






ರಾಮಕುಂಜ: ಜೂ.10ರಂದು ಹೃದಯಾಘಾತದಿಂದ ನಿಧನರಾದ ಕಡಬ ತಾಲೂಕಿನ ಹಳೆನೇರೆಂಕಿ ಗ್ರಾಮದ ರಾಮಮಜಲುಗುತ್ತು ನಿವಾಸಿ, ಪ್ರಗತಿಪರ ಕೃಷಿಕರಾಗಿದ್ದ ಕಮಲ ಬಿ.ರೈ ಅವರ ಉತ್ತರಕ್ರಿಯೆ ಹಾಗೂ ನುಡಿನಮನ ಕಾರ್ಯಕ್ರಮ ಜೂ.22ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ ನಡೆಯಿತು.



ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರು ನುಡಿನಮನ ಸಲ್ಲಿಸಿ, ಕಮಲ ಬಿ. ರೈ ಅವರು ಔಪಚಾರಿಕ ಶಿಕ್ಷಣ ಪಡೆಯುವ ಅವಕಾಶದಿಂದ ವಂಚಿತರಾಗಿದ್ದರೂ, ಜೀವನದ ಪಾಠಗಳನ್ನು ಅನುಭವದ ಮೂಲಕ ಕಲಿತು ಕುಟುಂಬದ ಶ್ರೇಯೋಭಿವೃದ್ಧಿಗೆ ತಮ್ಮ ಸಂಪೂರ್ಣ ಜೀವನವನ್ನು ಸಮರ್ಪಿಸಿದ ಆದರ್ಶ ಗೃಹಿಣಿಯಾಗಿದ್ದರು. 18ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಮನೆಯ ನಿರ್ವಹಣೆ, ಕುಟುಂಬದ ಸದಸ್ಯರ ಆರೈಕೆ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದು, ಶ್ರಮಜೀವಿಯಾಗಿ ಎಲ್ಲರಿಗೂ ಮಾದರಿಯಾಗಿದ್ದರು. ಮಕ್ಕಳು ಚಿಕ್ಕವರಾಗಿದ್ದಾಗಲೇ ಪತಿಯನ್ನು ಕಳೆದುಕೊಂಡ ಅವರು, ಜೀವನದ ಅತ್ಯಂತ ಕಠಿಣ ಸಂದರ್ಭವನ್ನು ಧೈರ್ಯದಿಂದ ಎದುರಿಸಿ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತರು. ಪಶುಪಾಲನೆ ಮತ್ತು ಇತರ ಶ್ರಮದಾಯಕ ಕೆಲಸಗಳ ಮೂಲಕ ಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯಕ್ಕಾಗಿ ಅವಿರತವಾಗಿ ದುಡಿದು ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಿದರು. ಅವರ ತ್ಯಾಗ, ಶ್ರಮ ಮತ್ತು ದೂರದೃಷ್ಟಿಯ ಫಲವಾಗಿ ಮಕ್ಕಳು ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಉತ್ತಮ ಸ್ಥಾನಮಾನವನ್ನು ಗಳಿಸಿದ್ದಾರೆ ಎಂದರು.



ದಿ| ಕಮಲ ಅವರು ಕುಟುಂಬದ ಸದಸ್ಯರಿಗೆ ಪ್ರೀತಿಯ ಅಪ್ಪಿ ಅಕ್ಕ, ಮೈದುನರಿಗೆ ಅತ್ಯಂತ ಮೆಚ್ಚಿನ ಅತ್ತಿಗೆ ಹಾಗೂ ಬಂಧುಬಳಗದ ಎಲ್ಲರಿಗೂ ಆತ್ಮೀಯರಾಗಿದ್ದರು. ಊರಿನ ಜನರಿಗೆ ಸಹಾಯಹಸ್ತ ಚಾಚುವ ರಾಮಜಾಲಿನ ಅಕ್ಕ ಎಂದೇ ಪರಿಚಿತರಾಗಿದ್ದರು. ತಮ್ಮ ಪತಿ ಆರ್. ಬಾಬು ರೈ ಅವರ ಸ್ಮರಣಾರ್ಥವಾಗಿ ಊರಿನ ಶಾಲೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ದತ್ತಿನಿಧಿಯ ಮೂಲಕ ವಿದ್ಯಾರ್ಥಿವೇತನ ನೀಡುವ ಮೂಲಕ ಶಿಕ್ಷಣ ಸೇವೆಯಲ್ಲೂ ತೊಡಗಿಕೊಂಡಿದ್ದರು. ಮನೆಗೆ ಬರುವ ಪ್ರತಿಯೊಬ್ಬ ಅತಿಥಿಯನ್ನು ಆತ್ಮೀಯತೆಯಿಂದ ಸ್ವಾಗತಿಸಿ, ಪ್ರೀತಿ ಮತ್ತು ಗೌರವದಿಂದ ಸತ್ಕರಿಸುವ ಗುಣ ಅವರದ್ದಾಗಿತ್ತು. ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಕಾರ್ಯಕ್ರಮಗಳಲ್ಲಿ ಅನ್ನದಾನದ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿದ್ದರು. ಸಹಾಯಕ್ಕಾಗಿ ಬಂದ ಯಾರನ್ನೂ ಬರಿಗೈಯಲ್ಲಿ ಕಳುಹಿಸದ ಉದಾರ ಮನೋಭಾವ ಅವರ ವ್ಯಕ್ತಿತ್ವದ ವಿಶೇಷತೆಯಾಗಿತ್ತು. ಜೀವನದ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ನಂತರ, ತಮ್ಮ ಮೊಮ್ಮಕ್ಕಳೊಂದಿಗೆ ಸಂತೋಷದ ವೃದ್ಧಾಪ್ಯ ಜೀವನವನ್ನು ಅನುಭವಿಸುತ್ತಿದ್ದರು. ಕುಟುಂಬದ ಪ್ರತಿಯೊಂದು ಸಂತೋಷದ ಕ್ಷಣದಲ್ಲಿ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಇತ್ತೀಚೆಗಷ್ಟೇ ತಮ್ಮ ಮಗಳು ಶಾಂಭವಿ ಅವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಅದೇ ರೀತಿ ತಮ್ಮ ಪುತ್ರ ಸಂತೋಷ್ ರೈ ಅವರ ಗೃಹಪ್ರವೇಶ ಸಮಾರಂಭದಲ್ಲಿಯೂ ಸಂತೋಷದಿಂದ ಪಾಲ್ಗೊಂಡು ಕುಟುಂಬದೊಂದಿಗೆ ಅಮೂಲ್ಯ ಕ್ಷಣಗಳನ್ನು ಹಂಚಿಕೊಂಡಿದ್ದರು. ಸರಳತೆ, ಶ್ರಮ, ತ್ಯಾಗ, ಕರುಣೆ, ಆತಿಥ್ಯ ಮತ್ತು ಶಿಕ್ಷಣದ ಮೇಲಿನ ಅಪಾರ ಗೌರವದಿಂದ ಕೂಡಿದ ಅವರ ಜೀವನ ಎಲ್ಲರಿಗೂ ಆದರ್ಶವಾಗಿದೆ. ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಮೌಲ್ಯಗಳು, ಸಂಸ್ಕಾರಗಳು ಮತ್ತು ಅವರು ತೋರಿಸಿದ ಜೀವನ ಮಾರ್ಗವು ಸದಾ ನಮ್ಮೊಂದಿಗೆ ಉಳಿಯುತ್ತದೆ. ಅವರ ಪವಿತ್ರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದರು.
ಖ್ಯಾತ ಕಲಾನಿರ್ದೇಶಕ ಶಶಿಧರ ಅಡಪ ಬೆಂಗಳೂರು, ಬೆಂಗಳೂರಿನಲ್ಲಿ ಚಾರ್ಟಡ್ ಅಕೌಂಟೆಂಟ್ ಆಗಿರುವ ಚಂದನ್ಕುಮಾರ್ ಹೆಗ್ಡೆ, ಸಿಎ ರಾಘವೇಂದ್ರ ಶೆಟ್ಟಿ, ಕೆದಿಕಂಡೆಗುತ್ತು ಜಯಂತ ಶೆಟ್ಟಿ, ಬಾಲಕೃಷ್ಣ ಆಳ್ವ, ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷ ಪ್ರಶಾಂತ್ಕುಮಾರ್ ರೈ ಮನವಳಿಕೆ, ಕಾರ್ಯದರ್ಶಿ ಲೋಕನಾಥ ರೈ, ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್ಕುಮಾರ್ ರೈ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೇನೇಜರ್ ರತ್ನಾಕರ ರೈ ಬಂಟ್ರಿಯಾಲ್ ಪರಾರಿಗುತ್ತು