






ಪುತ್ತೂರು: ಸಮಾಜದಲ್ಲಿ ಆದರ್ಶ ವಿವಾಹಗಳಿಗೆ ಮುನ್ನುಡಿ ಬರೆಯುತ್ತಾ, ಅರ್ಹ ಯುವಕ-ಯುವತಿಯರನ್ನು ವಿವಾಹ ಬಂಧನದ ಮೂಲಕ ಒಂದಾಗಿಸುತ್ತಿರುವ ‘ಹಿಂದೂ ವಿವಾಹ ವೇದಿಕೆ’ಯು ಇದೀಗ ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ಎನ್ನಬಹುದಾದ ಅತ್ಯಂತ ಶ್ಲಾಘನೀಯ ಮತ್ತು ಐತಿಹಾಸಿಕ ನಿರ್ಧಾರವೊಂದನ್ನು ಪ್ರಕಟಿಸಿದೆ. ಆರ್ಥಿಕವಾಗಿ ಹಿಂದುಳಿದ ಸಮಾಜದ ಬಡ ಯುವತಿಯರ ಮದುವೆಯ ಕನಸನ್ನು ನನಸು ಮಾಡಲು ವೇದಿಕೆಯು ವಿಶೇಷ ಕೊಡುಗೆಗಳನ್ನು ಘೋಷಿಸುವ ಮೂಲಕ ಮಾನವೀಯತೆ ಮೆರೆದಿದೆ.



ಸಾಮಾನ್ಯವಾಗಿ ವಿವಾಹ ವೇದಿಕೆಗಳು ಕೇವಲ ವಧು-ವರರ ಮಾಹಿತಿ ವಿನಿಮಯಕ್ಕೆ ಸೀಮಿತವಾಗಿರುತ್ತವೆ. ಆದರೆ ಅದನ್ನೂ ಮೀರಿ, ಸಾಮಾಜಿಕ ಕಳಕಳಿಯೊಂದಿಗೆ ಹೆಜ್ಜೆಯಿಟ್ಟಿರುವ ಹಿಂದೂ ವಿವಾಹ ವೇದಿಕೆಯು, ತನ್ನ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಬಡ ಯುವತಿಯರಿಗೆ ಉಚಿತವಾಗಿ ‘ಕರಿಮಣಿ’ ನೀಡುವುದಲ್ಲದೆ, ಮದುವೆ ವೆಚ್ಚವನ್ನು ತಾನೇ ಭರಿಸುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದೆ. ಕೌಟುಂಬಿಕ ಹಾಗೂ ಆರ್ಥಿಕ ಸಂಕಷ್ಟಗಳಿಂದಾಗಿ ಮದುವೆ ವಿಳಂಬವಾಗುತ್ತಿರುವ ಎಷ್ಟೋ ಕುಟುಂಬಗಳಿಗೆ ಈ ಯೋಜನೆ ದಾರಿದೀಪವಾಗಲಿದೆ.
ಯುವಕ-ಯುವತಿಯರನ್ನು ವೈವಾಹಿಕ ಜೀವನದ ಪವಿತ್ರ ಬಂಧನಕ್ಕೆ ಒಳಪಡಿಸುವ ಇಂತಹ ವೇದಿಕೆಗಳ ಪೈಕಿ, ರಾಜ್ಯದಲ್ಲಿಯೇ ಇಂತಹದೊಂದು ವಿನೂತನ ಹಾಗೂ ಜನಪರ ಕೊಡುಗೆಯನ್ನು ನೀಡಲು ಮುಂದಾಗಿರುವುದು ಇದೇ ಮೊದಲು ಎನ್ನಲಾಗಿದೆ.



ಭರವಸೆಯ ಆಶಾಕಿರಣ
ನಗರದ ಸರಕಾರಿ ಆಸ್ಪತ್ರೆ ರಸ್ತೆಯಲ್ಲಿರುವ ಸೋನು ಸ್ಟುಡಿಯೋದಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆ ಕಳೆದ ಹಲವು ಸಮಯಗಳಿಂದ ಸದ್ದಿಲ್ಲದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು, ನೂರಾರು ಮನಸ್ಸುಗಳನ್ನು ಒಂದು ಮಾಡಿರುವ ಈ ವೇದಿಕೆಯು, ಈಗ ಪ್ರಕಟಿಸಿರುವ ಹೊಸ ಯೋಜನೆ ಬಡ ಹೆತ್ತವರ ಪಾಲಿನ ಆಶಾಕಿರಣವಾಗಿ ಮೂಡಿಬಂದಿದೆ. ಮದುವೆಯೆಂಬ ಸಂಭ್ರಮ ಬಡತನದ ಕಾರಣಕ್ಕೆ ಯಾರಿಗೂ ಹೊರೆಯಾಗಬಾರದು ಎನ್ನುವ ಉದಾತ್ತ ಚಿಂತನೆ ಈ ಯೋಜನೆಯ ಹಿಂದಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಸಂಸ್ಥೆಯ ಈ ಮಹತ್ತರ ತೀರ್ಮಾನಕ್ಕೆ ಸಾರ್ವಜನಿಕ ವಲಯದಿಂದ, ಸಾಮಾಜಿಕ ಚಿಂತಕರಿಂದ ಹಾಗೂ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗುತ್ತಿದ್ದು, ಅರ್ಹರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕಾಗಿದೆ.
ಹೆಚ್ಚಿನ ವಿವರಗಳಿಗೆ 90356 40248 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.









