






ಪುತ್ತೂರು: ನಗರದ ತೆಂಕಿಲದ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜೂ. 25 ರಂದು ಎರಡು ಮಹತ್ವದ ಜಾಗೃತಿ ಕಾರ್ಯಕ್ರಮಗಳು ನಡೆದವು. ಜೆಸಿಐ ಬೆಳ್ಳಾರೆ ವತಿಯಿಂದ ರಕ್ತದಾನದ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ದ.ಕ. ಜಿಲ್ಲಾ ಪೊಲೀಸ್ ಪುತ್ತೂರು ಉಪವಿಭಾಗ ನೇತೃತ್ವದಲ್ಲಿ ಅಂತರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ-2026 ಅಂಗವಾಗಿ ಸಾಮೂಹಿಕ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.



ರಕ್ತದಾನವೇ ಶ್ರೇಷ್ಠದಾನ: ಡಾ. ರಾಮಕೃಷ್ಣ ರಾವ್
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ರೋಟರಿ ಕ್ಯಾಂಪ್ಕೋ ರಕ್ತನಿಧಿ ಕೇಂದ್ರ ಪುತ್ತೂರಿನ ವೈದ್ಯಾಧಿಕಾರಿ ಡಾ. ಎಂ. ರಾಮಕೃಷ್ಣ ರಾವ್ ಮಾತನಾಡಿ, “ಮನುಷ್ಯತ್ವ ಇದ್ದಾಗ ಮಾತ್ರ ವ್ಯಕ್ತಿ ಮನುಷ್ಯನಾಗುತ್ತಾನೆ. ಸಮಾಜಕ್ಕೆ ಕೊಡುಗೆ ನೀಡುವುದು ನಮ್ಮ ಕರ್ತವ್ಯ. ಎಲ್ಲಕ್ಕಿಂತ ದೊಡ್ಡದಾದ ದಾನವೆಂದರೆ ರಕ್ತದಾನ. ಮೂಢನಂಬಿಕೆಗಳನ್ನು ಬದಿಗಿರಿಸಿ ಪ್ರತಿಯೊಬ್ಬರೂ ರಕ್ತದಾನ ಮಾಡಿ ಜೀವ ಉಳಿಸಿ” ಎಂದು ಕರೆ ನೀಡಿದರು.



ಡಿಜಿಟಲ್ ಯುಗದಲ್ಲಿ ಜಾಗೃತಿ ಅಗತ್ಯ: ಪಿಎಸ್‌ಐ ಪ್ರವೀಣ್
ಪುತ್ತೂರು ಠಾಣೆಯ ಪೊಲೀಸ್ ಅಧಿಕಾರಿ ಪ್ರವೀಣ್ ಮಾತನಾಡಿ, “ಹಿಂದೆ ಅಪರಾಧ ಕಣ್ಣಿಗೆ ಕಾಣುವಂತೆ ಇತ್ತು. ಆದರೆ ಇಂದು ಡಿಜಿಟಲ್ ಯುಗದಲ್ಲಿ ಸೈಬರ್ ಕ್ರೈಂ ಮೂಲಕ ಅಪರಾಧಗಳು ಹೆಚ್ಚಾಗಿವೆ. ಡಿಜಿಟಲ್ ಡಿವೈಸ್‌ಗಳನ್ನು ಜಾಗರೂಕತೆಯಿಂದ ಬಳಸಬೇಕು” ಎಂದು ಕೆಲವು ಘಟನೆಗಳನ್ನು ಉಲ್ಲೇಖಿಸಿ ಎಚ್ಚರಿಸಿದರು.
ಡ್ರಗ್ ಫ್ರೀ ಕರ್ನಾಟಕ ಆ್ಯಪ್ ಬಗ್ಗೆ ಮಾಹಿತಿ
ಪೊಲೀಸ್ ಅಧಿಕಾರಿ ಬಸವನ ಪಾಟೀಲ್, ಸಂಚಾರ್ ಸಾಥಿ, ಡ್ರಗ್ ಫ್ರೀ ಕರ್ನಾಟಕ, ಎಂ ಆಧಾರ್ ಆ್ಯಪ್‌ಗಳ ಮೂಲಕ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳು, ದೂರು ಸಲ್ಲಿಸುವ ವಿಧಾನ ಮತ್ತು ಬಳಕೆ ಕುರಿತು ವಿವರಿಸಿದರು. ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ‘ಡ್ರಗ್ ಫ್ರೀ ಕರ್ನಾಟಕ’ ಆ್ಯಪ್ ಮೂಲಕ ನಿಖರ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ಳಾರೆ ಅಧ್ಯಕ್ಷೆ ಜೆಎಫ್ಎಂ ಪೂರ್ಣಿಮಾ ಪೆರ್ಲಂಪಾಡಿ ವಹಿಸಿದ್ದರು. ವೇದಿಕೆಯಲ್ಲಿ ಪುತ್ತೂರು ಠಾಣೆಯ ಪಿಎಸ್‌ಐ ಸುರೇಶ್ ನಾಯ್ಕ್, ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಕೆ. ಕೃಷ್ಣ ನಾಯ್ಕ್ ಹಾಗೂ ಪ್ರಾಂಶುಪಾಲೆ ಡಾ. ಶೋಭಿತಾ ಸತೀಶ್ ಉಪಸ್ಥಿತರಿದ್ದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಜೆಸಿಐ ಬೆಳ್ಳಾರೆಯ ಸದಸ್ಯೆ ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.










