆಗೊಂಡ ಶಿಕ್ಷಕಿ ಶ್ರೀಲತಾ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ದೇವರಾಜ್ ನೂಜಿ ಮಾತನಾಡಿ,
ಮಗುವಿನ ಬೆಳವಣಿಗೆ ಮತ್ತು  ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸುವಲ್ಲಿ ಶಿಕ್ಷಕರ ಪಾತ್ರದಷ್ಟೇ ಪೋಷಕರ ಪಾತ್ರವು ಮುಖ್ಯವಾಗಿದೆ ಎಂದರು. ಬಾಲೋದ್ಯಾನವನ್ನು ಉದ್ಘಾಟಿಸಿದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ಮಾತನಾಡಿ, ಮಕ್ಕಳಿಗೆ ಶಿಕ್ಷಣ ದೊಂದಿಗೆ ಉತ್ತಮ ಗುಣ, ನಡತೆಯನ್ನು ಕಲಿಸುವುದು ಪೋಷಕರ ಕರ್ತವ್ಯವಾಗಿದೆ. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಣವು ಉತ್ತಮ ವ್ಯಕ್ತಿಯಾಗಲು ಮತ್ತು ಜೀವನದಲ್ಲಿ ಯಶಸ್ವಿಯಾಗಲು ಅಡಿಪಾಯವಾಗಿದೆ. ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಪೋಷಕರ ಪಾತ್ರವೂ ಬಹಳ ಮುಖ್ಯವಾಗುತ್ತದೆ ಎಂದರು. ಕುದ್ಮಾರು ಶಾಲೆಯಿಂದ ಸವಣೂರು ಸರಕಾರಿ ಪ್ರೌಢ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕಿ ಶ್ರೀಲತಾ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಕುದ್ಮಾರು ಶಾಲಾ ಉತ್ತಮ ಎಸ್ ಡಿ ಎಂ ಸಿ ತಂಡದೊಂದಿಗೆ ಕೆಲಸ ಮಾಡುವ ಯೋಗ ಬಂದಿದ್ದು ನನ್ನ ಸುಯೋಗ. ಇಂತಹ ಎಸ್ ಡಿ ಎಂ ಸಿ ತಂಡವನ್ನು ಪಡೆದಿರುವುದು ಹೆಮ್ಮೆ. ನನ್ನ ಸೇವಾವಧಿಯಲ್ಲಿ ನನಗೆ ಕೊಟ್ಟ ಗೌರವ, ಪ್ರೀತಿ, ಅಭಿಮಾನ ನಾನು ಮರೆಯುವಂತಿಲ್ಲ ಎಂದರು. ಎಲ್ ಕೆ ಜಿ ತರಗತಿಯನ್ನು ಬೆಳಂದೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ್, ಯುಕೆಜಿ ತರಗತಿಯನ್ನು
ಕುದ್ಮಾರು ಶಾಲಾ ನಿವೃತ್ತ ಮುಖ್ಯಗುರು ಕುಶಾಲಪ್ಪ ಬಿ ಅವರು ಉದ್ಘಾಟಿಸಿ ಶುಭಹಾರೈಸಿದರು. ಕ್ಲಸ್ಟರ್ ಸಿ.ಆರ್.ಪಿ ಜಯಂತ ವೈ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಾಮಚಂದ್ರ ಅನ್ಯಾಡಿ ಶುಭಹಾರೈಸಿದರು. ಸವಣೂರು ಸರಕಾರಿ ಪ್ರೌಢ ಶಾಲಾ ಶಿಕ್ಷಕ ಕಿಶನ್ ಬಿ.ವಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ದಾನಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಿವೃತ್ತ ಮುಖ್ಯಗುರು ಸೀತಾರಾಮ ಕೆ.ಜಿ, ಎಸ್ ಡಿಎಂಸಿ ಸದಸ್ಯ ಸದಾನಂದ ಎಸ್ ಸೌತೆಮಾರು, ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರೇಮಾ ಅನಿಸಿಕೆ ವ್ಯಕ್ತಪಡಿಸಿದರು. ಮುಖ್ಯಶಿಕ್ಷಕಿ ಮಿನಿ ವರ್ಗಿಸ್ ಸ್ವಾಗತಿಸಿ, ಶಿಕ್ಷಕಿ ಪ್ರಿಯಾಂಕಾ ವಂದಿಸಿದರು. ಶಿಕ್ಷಕಿ ವೀಣಾ ಅವರು ಕಾರ್ಯಕ್ರಮ ನಿರೂಪಿಸಿದರು.

ಸಂಭ್ರಮದ ಶಾಲಾ ಪ್ರಾರಂಭೋತ್ಸವ:

2026-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳಿಗೆ ಆರತಿ ಬೆಳಗಿಸಿ, ತಿಲಕವನ್ನಿಟ್ಟು ಸ್ವಾಗತಿಸಲಾಯಿತು. ಕುದ್ಮಾರು ಗ್ರಾಮ ಸಹಾಯಕ ಯೋಗೀಶ್ ಬರೆಪ್ಪಾಡಿ ಅವರ ತಾಯಿ ಸೇಸಮ್ಮ ಬಾಬು ಗೌಡರ ಸ್ಮರಣಾರ್ಥವಾಗಿ ನೂತನವಾಗಿ ದಾಖಲಾದ ಎಲ್ಲಾ ವಿದ್ಯಾರ್ಥಿಗಳಿಗೆ ಕಲಿಕಾ ಕಿಟ್ ಹಸ್ತಾಂತರ ಮಾಡುವ ಮೂಲಕ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು.

ವಿವಿಧ ಸೌಲಭ್ಯಗಳ ಉದ್ಘಾಟನೆ:
ಕುದ್ಮಾರು ಶಾಲೆಯಲ್ಲಿ ವಿವಿಧ ದಾನಿಗಳ ಸಹಕಾರದಿಂದ ನಿರ್ಮಾಣಗೊಂಡ ಮಕ್ಕಳ ಆಟದ ಪಾರ್ಕ್ ಬಾಲೋದ್ಯಾನ ನೂತನವಾಗಿ ಆರಂಭಗೊಂಡ ಎಲ್ ಕೆ ಜಿ ಮತ್ತು ಯು ಕೆ ಜಿ ತರಗತಿಗಳ ಉದ್ಘಾಟನೆ ನೆರವೇರಿತು. ವರ್ಗಾವಣೆಗೊಂಡ ಶಿಕ್ಷಕಿ ಶ್ರೀಲತಾ ಅವರು ಶಾಲೆಗೆ ಕಲರ್ ಪ್ರಿಂಟರ್ ಕೊಡುಗೆಯಾಗಿ ನೀಡಿದರು.

LEAVE A REPLY

Please enter your comment!
Please enter your name here