







ಬಡಗನ್ನೂರು : ಶಿಕ್ಷಕ ವೃತ್ತಿಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತಗೊಂಡ ಮುಖ್ಯ ಶಿಕ್ಷಕ, ಬಡಗನ್ನೂರು ಗ್ರಾಮದ ಪಡುಮಲೆ ನಿವಾಸಿ ಕೆ.ಸಿ ಪಾಟಾಳಿ (78ವ)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಜೂ.17 ರಂದು ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಕೆ.ಸಿ.ಪಾಟಾಳಿ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ಕೆ.ಚಂದ ಪಾಟಾಳಿಯವರು ಶಿಕ್ಷಕರಾಗಿ, ಸಾಹಿತಿಯಾಗಿ, ಲೇಖಕರಾಗಿ ಜನಮನ್ನಣೆ ಗಳಿಸಿಕೊಂಡಿದ್ದಾರೆ. ಇವರು ತಮ್ಮ ವಿದ್ಯಾಭ್ಯಾಸವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡಗನ್ನೂರು, ಗಜಾನನ ಹಿರಿಯ ಪ್ರಾಥಮಿಕ ಶಾಲೆ ಈಶ್ವರಮಂಗಲ ಹಾಗೇ ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ಬೆಳ್ಳಾರೆಯಲ್ಲಿ ಪೂರೈಸಿ ಮಂಗಳೂರು ಕೊಡಿಯಾಲ್‌ಬೈಲ್‌ನಲ್ಲಿ ಶಿಕ್ಷಕ ತರಬೇತಿಯನ್ನು ಪಡೆದುಕೊಂಡಿದ್ದರು.ಪ್ರಥಮವಾಗಿ ಇರ್ದೆ ಉಪ್ಪಳಿಗೆ ಸರಕಾರಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಇವರು ಬಳಿಕ ಕುದ್ಮಾರು ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಆ ನಂತರದ ದಿನಗಳಲ್ಲಿ ಸುಳ್ಯಪದವು ಶ್ರೀ ಬಾಲಸುಬ್ರಹ್ಮಣ್ಯ ಶಾಲೆಯಲ್ಲಿ ಬಳಿಕ ವರ್ಗಾವಣೆಗೊಂಡು ಈಶ್ವರಮಂಗಲ ಗಜಾನನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ನಿವೃತ್ತಿಗೊಂಡಿದ್ದರು.



ಸಾಹಿತಿ, ಯಕ್ಷಗಾನ ಕಲಾವಿದ
ಕೆ.ಸಿ ಪಾಟಾಳಿಯವರು ಶಿಕ್ಷಕರಾಗಿ ಸಾಹಿತಿಯಾಗಿ ಯಕ್ಷಗಾನ ಕಲಾವಿದರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ವಾಗ್ಮಿಯಾಗಿ ಗುರುತಿಸಿಕೊಂಡಿದ್ದರು. ಪಡುಮಲೆ ಕ್ಷೇತ್ರ ದರ್ಶನ, ಭಾಮಿನಿ ಷಟ್ಪಧಿಯಲ್ಲಿರುವ ಶ್ರೀಅಯ್ಯಪ್ಪ ಸ್ವಾಮಿ ಚರಿತ್ರೆ, ಬಾಲ ರಶ್ಮಿ (ಶಿಶು ಗೀತೆಗಳ ಸಂಕಲನ)ಅಕ್ಷರ ದೀಪ( ಸಾಕ್ಷಾರತಾ ಗೀತಾವಳಿ), ಶ್ರೀ ಶಾಸ್ತಾರ ವಿಷ್ಣುಮೂರ್ತಿ ಭಜನಾವಳಿ, ರಾಜ್ಯಮಟ್ಟದ ಬಹುಮಾನಿತ ಕೃತಿ `ಪ್ರಬಂಧ ಸಂಗಮ’, ಯಕ್ಷಗಾನ ಅರ್ಥ ಸಾಹಿತ್ಯ `ಗುರುದಕ್ಷಿಣೆ’, ಯಕ್ಷಗಾನ ಪ್ರಸಂಗ ` ಪೂಮಾಣಿ ಕಿನ್ನಿಮಾಣಿ ದರ್ಶನ’, ಶ್ರೀ ಆಂಜನೇಯ ದರ್ಶ, ಸತ್ವಪರೀಕ್ಷೆ (ಯಕ್ಷಗಾನ ಅರ್ಥ ಸಾಹಿತ್ಯ), ಶ್ರೀ ಪಡುಮಲೆ ಕ್ಷೇತ್ರ ದರ್ಶನ( ಪರಿಷ್ಕೃತ ದ್ವಿತೀಯ ಆವೃತ್ತಿ) ಇತ್ಯಾದಿ ಅನೇಕ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ.
ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಇವರು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಿಗೂ ತನ್ನಿಂದ ಸಾಧ್ಯವಾಗುವ ಕೊಡುಗೆಗಳನ್ನು ನೀಡಿದ್ದಾರೆ. ಶ್ರೀ ಕೋಟಿ ಚೆನ್ನಯರ ತವರೂರು ಪಡುಮಲೆಯು ಪ್ರವಾಸಿ ತಾಣವಾಗಬೇಕು ಆ ಮೂಲಕ ಅಭಿವೃದ್ಧಿಯನ್ನು ಹೊಂದಬೇಕು ಎಂಬುದು ಕೆ.ಸಿ ಪಾಟಾಳಿಯವರು ಬಹುದಿನದ ಕನಸು ಆಗಿತ್ತು. ಪಡುಮಲೆ ಅಭಿವೃದ್ಧಿ ಸಮಿತಿ ಇದರಲ್ಲಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಕುಮುದಾಕ್ಷಿ , ಪುತ್ರಿಯರಾದ ಅನಿತಾ ಬಾಲಕೃಷ್ಣ, ಅರುಣಾ ಯತೀಶ್, ಮೊಮ್ಮಗ ಕೌಶಿಕ್, ಸೊಸೆ ಶರ್ಮಿಳಾ ಸೇರಿದಂತೆ ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು, ಶಿಷ್ಯವೃಂದವನ್ನು ಅಗಲಿದ್ದಾರೆ.










