ಕಡಬ ಸರಸ್ವತೀ ಪ್ರೌಢಶಾಲೆ ವಿದ್ಯಾರ್ಥಿಗಳ ಪ್ರವೇಶೋತ್ಸವ -ಎಸ್.ಎಸ್.ಎಲ್.ಸಿ.ಸಾಧಕರಿಗೆ ಅಭಿನಂದನೆ

0

ಕಡಬ: ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಪ್ರವೇಶೋತ್ಸವ ಹಾಗೂ ಎಸ್.ಎಸ್.ಎಲ್.ಸಿ ಸಾಧಕರ ಅಭಿನಂದನಾ ಕಾರ್ಯಕ್ರಮವು ಜೂನ್ 23 ರಂದು ಕೇವಳ ಹನುಮಾನ್ ನಗರದ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಂಟ್ರ ಮರ್ಧಾಳ ಇದರ ಉಪಾಧ್ಯಕ್ಷ ನಾರಾಯಣ ಶೆಟ್ಟಿ ಅತ್ಯಡ್ಕ ಆಗಮಿಸಿ ಹೋಮಕುಂಡಕ್ಕೆ ಘೃತಾಹುತಿ ಮಾಡಿ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕು, ಇಂತಹ ವಿದ್ಯಾ ಸಂಸ್ಥೆಯಲ್ಲಿ ಕಲಿಯುವಂತಹ ನೀವು ಪುಣ್ಯವಂತರು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ರವಿರಾಜ್ ಶೆಟ್ಟಿ ಕಡಬ ವಹಿಸಿ ಪ್ರಸ್ತುತ ಸಮಾಜದಲ್ಲಿ ಆಗುತ್ತಿರುವ ಘಟನೆಗಳ ಕುರಿತು ವಿದ್ಯಾರ್ಥಿ ಹಾಗೂ ಪೋಷಕರೊಂದಿಗೆ ಸವಿಸ್ತಾರವಾಗಿ ತಿಳಿಸಿದರು. ವೇದಿಕೆಯಲ್ಲಿ ಗೌರವ ಉಪಸ್ಥಿತಿಯಲ್ಲಿದ್ದ ಸಂಸ್ಥೆಯ ಸ್ಥಾಪಕರೂ, ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಕಾರ್ಯನಿರ್ವಹಣಾಧಿಕಾರಿ ವೆಂಕಟರಮರಾವ್ ಮಂಕುಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.


ಕಾರ್ಯಕ್ರಮದಲ್ಲಿ ನೂತನ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಹೋಮಕುಂಡಕ್ಕೆ ಘೃತಾಹುತಿಯನ್ನು ಮಾಡಿ ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು. ವೇದಿಕೆಯಲ್ಲಿ ಸರಸ್ವತೀ ವಿದ್ಯಾಲಯದ ಸಂಚಾಲಕಿ ಸವಿತಾ ಶಿವ ಸುಬ್ರಹ್ಮಣ್ಯ ಭಟ್, ಸಂಸ್ಥೆಯ ಮುಖ್ಯ ಶಿಕ್ಷಕಿ ಶೈಲಶ್ರೀ ರೈ.ಎಸ್. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಶಿವಪ್ರಸಾದ್ ರೈ ಮೈಲೇರಿ, ಪೋಷಕ ವೃಂದ, ಶಿಕ್ಷಕ -ಶಿಕ್ಷಕೇತರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಶಾಲಾ ನಾಯಕ ದಿಗಂತ್ 10ನೇ ತರಗತಿ ಸ್ವಾಗತಿಸಿ, ಪಿ.ಆರ್ ಚೇತನ್ ಗೌಡ 10ನೇ ತರಗತಿ ವಂದಿಸಿದರು. ಶಿಕ್ಷಕಿ ಸೌಮ್ಯ ಕೆ.ಎ. ಸಾಧಕರ ಸನ್ಮಾನ ಪತ್ರವನ್ನು ವಾಚಿಸಿ, ವಿದ್ಯಾರ್ಥಿನಿ ಹರಿಪ್ರಿಯಾ ಹರಿದಾಸ್ 10ನೇ ತರಗತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here