ಮುಂಡೂರು; ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯಿಂದ ಕೋಲ್ಡ್ ಸ್ಟೋರೇಜ್ ಲೋಕಾರ್ಪಣೆ

0

ಪುತ್ತೂರು: ರೈತ ದೇಶದ ಬೆನ್ನೆಲುಬು. ರೈತ ಭದ್ರವಾದಾಗ ದೇಶ ಸುಭದ್ರ. ಈ ನಿಟ್ಟಿನಲ್ಲಿ ಗ್ರಾಮಜನ್ಯ ಸಂಸ್ಥೆಯ ರೈತರಿಗೆ ಶಕ್ತಿ ನೀಡುವ ಕೆಲಸವಾಗಿದೆ. ರೈತರನ್ನು ಸದೃಢಗೊಳಿಸುವ ಸ್ವಾರ್ಥ ರಹಿತ ಸೇವೆಯ ಮೂಲಕ ಗ್ರಾಮಜನ್ಯ ಸಂಸ್ಥೆಯು ಅತ್ಮನಿರ್ಭರ ಭಾರತಕ್ಕೆ ದಿಟ್ಟ ಹೆಜ್ಜೆ ಇಟ್ಟಿರುವುದು ಅಭಿನಂದನೀಯ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಹೇಳಿದರು.


ಮುಂಡೂರಿನ ಹಿಂದಾರ್‌ನಲ್ಲಿರುವ ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯು ನೂತನವಾಗಿ ಪ್ರಾರಂಭಿಸಿದ ಶೈತ್ಯಾಗಾರ(ಕೋಲ್ಡ್ ಸ್ಟೋರೇಜ್)ನ್ನು ಜೂ.25ರಂದು ಉದ್ಘಾಟಿಸ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಬಹಳಷ್ಟು ಮಂದಿ ರೈತರಿದ್ದಾರೆ. ಪ್ರತಿಯೊಬ್ಬರೂ ಸಂಸ್ಥೆಯೊಂದಿಗೆ ಕೈ ಜೋಡಿಸಿದಾಗ ಗ್ರಾಮಜನ್ಯ ಸಂಸ್ಥೆಯು ಭಾರತದಲ್ಲಿ ನಂಬರ್ ವನ್ ಆಗಲಿದೆ. ವೈಜ್ಞಾನಿಕವಾಗಿ ಸಂಸ್ಕರಿಸಿದ ಗ್ರಾಮಜನ್ಯದ ಶುದ್ಧ ಜೇನಿನ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ರಾರಾಜಿಸಲಿ. ಸಂಸ್ಥೆಯ ಆಧುನಿಕ ಶೈತ್ಯಾಗಾರವನ್ನು ಪ್ರಾರಂಭಿಸಿದ್ದು ಇನ್ನು ರೈತ ಬೆಳೆದ ಹಣ್ಣ, ತರಕಾರಿಗಳು ಕೊಳೆತು ಬಿಸಾಡುವ ಪ್ರಮೇಯವೇ ಇಲ್ಲ. ಸಂಸ್ಥೆಯ ಸಾಧನೆಯನ್ನು ಮನ್‌ಕಿ ಬಾತ್‌ನಲ್ಲಿ ಪ್ರಧಾನಿಯವರು ಕೊಂಡಾಡಿದ್ದು ಸಾಧನೆ ಇಮ್ಮಡಿಯಾಗಿದೆ. ಗ್ರಾಮಜನ್ಯದ ಜೇನಿನ ಉತ್ಪನ್ನವನ್ನು ಪ್ರಧಾನಿ ಮೋದಿಯವರು ಸವಿಯುವಂತಾಗಲಿ. ಮುಂದಿನ ಅಧಿವೇಶದಲ್ಲಿ ಗ್ರಾಮಜನ್ಯದ ಸಾಧನೆಯನ್ನು ತಿಳಿಸುವ ಮೂಲಕ ರಾಜ್ಯದಾದ್ಯಂತ ಪಸರಿಸಲಾಗುವುದು ಎಂದು ಹೇಳಿದರು.


