







ಪುತ್ತೂರು:ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ 2026-27ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಶ್ರೀಮತಿ ಆಶಾ ರೆಬೆಲ್ಲೋ, ಕಾರ್ಯದರ್ಶಿಯಾಗಿ ಶ್ರೀಮತಿ ಸಂಧ್ಯಾ ಬೈಲಾಡಿ, ಕೋಶಾಧಿಕಾರಿಯಾಗಿ ವಿಜಯ್ ವಿಲ್ಫ್ರೆಡ್ ಡಿ’ಸೋಜ, ರೋಟರಿ ವಲಯ ಸೇನಾನಿಯಾಗಿ ಸುಂದರ್ ರೈ ಬಲ್ಕಾಡಿರವರು ಆಯ್ಕೆಯಾಗಿದ್ದಾರೆ.


ಉಳಿದಂತೆ ಉಪಾಧ್ಯಕ್ಷರಾಗಿ ರಾಮಣ್ಣ ರೈ, ನಿಕಟಪೂರ್ವ ಅಧ್ಯಕ್ಷರಾಗಿ ಸುಭಾಷ್ ರೈ ಬೆಳ್ಳಿಪ್ಪಾಡಿ, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಭಾಸ್ಕರ್ ಕೋಡಿಂಬಾಳ, ಸಾರ್ಜಂಟ್ ಎಟ್ ಆಮ್ಸ್೯ ಮೀನಾಕ್ಷಿ ಗೌಡ, ಎಕ್ಸಿಕ್ಯೂಟಿವ್ ಕಾರ್ಯದರ್ಶಿ ಪ್ರವೀಣ್ ರೈ ಸಾಂತ್ಯ, ಮೆಂಬರ್ ಶಿಪ್ ಚೇರ್ಮನ್ ಸುರೇಶ್ ಪಿ, ವೊಕೇಶನಲ್ ಸರ್ವಿಸ್ ಚೇರ್ಮನ್ ದೀಪಕ್ ಬೊಳ್ವಾರು, ಕ್ಲಬ್ ಸರ್ವಿಸ್ ಪ್ರಾಜೆಕ್ಟ್ ಚೇರ್ಮನ್ ದಿನೇಶ್ ಆಚಾರ್ಯ, ಫೌಂಡೇಶನ್ ಚೇರ್ಮನ್ ಮಹಾಬಲ ಗೌಡ, ನ್ಯೂ ಜನರೇಶನ್ ಚೇರ್ಮನ್ ದೀಪಕ್ ಮಿನೇಜಸ್, ಪಬ್ಲಿಕ್ ಇಮೇಜ್ ಚೇರ್ಮನ್ ಸುನಿಲ್ ಜಾಧವ್, ಪಲ್ಸ್ ಪೋಲಿಯೊ ಚೇರ್ಮನ್ ಸೆನೋರಿಟಾ ಆನಂದ್, ಬುಲೆಟಿನ್ ಎಡಿಟರ್ ಮಹೇಶ್ ಸವಣೂರು, ಕಮ್ಯೂನಿಟಿ ಸರ್ವಿಸ್ ಉಮೇಶ್ ಮಲುವೇಳು, ಇಂಟರ್ನ್ಯಾಷನಲ್ ಸರ್ವಿಸ್ ಆನಂದ್ ಮೂವಪ್ಪು, ಟೀಚ್ ನಾರಾಯಣ ರೈ, ವಿನ್ಸ್ ರೋಶನ್ ರೈ, ವೆಬ್& ಐಟಿ ಸುಂದರ ಗೌಡ, ಸಿ.ಎಲ್.ಸಿ.ಸಿ ಸುರೇಂದ್ರ ಆಚಾರ್ಯ, ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಉದಯ ಕುಮಾರ್ ಕರ್ಮಲ, ಎಥಿಕ್ಸ್ ಕಮಿಟಿ ಜಯಂತ್ ಶೆಟ್ಟಿ, ಪ್ರೋಗ್ರಾಂ ಸಮಿತಿ ಚಂದ್ರಶೇಖರ ಮೂರ್ತಿರವರು ಆಯ್ಕೆಯಾಗಿದ್ದಾರೆ.



