







ಪುತ್ತೂರುಬಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಸಾಲಿನ ಮಂತ್ರಿಮಂಡಲ ರಚನೆ ಚುನಾವಣೆ ಮೂಲಕ ನಡೆಯಿತು.ಶಾಲಾ ವಿದ್ಯಾರ್ಥಿ ನಾಯಕನಾಗಿ ಅಜಯ್ (7ನೇ ತರಗತಿ),ಉಪನಾಯಕನಾಗಿ ಪೂರ್ವಿಕ್ ಎಂ.ಪಿ.(6ನೇ ತರಗತಿ),ವಿರೋಧ ಪಕ್ಷದ ಮಂತ್ರಿಗಳಾಗಿ ಧನ್ವಿ (7ನೇ ತರಗತಿ) ಹಾಗೂ ತನ್ವಿ ಸಿ (6ನೇ ತರಗತಿ) ಆಯ್ಕೆಯಾದರು.


ಸಾಂಪ್ರದಾಯಿಕ ಮತ ಪೆಟ್ಟಿಗೆಯ ಜೊತೆಗೆ ಆಧುನಿಕ ತಂತ್ರಜ್ಞಾನದ ಡಿಜಿಟಲ್ ಇವಿಎಂ ಹಾಗೂ ವಿವಿಪಾಟ್ ಮಾದರಿಯನ್ನು ಬಳಸಿ ವಿದ್ಯಾರ್ಥಿಗಳು ಡಿಜಿಟಲ್ ಮತದಾನ ಮಾಡಿದ್ದು ಈ ಚುನಾವಣೆಯ ವಿಶೇಷವಾಗಿತ್ತು.ಮತಗಟ್ಟೆ ಅಧಿಕಾರಿಯಾಗಿ ಮುಖ್ಯಗುರುಗಳಾದ ಜೆನೆಟ್ ಡೇಝಿ ಸಿಕ್ವೇರಾ ಜವಾಬ್ದಾರಿ ನಿರ್ವಹಿಸಿ,ವಿದ್ಯಾರ್ಥಿಗಳಲ್ಲಿ ಬಾಲ್ಯದಲ್ಲೇ ಪ್ರಜಾಪ್ರಭುತ್ವದ ಮೌಲ್ಯಗಳು, ನಾಯಕತ್ವ ಗುಣಗಳು ಹಾಗೂ ಚುನಾವಣಾ ವ್ಯವಸ್ಥೆಯ ಅರಿವು ಮೂಡಿಸುವ ಉದ್ದೇಶದಿಂದ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಚುನಾವಣೆಯನ್ನು ಆಯೋಜಿಸಲಾಗಿದೆ ಎಂದರು.



ಶಾಲಾ ಶಿಕ್ಷಕಿ ವಿಜಯಲಕ್ಷ್ಮಿ ಹಾಗೂ ಫ್ಲಾವಿಯಾ ಸಿಲ್ವಿನ್ ಮೊಂತೆರೋ ಮತಗಟ್ಟೆ ಅಧಿಕಾರಿಗಳಾಗಿ ಶಾಯಿ ಹಚ್ಚುವ ಮೂಲಕ ಮಕ್ಕಳಿಗೆ ಮತದಾನದ ಹಕ್ಕು ಮತ್ತು ಜವಾಬ್ದಾರಿಯ ಅರಿವು ಮೂಡಿಸಿದರು.ಮತದಾನ ಪ್ರಕ್ರಿಯೆ ಮುಗಿದ ನಂತರ ಮತ ಎಣಿಕೆ ನಡೆಸಲಾಯಿತು.
ಜಯಗಳಿಸಿದ ನೂತನ ಪದಾಧಿಕಾರಿಗಳಿಗೆ ಶಾಲೆಯ ಶಿಕ್ಷಕಿ ಗೋದಾವರಿ ಟಿ.ಭಟ್ ಅವರು ಪ್ರಮಾಣ ವಚನ ಬೋಧಿಸಿದರು.ಶಾಲಾ ಮಂತ್ರಿ ಮಂಡಲದ ರಚನೆಯ ಮೇಲುಸ್ತುವಾರಿಯನ್ನು ಶಿಕ್ಷಕಿ ಸೌಮ್ಯ ಅವರು ನಿರ್ವಹಿಸಿ,ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.ಶಾಲೆಯ ಎಲ್ಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ಹಾಗೂ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಚುನಾವಣೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.