ಮುಳಿಯ ಜ್ಯುವೆಲ್ಸ್‌ನ ಮುಖ್ಯ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಸಣ್ಣ ಮಟ್ಟದಲ್ಲಿ ಪ್ರಾರಂಭವಾದ ಗ್ರಾಮಜನ್ಯ ಸಂಸ್ಥೆಯು ಇಂದು ಅಗಾಧವಾಗಿ ಬೆಳೆದು ಇಂದು ಕೃಷಿಗೆ ಪೂರಕವಾಗಿ ಶಕ್ತಿ ನೀಡುವ ಕೆಲಸವಾಗುತ್ತಿದೆ. ಪುತ್ತೂರು ತಾಲೂಕಿಗೆ 5೦೦-1೦೦೦ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್‌ನ ಆವಶ್ಯಕತೆಯಿದೆ. ಇದರಲ್ಲಿ ಗ್ರಾಮಜನ್ಯ ಸಂಸ್ಥೆಯ ಪ್ರಥಮ ಹೆಜ್ಜೆಯಿಟ್ಟಿದೆ. ಕೋಲ್ಡ್ ಸ್ಟೋರೇಜ್ ಆವಶ್ಯಕತೆಯ ಬಗ್ಗೆ ಜನರಿಗೆ ಅರಿವಾಗಬೇಕು ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಮೂಲಚಂದ್ರ ಕುಕ್ಕಾಡಿ ಮಾತನಾಡಿ, ರೈತರ ಆದಾಯ ದ್ವಿಗುಣ ಮಾಡಬೇಕು ಎಂಬ ದೇಶದ ಪ್ರಧಾನಿಯವರ ಆಶಯವಿದೆ. ಅದೇ ಮೂಲ ಉದ್ದೇಶದಂದ ಹೊಸ ಸಾಹಸಕ್ಕೆ ಕೈ ಹಾಕಿದ್ದೇವೆ. ಶೈತ್ಯಾಗಾರದ ಮುಖಾಂತರ ರೈತರು ಬೆಳೆದ ತರಕಾರಿ, ಹಣ್ಣು, ಆಹಾರ ವಸ್ತುಗಳನ್ನು ದೀರ್ಘ ಕಾಲ ಸಂಗ್ರಹಿಸಿಡಲು ಅವಕಾಶವಿದೆ. ಜೊತೆಗೆ ಮೌಲ್ಯ ವರ್ಧನೆಗೂ ಸಹಕಾರಿಯಾಗಲಿದೆ ಎಂದು ಹೇಳಿದರು.


ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಶೈತ್ಯಾಗಾರದ ಪ್ರಥಮ ಗ್ರಾಹಕರಾಗಿರುವ ಪಿಂಗಾರ ಸಂಸ್ಥೆಯ ಅಧ್ಯಕ್ಷ ರಾಮ್‌ಕಿಶೋರ್, ನಿತ್ಯ ಚಪಾತಿಯ ರಾಧಾಕೃಷ್ಣ ಇಟ್ಟಿಗುಂಡಿಯವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.


ಸಂಸ್ಥೆಯ ನಿರ್ದೇಶಕರಾದ ನಿರಂಜನ ಪೋಳ್ಯ ಸ್ವಾಗತಿಸಿದರು. ರಾಮ್‌ಪ್ರತೀಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಶಸ್ವಿನಿ ಶಾಸ್ತ್ರಿ ವಂದಿಸಿದರು. ಲೆಕ್ಕಿಗ ಕೃಷ್ಣಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಹರ್ಷ ಕುಮಾರ್, ಬಲರಾಮ, ಶಂಕರ ನಾರಾಯಣ ಭಟ್ ಖಂಡಿಗೆ, ಸುಬ್ರಾಯ ಶೆಟ್ಟಿಮಜಲು, ಸಲಹಾ ಸಮಿತಿಯ ಎಂ.ಜಿ ಸತ್ಯನಾರಾಯಣ ಹಾಗೂ ಯದುಕುಮಾರ್ ಹಾಗೂ ಸದಸ್ಯರು ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