ನೆಲ್ಯಾಡಿ, ವಿಜಯ ಬ್ಯಾಂಕ್ನ ನಿವೃತ್ತ ಹಿರಿಯ ವ್ಯವಸ್ಥಾಪಕರಾದ ಚಂದ್ರಹಾಸ ರೈ, ಸುರೇಂದ್ರ ರೈ ಮುಂಡಾಳಗುತ್ತು, ಮೂಲ್ಕಿ ಆಸರೆ ಕನ್ಸ್ಟ್ರಕ್ಷನ್ ಮಾಲಕ ನಿತಿನ್ ಶೆಟ್ಟಿ ಪಂಜಿನಡ್ಕ, ತೋಡಾರ್ ಸಂತೋಷ್ ಶೆಟ್ಟಿ ಮತ್ತು ಸಹೋದರರು, ಅಡೆಂಜ ಬಾಲಕೃಷ್ಣ ಶೆಟ್ಟಿ, ಪುಷ್ಪರಾಜ ಶೆಟ್ಟಿ ಬಾವಂತಬೆಟ್ಟು ಧರ್ಮಸ್ಥಳ, ಬೆಂಗಳೂರು ಸೌಂದರ್ಯ ಪ್ಯಾರಾಡೈಸ್ ಹೋಟೆಲ್ನ ಪಾಲುದಾರ ಉತ್ತಮ್ಕುಮಾರ್ ಶೆಟ್ಟಿ, ಕಲ್ಲಂಗಳಗುತ್ತು ಬಾಲಕೃಷ್ಣ ಶೆಟ್ಟಿ, ಪೆಲತ್ತಡಿ ಧೀರಜ್ ಶೆಟ್ಟಿ, ಚೇತನ್ ರೈ ಕೊಡ್ಮಾಣುಗುತ್ತು, ರತನ್ ರೈ ಕೊಡ್ಮಾಣುಗುತ್ತು, ಬಟ್ಲಡ್ಕ ನಾರಾಯಣ ರೈ, ಗುತ್ತುಪಾಲು ಜನಾರ್ದನ ರೈ, ಕೃಷ್ಣ ಶೆಟ್ಟಿ ಕಡಬ, ಕಾರ್ಕಳ ಕಳಂಜಾರು ವಿನೀತ್ ಹೆಗ್ಡೆ, ಬೆಳಗಾಂ ಹೋಟೆಲ್ ಉದ್ಯಮಿ ಜಯ ಶೆಟ್ಟಿ, ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಆನಂದ ಎಸ್.ಟಿ., ಪ್ರೌಢಶಾಲೆಯ ಮುಖ್ಯಶಿಕ್ಷಕಿ ಗಾಯತ್ರಿ ಯು.ಎನ್., ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಲೋಹಿತಾ, ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಪ್ರಾಂಶುಪಾಲ ಪ್ರವೀದ್, ಶಿಕ್ಷಕವೃಂದ, ಚನಿಲ ತಿಮ್ಮಪ್ಪ ಶೆಟ್ಟಿ, ನಿವೃತ್ತ ಡಿವೈಎಸ್ಪಿ ಶಾಂತರಾಮ ಶೆಟ್ಟಿ, ದೀಪ್ತಿ ರೈ ಬೆಂಗಳೂರು, ನರೇಶ್ ರೈ ಪುತ್ತೂರು, ನೇಮಿರಾಜ್ ಶೆಟ್ಟಿ ಬಿ.ಸಿ.ರೋಡು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ನಿರ್ದೇಶಕ ವಿಶ್ವನಾಥ ಶೆಟ್ಟಿ ನಾರಾವಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮೃತರ ಮಕ್ಕಳಾದ ಶಾಂಭವಿಮನೋಜ್, ಸತೀಶ್ ರೈ, ರಮೇಶ್ ರೈ, ಸಂತೋಷ್ ರೈ, ಶೋಭಾಗುರುರಾಜ್, ಅಳಿಯಂದಿರಾದ ಮನೋಜ್ಕುಮಾರ್ ಶೆಟ್ಟಿ ಚಿತ್ರಾಪುಗರಡಿ ಮೂಲ್ಕಿ, ಗುರುರಾಜ್ ರೈ ಮುಂಡಾಳಗುತ್ತು, ಸೊಸೆಯಂದಿರಾದ ದೀಪಾಸತೀಶ್, ಸಂಚಿತಾರಮೇಶ್, ಸವಿತಾಸಂತೋಷ್, ಮೊಮ್ಮಕ್ಕಳಾದ ಮೈಥಿಲಿ ಎಸ್.ರೈ, ಮಾನ್ವಿ ಆರ್.ರೈ, ಮಯೂರಿ ಎಸ್.ರೈ, ಸಮೀಕ್ಷ್ ಎಸ್.ರೈ, ಸಂಹಿತಾ ಎಸ್.ರೈ, ಆರ್ವಿಗುರುರಾಜ್, ಹರ್ಷಾಮನೋಜ್ ಅತಿಥಿಗಳನ್ನು ಸತ್ಕರಿಸಿದರು. ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ 1 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.