ನೂತನ ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಆಶಾ ಮರಿಯಾ ರೆಬೆಲ್ಲೋರವರು ದರ್ಬೆ ಸಿಸಿಲಿಯಾ ರೆಬೆಲ್ಲೋ ಹಾಗೂ ಬೆನೆಡಿಕ್ಟ್ ರೆಬೆಲ್ಲೋರವರ ಪುತ್ರಿಯಾಗಿದ್ದು ಫಿಲೋಮಿನಾ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈಸೂರಿನ ಕುವೆಂಪು ಮುಕ್ತ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು ಶಿಕ್ಷಕಿಯಾಗಿ ತನ್ನ ವೃತ್ತಿ ಜೀವನವನ್ನು ಸುಳ್ಯದ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅರಂಭಿಸಿ, ಬಳಿಕ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ, ಮಂಗಳೂರಿನ ಮಿಲಾಗ್ರಿಸ್ ಪ್ರೌಢಶಾಲೆಯಲ್ಲಿ ಮುಂದುವರಿಸಿ, ಪ್ರಸ್ತುತ ಪುತ್ತೂರಿನ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದ್ದಾರೆ. ಕಲೆ, ಸಾಹಿತ್ಯ, ಯಕ್ಷಗಾನ ಇವುಗಳಲ್ಲಿ ಆಸಕ್ತಿಯನ್ನು ಹೊಂದಿದವರಾಗಿದ್ದು, ಯಕ್ಷಗಾನದಲ್ಲಿ ಹಲವಾರು ಪಾತ್ರವನ್ನು ನಿರ್ವಹಿಸಿ ಜನ ಮೆಚ್ಚುಗೆಯನ್ನು ಪಡೆದವರಾಗಿರುತ್ತಾರೆ. ಚರ್ಚ್ನಲ್ಲಿ ಐಸಿವೈಎಂ ಮತ್ತು ವೈಸಿಎಸ್ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದವರಾಗಿರುತ್ತಾರೆ. ರೋಟರಿ ಕ್ಲಬ್ ಸ್ವರ್ಣ ಇದರ ಸ್ಥಾಪಕ ಸದಸ್ಯರಾದ ಇವರು ಈ ಹಿಂದೆ ಕ್ಲಬ್ ನಲ್ಲಿ ಕಾರ್ಯದರ್ಶಿಯಾಗಿ, ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ.
ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಶ್ರೀಮತಿ ಸಂಧ್ಯಾ ಬೈಲಾಡಿರವರು ಸುಳ್ಯ ತಾಲೂಕು, ಅಜ್ಜಾವರ ಗ್ರಾಮದ, ಅಡ್ಡಂಗಾಯ ಮನೆತನದ ರಾಮಚಂದ್ರ ಗೌಡ ಮತ್ತು ಶ್ರೀಮತಿ ಪ್ರಭಾವತಿ ದಂಪತಿಗಳ ಪುತ್ರಿಯಾಗಿದ್ದು, ಬಿ.ಎ ಪದವಿಯೊಂದಿಗೆ ಬಿಎಡ್ ಸುಳ್ಯದಲ್ಲಿ ಪಡೆದು ಬಿ ಎ ಪದವಿಯನ್ನು ಪಡೆದಿರುತ್ತಾರೆ. ನಂತರ ಸುಳ್ಯ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕ ವೃತ್ತಿಗೆ ಸೇರಿ ತದನಂತರ ಬೆಳಿಯೂರು ಕಟ್ಟೆ ಪ್ರೌಢಶಾಲೆ, ಇರ್ದೆ- ಉಪ್ಪಳಿಗೆ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ಭಡ್ತಿ ಹೊಂದಿ ಬಂಟ್ವಾಳ ತಾಲೂಕು ಬೋಳಂತಿಮೊಗರು ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯಾಯವಾದಿ ಚಿದಾನಂದ ಬೈಲಾಡಿರವರ ಪತ್ನಿಯಾಗಿರುವ ಸಂಧ್ಯಾ ಬೈಲಾಡಿರವರು ಒಕ್ಕಲಿಗ ಗೌಡ ಮಹಿಳಾ ಸಂಘ ಪುತ್ತೂರು ಹೀಗೆ ಕೆಲವೊಂದು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದು, ಆರು ವರ್ಷದ ಹಿಂದೆ ರೋಟರಿ ಕ್ಲಬ್ ಸ್ವರ್ಣ ಸೇರ್ಪಡೆಗೊಂಡು ಹಲವಾರು ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿರುತ್ತಾರೆ.
ನೂತನ ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ವಿಜಯ್ ಡಿ’ಸೋಜರವರು ಮಾಯಿದೆ ದೇವುಸ್ ಚರ್ಚ್ ನ ಐಸಿವೈಎಂ ಸಂಘಟನೆಯ ಅಧ್ಯಕ್ಷರಾಗಿ, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ, ಡೊನ್ ಬೊಸ್ಕೊ ಕ್ಲಬ್ ನ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುರ ಇದರ ಪ್ರಸ್ತುತ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಪ್ರಸ್ತುತ ವರ್ಷದಿಂದ ಶಾಲೆಯಲ್ಲಿ ಎಲ್ಲರ ಸಹಕಾರದೊಂದಿಗೆ ಉಚಿತ ಎಲ್.ಕೆ.ಜಿ ಶಿಕ್ಷಣವನ್ನು ಆರಂಭಿಸಿರುತ್ತಾರೆ. ಗ್ಲೋರಿಯಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ನಿರ್ದೇಶಕರಾಗಿ, ರೋಟರಿ ಸ್ವರ್ಣದ ಸ್ಥಾಪಕ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕ್ರಿಕೆಟ್
ಹಾಗೂ ಬ್ಯಾಡ್ಮಿಂಟನ್ ಆಟಗಾರರಾಗಿರುವ ಇವರು ನಟನೆ ಮತ್ತು ನೃತ್ಯದಲ್ಲೂ ಒಲವನ್ನು ಹೊಂದಿರುತ್ತಾರ . ಎಲೆಕ್ಟ್ರಾನಿಕ್ ಡಿಪ್ಲೋಮಾ ಪದವೀಧರರಾಗಿರುವ ಇವರು ಮಂಗಳೂರಿನಲ್ಲಿ ಮಹಿಮಾ ಎಂಟರ್ಪ್ರೈಸಸ್ ಎನ್ನುವ ಹೆಸರಿನಲ್ಲಿ ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ.
