







ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಹೊಸಮಜಲು ಜನತಾ ಕಾಲೋನಿ ಚರಂಡಿ ದುರಸ್ತಿಗೊಳಿಸಿ ಜನ ಸಾಮಾನ್ಯರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಹೊಸಮಜಲು ಬ್ರಾಂಚ್ ಸದಸ್ಯರು ಕೌಕ್ರಾಡಿ ಗ್ರಾ.ಪಂ.ಪಿಡಿಒ ಅವರಿಗೆ ಮನವಿ ಸಲ್ಲಿಸಿದ್ದಾರೆ.



ಹೊಸಮಜಲು ಜನತಾ ಕಾಲೋನಿಯ ಪ್ರವೇಶ ದ್ವಾರದ ಇಬ್ಬದಿಯ ಚರಂಡಿಗಳೆರಡು ಮಣ್ಣು, ಕಸ ಹಾಗೂ ತ್ಯಾಜ್ಯಗಳಿಂದ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಇದರಿಂದ ಚರಂಡಿಯ ಮೂಲಕ ಹಾದು ಹೋಗಬೇಕಾಗಿದ್ದ ಕೊಳಚೆ ನೀರುಗಳೆಲ್ಲವೂ ರಸ್ತೆಯ ಇಕ್ಕೆಲಗಳಲ್ಲಿ ತುಂಬಿಕೊಂಡಿರುವುದರಿಂದ ಜನ ಸಾಮಾನ್ಯರಿಗೆ ನಡೆದಾಡಲು ಹಾಗೂ ಬೈಕ್, ರಿಕ್ಷಾದಂತಹ ಲಘು ವಾಹನಗಳಿಗೆ ಸಂಚರಿಸಲು ಕಷ್ಟಕರವಾಗುತ್ತಿದೆ. ಆದ್ದರಿಂದ ಈ ಮನವಿಯನ್ನು ಶೀಘ್ರವಾಗಿ ಪರಿಶೀಲನೆ ಮಾಡಿ, ಒಳ ಚರಂಡಿ ವ್ಯವಸ್ಥೆಯನ್ನು ಸರಿಪಡಿಸುವ ಮೂಲಕ ಜನ ಸಾಮಾನ್ಯರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅವರು ವಿನಂತಿಸಿದ್ದಾರೆ. ಮೂರು ದಿನಗಳೊಳಗೆ ಸೂಕ್ತ ಕ್ರಮಕೈಗೊಳ್ಳದೇ ಹೋದಲ್ಲಿ, ಸ್ಥಳೀಯ ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ಗ್ರಾ.ಪಂ. ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಎಸ್ಡಿಪಿಐ ಸದಸ್ಯರಾದ ಸಿದ್ದೀಕ್ ಎಂ., ಸಿದ್ದೀಕ್ ಎನ್., ಜಾಫರ್ ಹಾಗೂ ಮುಸ್ತಫಾ ಅವರು ಗ್ರಾ.ಪಂ.ಪಿಡಿಒ ಅವರಿಗೆ ಮನವಿ ಸಲ್ಲಿಸಿದರು.












