







ವರದಿ : ಶರತ್ ಕುಮಾರ್ ಪಾರ


ಪುತ್ತೂರು:ಮುಂಗಾರು ಮಳೆಯ ಕೊರತೆಯಿಂದಾಗಿ ರಾಜ್ಯದಾದ್ಯಂತ ಕೃಷಿ ವಲಯ ತತ್ತರಿಸಿದ್ದು ಜೂನ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಬೇಕಿದ್ದ ಗದ್ದೆ ಬೇಸಾಯ ನಿರೀಕ್ಷಿತ ಗುರಿ ಮುಟ್ಟದೆ ಕುಂಠಿತಗೊಂಡಿದೆ.
ಸಾಮಾನ್ಯವಾಗಿ ಪತ್ತನಾಜೆ ಮುಗಿದ ಬಳಿಕ ಮಳೆಯ ಆರಂಭವಾಗುತ್ತದೆ.ಈ ಸಮಯದಲ್ಲಿ ರೈತರು ಕೃಷಿ ಕಾಯಕಕ್ಕೆ ತೊಡಗುತ್ತಾರೆ.ಮುಂಗಾರು ಮಳೆಯನ್ನೇ ಅವಲಂಬಿಸಿ ಜೂನ್ ತಿಂಗಳಿನಲ್ಲಿ ಕೃಷಿಕರು ಭತ್ತ ಬೇಸಾಯಕ್ಕೆ ಸಿದ್ಧತೆ ಆರಂಭಿಸುತ್ತಾರೆ.ಕಳೆದ ಬಾರಿ ಕರಾವಳಿಗೆ ಮುಂಗಾರು ಮಳೆ ಬೇಗನೆ ಆರಂಭಗೊಂಡಿದ್ದು ಪೂರ್ವ ನಿಗದಿಗೂ ಮುಂಚಿತವಾಗಿಯೇ ಉತ್ತಮ ಮಳೆಯಾಗಿದೆ.ಮುಂಗಾರು ಮಳೆ ಆರಂಭವಾಗುವ ಹೊತ್ತಿನಲ್ಲೇ ವಾಯುಭಾರ ಕುಸಿತದಿಂದಲೂ ಭರ್ಜರಿ ಮಳೆಯಾಗಿದ್ದು ಗದ್ದೆ ಬೇಸಾಯ ನಿಗದಿತ ಸಮಯದಲ್ಲಿ ಪೂರ್ಣಗೊಂಡಿತ್ತು.ಆದರೆ ಈ ಬಾರಿ ಮಳೆಯ ಕೊರತೆಯಿಂದ ಬಿತ್ತನೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ.



ಮಳೆ ಪ್ರಮಾಣ ಕಡಿಮೆ:
ಹವಾಮಾನ ಇಲಾಖಾ ವರದಿ ಪ್ರಕಾರ ದ.ಕ.ಜಿಲ್ಲೆಯಲ್ಲಿ ಜೂನ್ 1ರಿಂದ ಜುಲೈ 6ರವರೆಗೆ ಶೇ.43ರಷ್ಟು ಮಳೆ ಕೊರತೆಯಾಗಿದೆ.ಈ ಅವಽಯಲ್ಲಿ 1.170 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಈವರೆಗೆ 667.7 ಮಿ.ಮೀ.ಮಾತ್ರ ಮಳೆಯಾಗಿದೆ.ಮುಂಗಾರು ಪೂರ್ವ ಮಳೆಯಲ್ಲಿ ಕೂಡ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿದೆ.