ವಲಯ ಸೇನಾನಿ ಪರಿಚಯ:
ರೋಟರಿ ಜಿಲ್ಲೆ 3181, ವಲಯ ಐದರ 2026-27ರ ಅವಧಿಗೆ ವಲಯ ಸೇನಾನಿಯಾಗಿ ಆಯ್ಕೆಯಾದ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಪೂರ್ವಾಧ್ಯಕ್ಷ ಸುಂದರ್ ರೈ ಬಲ್ಕಾಡಿರವರು ಮರ್ದೂರುಬೀಡು ಬಲ್ಕಾಡಿ ಸಂಕಪ್ಪ ರೈ ಹಾಗೂ ಪಡ್ಯಂಬೆಟ್ಟುಬಾರಿಕೆ ಶ್ರೀಮತಿ ಮಾನಕ್ಕೆ ರೈರವರ ಪುತ್ರನಾಗಿ ಸುಂದರ್ ರೈ ಬಲ್ಕಾಡಿ ಜನಿಸಿದ್ದು ಕುಶಾಲನಗರದ ಕೃಷಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು 1982ರಲ್ಲಿ ಕೃಷಿ ಇಲಾಖೆಗೆ ಸೇರ್ಪಡೆಗೊಂಡರು. 1986ರಲ್ಲಿ ಸರಕಾರಿ ನೌಕರರ ರಾಜ್ಯ ಪರಿಷತ್ ಮಡಿಕೇರಿ ವಿಭಾಗದಿಂದ ಸ್ಪರ್ಧಿಸಿ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ. ಸರಕಾರಿ ನೌಕರರ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ, ಜಿಲ್ಲಾ ಕಾರ್ಮಿಕ ವಿಭಾಗದ ಗೌರವ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ರಾಜ್ಯ ಸರಕಾರಿ ನೌಕರರ ಸಂಘದ ಕೊಡಗು ಜಿಲ್ಲಾ ಶಾಖೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಕೊಡಗು ಜಿಲ್ಲಾ ಬಂಟರ ಸಂಘದ ಕಾರ್ಯದರ್ಶಿಯಾಗಿ ಸತತ 12 ವರ್ಷ ಸೇವೆ ಸಲ್ಲಿಸಿರುತ್ತಾರೆ. ಅನೇಕ ಸಂಘ ಸಂಸ್ಥೆಗಳಲ್ಲಿ ಕಲಾವಿದನಾಗಿ, ನಟನಾಗಿ, ಸಂಘಟಕರಾಗಿ, ನಿರ್ದೇಶಕರಾಗಿ ಕಿರುತೆರೆಯಲ್ಲಿ ನಟಿಸಿರುತ್ತಾರೆ. 2003ರಲ್ಲಿ ಸರಕಾರಿ ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದು ಎರಡು ವರ್ಷ ಮುಂಬಯಿಯಲ್ಲಿ ಹೊಟೇಲ್ ಉದ್ಯಮವನ್ನು ನಡೆಸಿರುತ್ತಾರೆ. ಪ್ರಸ್ತುತ ಸುಂದರ್ ರೈರವರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
ಜು.9: ಪದ ಪ್ರದಾನ..
ಜು.9 ರಂದು ಸೈನಿಕ ಭವನ ರಸ್ತೆಯಲ್ಲಿನ ರೋಟರಿ ಮನೀಷಾ ಸಭಾಂಗಣದಲ್ಲಿ ಸಂಜೆ ಪದ ಪ್ರದಾನ ಸಮಾರಂಭ ನೆರವೇರಲಿದ್ದು, ಪದ ಪ್ರದಾನ ಅಧಿಕಾರಿಯಾಗಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್ ರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಲಿರುವರು. ಮುಖ್ಯ ಅತಿಥಿಯಾಗಿ ಮಂಗಳೂರಿನ ದಾಯ್ಜಿ ವಲ್ಡ್೯ ಪ್ರೈವೇಟ್ ಲಿಮಿಟೆಡ್ ನ ಮ್ಯಾನೇಜಿಂಗ್ ಡೈರೆಕ್ಟರ್ ವಾಲ್ಟರ್ ನಂದಳಿಕೆ, ಗೌರವ ಅತಿಥಿಗಳಾಗಿ ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರೊ|ಝೇವಿಯರ್ ಡಿ’ಸೋಜ, ವಲಯ ಸೇನಾನಿ ಸುಂದರ್ ರೈ ಬಲ್ಕಾಡಿ, ಕ್ಲಬ್ ಜಿ.ಎಸ್.ಆರ್ ಚಿದಾನಂದ ಬೈಲಾಡಿರವರು ಉಪಸ್ಥಿತಲಿದ್ದಾರೆ ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.










