






ಪುತ್ತೂರು: ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಮೇನಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪ ಗುರುವಾರ ರಾತ್ರಿ ಚಿರತೆಯೊಂದು ರಸ್ತೆ ದಾಟುವುದನ್ನು ನೋಡಿದ್ದೇನೆ ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಚಿರತೆಯ ಫೋಟೋ ವೈರಲ್ ಆಗಿದೆ. ಇದೀಗ ಚಿರತೆ ಪ್ರತ್ಯಕ್ಷ ಸುದ್ದಿ ಗ್ರಾಮಸ್ಥರಲ್ಲಿ ಹಾಗೂ ಪೋಷಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಗ್ರಾಮಸ್ಥ ಚಂದ್ರಶೇಖರ್ ಎಂಬವರು ಮನೆಗೆ ಬರುವಾಗ ಮೇನಾಲ ಎಂಬಲ್ಲಿ ಚಿರತೆಯೊಂದು ಮುಖ್ಯ ರಸ್ತೆಯನ್ನು ದಾಟುವುದನ್ನು ನೋಡಿ, ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿ ಜಾಗ್ರತೆಯಿಂದ ಇರುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.


ಈ ವಿಚಾರದ ಫೋಟೋ, ವಿಡಿಯೋಗಳು ವಾಟ್ಸ್ಆ್ಯಪ್, ಫೇಸ್ಬುಕ್ನಲ್ಲಿ ಹರಿದಾಡುತ್ತಿದ್ದು, ಜನರು ಮತ್ತಷ್ಟು ಭಯಭೀತರಾಗಿದ್ದಾರೆ. ಸ್ಥಳೀಯರು ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳದಲ್ಲಿ ಪರಿಶೀಲನೆ ನಡೆಸಿದರೂ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಹಿಂದಿರುಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಸಂದೇಶಗಳಿಂದ ಹಾಗೂ ಸರಿಯಾದ ಮಾಹಿತಿ ಇಲ್ಲದೇ ಇರುವುದರಿಂದ ಚಿರತೆ ಇದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದು ವೈರಲ್ ಆಗುತ್ತಿರುವ ಫೋಟೋ ನಮ್ಮ ಭಾಗದ್ದೇ ಅಂತ ಖಚಿತಪಡಿಸಲು ಆಗಿಲ್ಲ. ಆದರೂ ಗ್ರಾಮಸ್ಥರು ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದ್ದಾರೆ.



ಶಾಲೆಗೆ ಹೋಗಲು ಮಕ್ಕಳ ಹಿಂದೇಟು: ಚಿರತೆ ಇದೆ ಎನ್ನುವ ಸುದ್ದಿ ಹಬ್ಬಿದರಿಂದ ಭಯಭೀತಗೊಂಡಿರುವ ಸ್ಥಳೀಯ ಮಕ್ಕಳು ಶಾಲೆಗೆ ಹೋಗಲು ಹಿಂಜರಿಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜೂ.27ರಂದು ಸ್ಥಳೀಯ ಶಾಲೆಗೆ ಕೆಲವು ಮಕ್ಕಳು ಗೈರಾಗಿದ್ದು ತೋಟಕ್ಕೆ ಕೆಲಸಕ್ಕೆ ಹೋಗುವ ಕಾರ್ಮಿಕರೂ ಕೆಲಸಕ್ಕೆ ಹೋಗಲು ಹಿಂಜರಿಯುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಮೊಬೈಲ್ ಒಳಗೆ ಚಿರತೆ ಓಡಾಟ!! ಮೇನಾಲ, ಈಶ್ವರಮಂಗಲ ಪರಿಸರದಲ್ಲಿ ಚಿರತೆಯ ಸದ್ದು ಜೋರಾಗಿ ಕೇಳಿ ಬಂದಿದ್ದು ಸಾಮಾಜಿಕ ತಾಣದಲ್ಲಿ ಚಿರತೆಯ ಫೋಟೋವೊಂದು ವೈರಲ್ ಆಗುತ್ತಿದ್ದು ಅದು ಮೇನಾಲದಲ್ಲಿ ಕಂಡು ಬಂದ ಚಿರತೆ ಎಂದು ವದಂತಿ ಹಬ್ಬಿದೆ. ಚಿರತೆ ಇದೆಯೋ ಇಲ್ಲವೋ ಗೊತ್ತಿಲ್ಲ, ಸ್ಥಳೀಯ ಪರಿಸರದವರ ಮೊಬೈಲ್ ನಲ್ಲಿ ಚಿರತೆಯ ಓಡಾಟ ಜೋರಾಗಿ ಕಂಡು ಬಂದಿದೆ ಎಂದು ಹೆಸರು ಹೇಳಲಿಚ್ಚಿಸದ ಸ್ಥಳೀಯರೋರ್ವರು ತಿಳಿಸಿದ್ದಾರೆ.