ನಿಂತು ಹೋದ ಭತ್ತ ಬೇಸಾಯದ ಉತ್ಸಾಹ: ಕಳೆದ ಕೆಲವು ವರ್ಷಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದ್ದ ಹಡೀಲು ಭತ್ತ ಬೇಸಾಯದ ಉತ್ಸಾಹ ಬತ್ತಿದೆ.ಗದ್ದೆಗೆ ಇಳಿಯೋಣ ಬನ್ನಿ ಎಂಬ ಅಭಿಯಾನದ ಮೂಲಕ ಮುಂಗಾರು ಹಂಗಾಮಿನಲ್ಲಿ ಗದ್ದೆ ಬೇಸಾಯದ ಹೊಸ ಟ್ರೆಂಡ್ ಶುರು ಆಗಿತ್ತು.ಈ ಅಭಿಯಾನಕ್ಕೆ ಹಲವು ಸಂಘ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು, ಶಿಕ್ಷಣಸಂಸ್ಥೆಗಳು, ಸ್ವಸಹಾಯ ಗುಂಪುಗಳು ಕೈಜೋಡಿಸಿದ್ದವು.ಇದೀಗ ಹಲವಾರು ಕಾರಣಗಳಿಂದ ಗದ್ದೆ ನಾಟಿ ನಿಂತುಹೋಗಿದೆ.ನಾಲ್ಕು ವರ್ಷದ ಹಿಂದೆ ಲಾಕ್ಡೌನ್ ಕಾರಣದಿಂದ ಊರಿನಲ್ಲೇ ಇದ್ದ ಒಂದಷ್ಟು ಮಂದಿ ಗದ್ದೆ ಬೇಸಾಯಕ್ಕೆ ತೊಡಗಿಸಿಕೊಂಡಿದ್ದರು. ಗುಡ್ಡ ಕಡಿದು ಗದ್ದೆ ಮಾಡಿಕೊಂಡಿದ್ದರು. ಆದರೆ ಕೊರೋನಾ ಮುಗಿದು ಜನರ ಜೀವನಸ್ಥಿತಿ ಯಥಾಸ್ಥಿತಿಗೆ ಮರಳುವಾಗ ಗದ್ದೆ ಬೇಸಾಯ ಬಿಟ್ಟು ಉದ್ಯೋಗಕ್ಕೆ ಮತ್ತೆ ನಗರ ಸೇರಿಕೊಂಡರು.
ಯಾಂತ್ರೀಕೃತ ಬೇಸಾಯವೇ ಹೆಚ್ಚು:
ಹಿಂದಿನ ಕಾಲದಲ್ಲಿದ್ದ ಭತ್ತ ಬೇಸಾಯ ಪದ್ಧತಿ ಈಗಿಲ್ಲ ಹಾಗೂ ಭತ್ತ ಬೆಳೆಯುವ ಪ್ರಮಾಣವೂ ಕಡಿಮೆಯಾಗಿದೆ.ಕೂಲಿಯಾಳುಗಳ ಸಮಸ್ಯೆ, ನಿರ್ವಹಣಾ ವೆಚ್ಚ, ನುರಿತ ಕೆಲಸಗಾರರ ಕೊರತೆಯಿಂದ ಹಿಂದಿನ ಬೇಸಾಯ ಕಾರ್ಯಗಳು ಈಗ ನಡೆಯುತ್ತಿಲ್ಲ. ಪ್ರಸ್ತುತ ದಿನಗಳಲ್ಲಿ ಬೇಸಾಯಕ್ಕೆ ಯಂತ್ರೋಪಕರಣಗಳನ್ನೇ ಬಳಸಲಾಗುತ್ತಿದೆ.

ಕೃಷಿ ಇಲಾಖೆಯಿಂದ ಬಿತ್ತನೆ ಬೀಜ:
ಗದ್ದೆ ಬೇಸಾಯದ ಬಿತ್ತನೆಗೆ ಬೇಕಾದ ಭತ್ತದ ತಳಿಗಳ ಬೀಜಗಳನ್ನು ಕೃಷಿ ಇಲಾಖೆ ಸಹಾಯಧನದ ರೂಪದಲ್ಲಿ ನೀಡುತ್ತಿದೆ.ಪುತ್ತೂರು ಕೃಷಿ ಇಲಾಖೆಯಿಂದ ಈಗಾಗಲೇ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ.ಪುತ್ತೂರು ಕಸಬ, ಉಪ್ಪಿನಂಗಡಿ ಹಾಗೂ ಕಡಬ ಹೋಬಳಿಯಲ್ಲಿ Mo-4 ತಳಿ, ಸಹ್ಯಾದ್ರಿ ಬ್ರಹ್ಮ ಹಾಗೂ ಜ್ಯೋತಿ ತಳಿಯ ಬಿತ್ತನೆ ಬೀಜವನ್ನು ಸಹಾಯಧನದಲ್ಲಿ ನೀಡಲಾಗಿದ್ದು ಜ್ಯೋತಿ ತಳಿಯ ಬೀಜ 5 ಕ್ವಿಂಟಾಲ್ ದಾಸ್ತಾನು ಇದೆ.ಅಪೇಕ್ಷಿತ ಸಾಮಾನ್ಯ ವರ್ಗದ ರೈತರು ತಮ್ಮ ಭತ್ತದ ಕೃಷಿ ಜಮೀನಿನ ಆರ್.ಟಿ.ಸಿ./ ಪಹಣಿ, ಆಧಾರ್ ಜೆರಾಕ್ಸ್ ಮತ್ತು ಬ್ಯಾಂಕ್ ಪಾಸ್ ಪುಸ್ತಕ ಪ್ರತಿಯನ್ನು ನೀಡಿ ಪಡೆಯಬಹುದು. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗದ ರೈತರು ತಮ್ಮ ಭತ್ತದ ಕೃಷಿ ಜಮೀನಿನ ಆರ್.ಟಿ.ಸಿ./ ಪಹಣಿ, ಆಧಾರ್ ಜೆರಾಕ್ಸ್, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಿ ಸಹಾಯಧನದಲ್ಲಿ ಭತ್ತದ ಬಿತ್ತನೆ ಬೀಜವನ್ನು ಪಡೆದುಕೊಳ್ಳಬಹುದು ಎಂದು ಇಲಾಖಾ ಪ್ರಕಟಣೆ ತಿಳಿಸಿದೆ.
