






ದೇವಾಲಯಗಳ ಆಸ್ತಿ ರಕ್ಷಣೆಗೆ ಕಾರ್ಯೋನ್ಮುಖರಾಗಲು ಸರಕಾರದ ನಿರ್ದೇಶನ: ಶರತ್


ಉಪ್ಪಿನಂಗಡಿ: ರಾಜ್ಯದಲ್ಲಿ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳ ಆಸ್ತಿ ರಕ್ಷಣೆಯ ವಿಚಾರದಲ್ಲಿ ರಾಜ್ಯ ಸರಕಾರ ವಿಶೇಷ ಮುತುವರ್ಜಿ ವಹಿಸಿದ್ದು, ಈ ಸಂಬಂಧ ಕಂದಾಯ ಹಾಗೂ ಮುಜರಾಯಿ ಇಲಾಖಾಧಿಕಾರಿಗಳು ಜಂಟಿಯಾಗಿ ಕಾರ್ಯೋನ್ಮುಖರಾಗಲು ಸರಕಾರ ನಿರ್ದೇಶನ ನೀಡಿದೆ ಎಂದು ರಾಜ್ಯ ಮುಜರಾಯಿ ಇಲಾಖೆಯ ಆಯುಕ್ತ ಶರತ್ ಬಿ. ತಿಳಿಸಿದರು.



ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯಕ್ಕೆ ಜೂ.28ರ ರಾತ್ರಿ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದ ಸಂಧರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಕಂದಾಯ ಹಾಗೂ ಮುಜರಾಯಿ ಇಲಾಖೆಗಳಿಗೆ ಒಬ್ಬರೇ ಮಂತ್ರಿಗಳಿರುವುದರಿಂದ ದೇವಾಲಯಗಳ ಆಸ್ತಿ ರಕ್ಷಣೆಯ ವಿಚಾರದಲ್ಲಿ ಯೋಜನಾಬದ್ಧವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಡಿವಿಜನ್ವಾರು ಸಭೆಗಳನ್ನು ಕರೆದು ಸಮಸ್ಯೆಗಳನ್ನು ಮತ್ತು ಅವುಗಳ ಪರಿಹಾರದ ಬಗ್ಗೆ ವಿಚಾರ ವಿಮರ್ಷೆ ನಡೆಸಲಾಗುತ್ತಿದೆ ಎಂದರು.

ದೇವಾಲಯದ ಹಣದಿಂದ ಅಭಿವೃದ್ಧಿ ಕಾರ್ಯಕ್ಕೆ ವಿಳಂಬ ನೀತಿ ಸರಿಯೇ ?:
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಸ್ವಂತ ನಿಧಿಯಿಂದ ದೇವಾಲಯದಲ್ಲಿ ಸಭಾಂಗಣ ನಿರ್ಮಾಣಕ್ಕೆ ಸಂಬಂಧಿಸಿ ಕಡತಗಳು ಕಚೇರಿ ಯಿಂದ ಕಚೇರಿಗೆ ಅಲೆದಾಡುತ್ತಿದೆ ವಿನಹ ವರ್ಷ ಕಳೆದರೂ ಇಲಾಖೆಯಿಂದ ಅನುಮೋದನೆ ದೊರೆತ್ತಿಲ್ಲ. ಸರಕಾರದ ಈ ವಿಳಂಬ ನೀತಿ ಭಕ್ತ ಜನತೆಗೆ ಅಸಮಾಧಾನ ತಂದಿದೆ ಎಂದು ಮಾಧ್ಯಮ ಪ್ರತಿನಿಧಿಗಳು ಗಮನ ಸೆಳೆದಾಗ , ಇಲಾಖೆಯೊಳಗಿನ ಕೆಲ ಅಧಿಕಾರಿಗಳ ತಪ್ಪು ನಡೆಯಿಂದಾಗಿ ಈ ಅವಾಂತರಗಳು ಘಟಿಸಿವೆ. ಮುಂದಕ್ಕೆ ಇಲಾಖಾ ಪ್ರಕ್ರಿಯೆಯಲ್ಲಿನ ಅನಗತ್ಯ ವಿಳಂಬವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು ಹಾಗೂ ಉಪ್ಪಿನಂಗಡಿ ಮತ್ತು ಕದ್ರಿ ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿದ ಕಡತಗಳನ್ನು ಶೀಘ್ರ ಅಂತಿಮಗೊಳಿಸಲಾಗುವುದೆಂದರು.
ರಾಜ್ಯ ಆಯುಕ್ತರೊಂದಿಗೆ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರಾದ ಜಯಮ್ಮ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಶ್ರೀಮತಿ ಮಲ್ಲಿಕಾ ಪಕಳ ಉಪಸ್ಥಿತರಿದ್ದರು.
ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್ , ಸದಸ್ಯರಾದ ಹರೀಶ್ ಉಪಾಧ್ಯಾಯ, ವೆಂಕಪ್ಪ ಪೂಜಾರಿಯವರು ಆಯುಕ್ತರನ್ನು ದೇವಳದ ಶಿಷ್ಠಾಚಾರದಂತೆ ಶಾಲು ಹೊಂದಿಸಿ ಪ್ರಸಾದವನ್ನಿತ್ತು ಸ್ವಾಗತಿಸಿದರು.
ದೇವಾಲಯದ ವ್ಯವಸ್ಥಾಪಕರಾದ ವೆಂಕಟೇಶ್ ರಾವ್, ಸಿಬ್ಬಂದಿ ಪದ್ಮನಾಭ ಕುಲಾಲ್, ಕೃಷ್ಣ ಪ್ರಸಾದ್ ಬಡಿಲ, ದಿವಾಕರ ಗೌಡ , ಸುಧಾಕರ ಶೆಟ್ಟಿ, ಗಿರೀಶ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.