2023ರಲ್ಲಿ ವಿವೇಕಾನಂದ ನಡೆದ ಕೃಷಿ ಮೇಳದ ಪರಿಣಾಮವಾಗಿ ಗ್ರಾಮಜನ್ಯ ಸಂಸ್ಥೆಯ ಕಾರ್ಯವು ರಾಷ್ಟ್ರೀಯ ಮಾಧ್ಯಮದಲ್ಲಿ ಪ್ರಸಾರವಾಗಿರುವುದನ್ನು ಕಂಡ ದೆಹಲಿಯಿಂದ ಇಲಾಖೆಯ ಅಧಿಕಾರಿಯೋರ್ವರು ಕರೆ ಮಾಡಿ ಸರಕಾರದ ವಿವಿಧ ಯೋಜನೆಗಳಲ್ಲಿ ಅನುದಾನಗಳು ದೊರೆಯುತ್ತಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ನಮ್ಮ ಸಣ್ಣ ಯೋಜನೆಗೆ ಇಲಾಖೆಯವರು ರೂ.5ಕೋಟಿ ಅನುದಾನದ ಸಲಹೆ ನೀಡಿದ್ದರು. ಕೇಂದ್ರ ಸರಕಾರ ರೂ.2ಕೋಟಿ ಅನುದಾನ ಹಾಗೂ ರೂ.3ಕೋಟಿ ಬ್ಯಾಂಕ್ ಸಾಲ ಸೇರಿದಂತೆ ಕಟ್ಟಡ ನಿರ್ಮಿಸಿ, ಯಂತ್ರೋಪಕರಣಗಳ ಖರೀದಿ ಮಾಡಿದೆ. ಬಹಳಷ್ಟು ಮಂದಿ ಜೇನು ಉತ್ಪಾದಕರು ಅವರ ಉತ್ಪನ್ನವನ್ನು ಸಂಸ್ಕರಿಸಿ, ಅಭಿವೃದ್ದಿ ಪಡಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಉತ್ಕೃಷ್ಣ ಗುಣಮಟ್ಟದ ಖಾಸಗಿ ಲ್ಯಾಬೋರೇಟರಿ ಗ್ರಾಮ ಜನ್ಯದಲ್ಲಿ ಮಾತ್ರವೇ ಇದ್ದು 12 ರೀತಿಯಲ್ಲಿ ಜೇನಿನ ಗುಣಮಟ್ಟ ಪರೀಕ್ಷಿಸಬಹುದು. ಪ್ರತಿದಿನ 15 ಟನ್ ಜೇನು ಸಂಸ್ಕರಿಸುವ ಸಾಮರ್ಥ್ಯ ಸಂಸ್ಥೆಯಲ್ಲಿದೆ. ಕೃಷಿಕರಿಗೆ, ಉದ್ಯಮಿಗಳು ಹಾಗೂ ಸಂಸ್ಥೆ ಒಂದಕ್ಕೊಂದು ಪೂರಕವಾಗಿ ಬೆಳೆಯಲು ಆಧುನಿಕ ಕೋಲ್ಡ್ ಸ್ಟೋರೇಜ್ ಸಹಕಾರಿಯಾಗಲಿದೆ. ಜೇನಿನ ಗಿಫ್ಟ್‌ಬಾಕ್ಸ್‌ಗಳನ್ನು ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್‌ಕಿ ಬಾತ್‌ನಲ್ಲಿ ಸಂಸ್ಥೆಯ ಜೇನು ಉತ್ಪನ್ನದ ಬಗ್ಗೆ ಉಲ್ಲೇಖಿಸಿದ್ದು ಶೀಘ್ರವೇ ಸಂಸ್ಥೆ ಜೇನಿನ ಉತ್ಪನ್ನವನ್ನು ಪ್ರಧಾನಿಯವರಿಗೆ ತಲುಪಿಸಿ, ಸವಿಯುವಂತೆ ಮಾಡಲಾಗುವುದು.
-ರಾಮ್‌ಪ್ರತೀಕ್,
ನಿರ್ದೇಶಕರು, ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆ

LEAVE A REPLY

Please enter your comment!
Please enter your name here