






ಪುತ್ತೂರು: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಇಲ್ಲಿ ಜೂನ್ 20ರಂದು “ಸದೃಢ ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಯೋಗದ ಮಹತ್ವ” ಎಂಬ ಧ್ಯೇಯವಾಕ್ಯದೊಂದಿಗೆ ಯೋಗ ಹಾಗೂ ಮಾಹಿತಿ ಕಾರ್ಯಕ್ರಮ ಆಚರಿಸಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್‌ಡಿಎಂ ನೈಸರ್ಗಿಕ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಭಾಷಿಣಿ ಮಾತನಾಡಿ, ದೇಹ ಮತ್ತು ಮನಸ್ಸು ಸುಸ್ಥಿತಿಯಲ್ಲಿರಲು ಯೋಗ ಅತ್ಯವಶ್ಯಕ ಎಂದರು. ಯೋಗದ ಜೊತೆಗೆ ಪೌಷ್ಟಿಕ, ಆರೋಗ್ಯಕರ ಆಹಾರದ ಕ್ರಮಬದ್ಧ ಸೇವನೆ ಅತಿ ಅಗತ್ಯ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟು, ದಿನನಿತ್ಯದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಸರಳವಾಗಿ ತಿಳಿಸಿಕೊಟ್ಟರು.




ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಯೋಗವು ಸ್ಮರಣಶಕ್ತಿ, ಆರೋಗ್ಯ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ದಂಬೆಕ್ಕಾನ ಸದಾಶಿವ ರೈ, ಜಯಪ್ರಕಾಶ್ ನೂಜಿಬೈಲು, ಶ್ರೀಮತಿ ವತ್ಸಲಾ ಹಾಗೂ ಮುಖ್ಯೋಪಾಧ್ಯಾಯರು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್ ಸ್ವಾಗತಿಸಿ, ಶಿಕ್ಷಕಿ ಮಾನಸ ವಿ ಧನ್ಯವಾದಗೈದರು. ಶಿಕ್ಷಕಿ ಗೀತಾ ರೈ ಕೆ ಕಾರ್ಯಕ್ರಮ ನಿರೂಪಿಸಿದರು.










