ಶಿಕ್ಷಕರ ಕೊರತೆ: ನರಿಮೊಗರು ಶಾಲಾ ಪೋಷಕರಿಂದ ಇಲಾಖಾ ತಾರತಮ್ಯದ ವಿರುದ್ದ ಪ್ರತಿಭಟನೆ

0

ಪುತ್ತೂರು: ಶಿಕ್ಷಕರ ಕೊರತೆಯಿಂದಾಗಿ ಶಾಲಾ ವ್ಯವಸ್ಥೆಗೆ ತೊಂದರೆಯಾಗುತ್ತಿರುವ ಬಗ್ಗೆ ಸ್ಪಂದಿಸದ ಶಾಲಾ ಶಿಕ್ಷಣ ಇಲಾಖೆ ವಿರುದ್ದ ನರಿಮೊಗರು ಸರಕಾರಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಮತ್ತು ಪೋಷಕರು ಜು.6 ರಂದು ಪ್ರತಿಭಟನೆ ನಡೆಸಿ ಬಳಿಕ ಸೂಕ್ತ ಕ್ರಮಕ್ಕಾಗಿ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.


ನರಿಮೊಗರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕರ ಹಂಚಿಕೆಯಲ್ಲಿ ಇಲಾಖೆ ತಾರತಮ್ಯ ಮಾಡಿದೆ ಎಂದು ಆರೋಪಿಸಿ ಶಾಲಾಭಿವೃದ್ಧಿ ಸಮಿತಿ ಪೋಷಕರು ಮತ್ತು ವಿದ್ಯಾಭಿಮಾನಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಿಆರ್‌ಪಿ ಯವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.


ನರಿಮೊಗರು ಶಾಲೆಯು ಶತಮಾನ ಪೂರೈಸಿರುವ ತಾಲೂಕಿನ ಬೆರಳೆಣಿಕೆಯ ಸರಕಾರಿ ಶಾಲೆಗಳಲ್ಲಿ ಒಂದಾಗಿದ್ದು, ಪ್ರಸ್ತುತ ವರ್ಷದಲ್ಲಿ ಎಲ್‌ಕೆಜಿಯಿಂದ ಯಿಂದ 8ನೇ ತರಗತಿಯವರೆಗೆ ಸುಮಾರು 200 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದು ಕೇವಲ 6 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಈರ್ವರು ಶಿಕ್ಷಕರನ್ನು ಬಿಎಲ್‌ಒ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇದರಿಂದ ಶಿಕ್ಷಕರ ಕೊರತೆಯಾಗಿ ಮಕ್ಕಳ ಪಾಠದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಮನವಿ ನೀಡಿದ್ದರೂ ಯಾವುದೇ ಸ್ಪಂದನೆ ದೊರಕಿರುವುದಿಲ್ಲ. ಇದೇ ಕ್ಲಸ್ಟರ್‌ನ ಇನ್ನೊಂದು ಸರಕಾರಿ ಶಾಲೆಯಲ್ಲಿ 84 ಮಕ್ಕಳಿದ್ದು 3 ಖಾಯಂ ಶಿಕ್ಷಕರು ಇದ್ದರೂ ಇಲಾಖೆ 2 ಅತಿಥಿ ಶಿಕ್ಷಕರನ್ನು ನೀಡಿದೆ. ಮತ್ತೊಂದು ಶಾಲೆಯಲ್ಲಿ ಕೇವಲ 64 ಮಕ್ಕಳು ಇದ್ದರೂ ಅಲ್ಲಿ 3 ಖಾಯಂ ಶಿಕ್ಷಕರು ಇದ್ದರೂ 1 ಅತಿಥಿ ಶಿಕ್ಷಕರನ್ನು ನೀಡಲಾಗಿದೆ. ಆದರೆ ನರಿಮೊಗರು ಸರಕಾರಿ ಶಾಲೆಗೆ ಮಾತ್ರ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ತಾರತಮ್ಯ ಧೋರಣೆ ತೋರಲಾಗಿದೆ ಎಂದು ಆರೋಪಿಸಿರುವ ಪೋಷಕರು ಶಿಕ್ಷಕರ ಕೊರತೆಗೆ ಸ್ಪಂದಿಸದ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಾಲೆಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ಬಳಿಕ ಶಾಸಕರ ಕಛೇರಿಗೆ ತೆರಳಿ ಶಾಸಕರ ಗಮನಕ್ಕೆ ಈ ವಿಚಾರವನ್ನು ತರಲಾಯಿತು. ತಕ್ಷಣ ಶಿಕ್ಷಕರ ನೇಮಕ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಿಫಾರಸ್ಸು ಮಾಡಲು ಶಾಸಕರಿಗೆ ಮನವಿ ಸಲ್ಲಿಸಲಾಯಿತು.