372 ಹೆಕ್ಟೇರ್ನಲ್ಲಿ ಭತ್ತ ಬೆಳೆಯ ಗುರಿ
ದ.ಕ.ಜಿಲ್ಲೆಯ ಹಲವೆಡೆ ಕೃಷಿ ಬೆಳೆಯಾಗಿ ಭತ್ತವನ್ನು ಬೆಳೆಯಲಾಗುತ್ತಿದೆ.ರಾಜ್ಯದಲ್ಲಿ ಜೂನ್ ಅಂತ್ಯದ ವೇಳೆ 46.29 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆಯಬೇಕಿದ್ದು ಶೇ.26ರಷ್ಟು ಮಾತ್ರವೇ ಬಿತ್ತನೆ ಕಾರ್ಯ ನಡೆದಿದೆ ಎಂದು ಅಂದಾಜಿಸಲಾಗಿದೆ.ಪುತ್ತೂರು ಕಡಬ ತಾಲೂಕಿನಲ್ಲಿ ಕಳೆದ ಬಾರಿ 412 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು.ಆದರೆ ಒಟ್ಟು 372 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಲಾಗಿದೆ. ಅದರಂತೆ ಈ ಬಾರಿ 372 ಹೆಕ್ಟೇರ್ ಪ್ರದೇಶದ ಗುರಿ ಹೊಂದಲಾಗಿದ್ದು ಜುಲೈ ಆರಂಭದವರೆಗೆ 144 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ಬೇಸಾಯವಾಗಿದೆ.ಇನ್ನೂ ನಿರೀಕ್ಷಿತ ಗುರಿ ಮುಟ್ಟಿಲ್ಲ ಎಂದು ಕೃಷಿ ಇಲಾಖೆ ತಿಳಿಸಿದೆ.
ಕೃಷಿ ಇಲಾಖೆಯಿಂದ ಸಹಾಯಧನ
ಬಿತ್ತನೆ ಬೀಜಕ್ಕೆ ಕೃಷಿ ಇಲಾಖೆಯಿಂದ ಸಹಾಯಧನ ಲಭ್ಯವಿದೆ.ಭತ್ತದ ತಳಿಯ ಬೀಜದ 25 ಕೆಜಿಯ ಚೀಲವೊಂದಕ್ಕೆ ರೂ.1200 ದರವಿದ್ದು ರೈತರಿಗೆ ಸಹಾಯಧನ ರೂಪದಲ್ಲಿ ದೊರೆಯುತ್ತದೆ.ಇದರಲ್ಲಿ ಸಾಮಾನ್ಯ ರೈತರು ರೂ.1000 ಪಾವತಿಸಬೇಕಾಗಿದ್ದು ರೂ.200 ಸಹಾಯಧನ ಪಡೆಯಬಹುದು.
ಪ.ಜಾತಿ, ಪ.ಪಂಗಡದ ರೈತರು ಪ.ಜಾತಿ ಮತ್ತು ಪ.ಪಂಗಡದ ರೈತರು ರೂ.900 ಪಾವತಿಸಬೇಕಾಗಿದ್ದು ರೂ.300 ಸಹಾಯಧನ ಪಡೆದು ಬಿತ್ತನೆ ಬೀಜ ಪಡೆದುಕೊಳ್ಳಬಹುದು.