ಶಾಸಕರಿಗೆ ಸಲ್ಲಿಸಿದ ಮನವಿಯಲ್ಲಿ ‘ನಮ್ಮ ನರಿಮೊಗರು ಶಾಲೆಯು ಶತಮಾನ ಪೂರೈಸಿರುವ ಪ್ರಸ್ತುತ ವಿದ್ಯಾಸಂಸ್ಥೆಯಾಗಿದ್ದು, ಇಲ್ಲಿ ಪ್ರಸ್ತುತ ಎಲ್‌ಕೆಜಿಯಿಂದ 8 ನೇ ತರಗತಿಯವರೆಗೆ ಸುಮಾರು 200 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದು, ವರ್ಷದಿಂದ ವರ್ಷಕ್ಕೆ ದಾಖಲಾತಿ ಏರಿಕೆ ಕಂಡುಬರುತ್ತಿದೆ. ಆದರೆ ಈ ಶೈಕ್ಷಣಿಕ ವರ್ಷದಲ್ಲಿ ಇಲಾಖೆಯು ಅತಿಥಿ ಶಿಕ್ಷಕರನ್ನು ನೀಡದೇ ಶಾಲೆಯಲ್ಲಿ ಕೇವಲ 6 ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ 2 ಶಿಕ್ಷಕರು ಬಿಎಲ್‌ಒ ಕರ್ತವ್ಯಕ್ಕೆ ನಿಯೋಜನೆಗೊಂಡಿರುತ್ತಾರೆ. ಆದುದರಿಂದ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಶಾಲೆಗೆ ಹಿನ್ನಡೆಯಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ನೀಡಿದರೂ ಇಲಾಖೆಯ ಸ್ಪಂದನೆ ದೊರೆಯುತ್ತಿಲ್ಲ. ತಾವು ದಯಮಾಡಿ ನಮ್ಮ ಶಾಲೆಯನ್ನು ಉಳಿಸಲು ಶಿಕ್ಷಣ ಇಲಾಖಾ ಅಧಿಕಾರಿಗಳಿಗೆ 3 ಅತಿಥಿ ಶಿಕ್ಷಕರನ್ನು ನೀಡಲು ಶಿಫಾರಸ್ಸು ಮಾಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನಮ್ಮ ಶಾಲೆಯಲ್ಲಿ ಈ ಹಿಂದೆ ಶ್ರೀಲತಾ ಮೇಡಂ ರವರು ಮುಖ್ಯಗುರುಗಳಾಗಿದ್ದರು. ಅವರು ಒಬ್ಬ ಶಿಕ್ಷಕರನ್ನು ಸ್ವತಃ ವೇತನ ನೀಡಿ ನಿಯೋಜಿಸಿಕೊಂಡು ಶಾಲೆಯನ್ನು ಮುನ್ನಡೆಸಿದ್ದರು. ಆಂಗ್ಲಮಾಧ್ಯಮದೊಂದಿಗೆ 100 ಇದ್ದ ಮಕ್ಕಳ ಸಂಖ್ಯೆ 200 ರ ವರೆಗೆ ತಲುಪಿದೆ. ಶಾಲೆಗೆ ದಾನಿಗಳು, ಗಣ್ಯರು, ಶಾಲಾಭಿವೃದ್ಧಿ ಸಮಿತಿಯ ಸಹಕಾರ ಅತ್ಯುತ್ತಮವಾಗಿದೆ. ಈಗ ಹೊಸ ಮುಖ್ಯಗುರುಗಳು ಬಂದಿದ್ದಾರೆ. ಒಳ್ಳೆಯ ಪ್ರತಿಭಾವಂತ, ಪ್ರಾಮಾಣಿಕ ಶಿಕ್ಷಕರು ಇದ್ದಾರೆ. ಮಕ್ಕಳಿಲ್ಲದೇ ಸರಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿಗೆ ಬರುತ್ತಿರುವ ವೇಳೆ ಮಕ್ಕಳ ಸಂಖ್ಯೆ ಹೆಚ್ಚಾಗಿ ಇರುವ ಸರಕಾರಿ ಶಾಲೆಯ ಬಗ್ಗೆ ಇಲಾಖೆ ನಿರ್ಲಕ್ಷ್ಯ ತೋರಿದೆ. ಶಾಸಕರಿಗೆ ಮತ್ತು ಇಲಾಖೆಗೆ ಮನವಿ ನೀಡಿದ್ದೇವೆ. ಸ್ಪಂದನೆಗೆ ಕಾಯುತ್ತಿದ್ದೇವೆ.
ಪ್ರವೀಣ್ ಆಚಾರ್ಯ ನರಿಮೊಗರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು

LEAVE A REPLY

Please enter your comment!
Please enter your name here