ʼಕಂಬಳದಿಂದ ದಸರಾಕ್ಕೆ ಧಕ್ಕೆ ಇಲ್ಲ: ಕಂಬಳ ಡಿಸ್ಕೋ ಡ್ಯಾನ್ಸ್ ಅಲ್ಲ – ಶಾಸಕ ಅಶೋಕ್ ರೈ ಸ್ಪಷ್ಟಣೆ

0

ಪುತ್ತೂರು: ದಸರಾದಲ್ಲಿ ಕಂಬಳ ಆಯೋಜಿಸುವ ಮೂಲಕ ಮೈಸೂರಿನ ಜನತೆಗೂ ಕಂಬಳದ ಸೊಬಗನ್ನು ವೀಕ್ಷಿಸುವ ಅವಕಾಶ ನೀಡಲಾಗುತ್ತಿದೆ. ದಸರಾದ ಸಾಂಸ್ಕೃತಿಕ ಆಚರಣೆಗೆ ವಿರುದ್ಧವಾಗಿ ಆಯೋಜಿಸುವುದಿಲ್ಲ. ಸಾಂಸ್ಕೃತಿಕ ಆಚರಣೆಗೆ ತದ್ವಿರುದ್ದ ಕ್ರೀಡೆಯಾಗಿದ್ದರೆ ತಿಳಿಸಿ. ಕಂಬಳವು ಸಾಂಸ್ಕೃತಿಕತೆಯ ಜೊತೆಗೆ ಹೋಗುವ ಕ್ರೀಡೆ. ಹೀಗಾಗಿ ದಸರಾದ ಜೊತೆಗೆ ಕಂಬಳ ಆಯೋಜಿಸುವುದರಿಂದ ದಸಾರಕ್ಕೂ ವಿಶೇಷ ಮೆರುಗು ಬರಲಿದೆ. ಹೊರತು ಸವಾಲಾಗಿ ಮಾಡುವುದಲ್ಲ. ವಿರೋಧವಾಗಿಯೂ ಮಾಡುವುದಿಲ್ಲ. ದಸರಾದ ಆಚಾರ-ವಿಚಾರಗಳನ್ನು ಕೆಣಕುವ ಕೆಲಸ ಮಾಡುವುದಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.


ಈ ಬಾರಿ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಯ ಬಗ್ಗೆ ಮೈಸೂರಿನಲ್ಲಿ ವಿರೋಧ ಬಂದಿರುವ ಬಗ್ಗೆ ಜು.13ರಂದು ಶಾಸಕರ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ಕಂಬಳವನ್ನು ಯಾಕೆ ವಿರೋಧಿಸುತ್ತಿದ್ದಾರೆ ಗೊತ್ತಿಲ್ಲ. ಕಂಬಳವನ್ನು ರಾಜಕೀಯವನ್ನಾಗಿ ಮಾಡಬಾರದು. ಕಂಬಳವು ಸಾಂಸ್ಕೃತಿಕ ಕ್ರೀಡೆ. ದಸಾರದ ಜೊತೆಗೆ ಆಯೋಜಿಸುವುದರಿಂದ ಏನು ತೊಂದರೆ ಆಗುವುದಿಲ್ಲ. ದಸರಾ ಹಿಂದಿನಿಂದ ಬಂದ ಸಂಸ್ಕೃತಿ. ನಾನು ಮೂವತ್ತು ವರ್ಷದಿಂದ ದಸರಾ ನೋಡುತ್ತಿದ್ದೇನೆ. ಹಿಂದಿನ ದಸರಾಕ್ಕೂ ಈಗಿನ ದಸರಾಕ್ಕೂ ವ್ಯತ್ಯಾಸಗಳಿವೆ. ಈಗ ಯುವ ದಸರಾ, ಲೇಸರ್ ಶೋ, ಏರ್ ಶೋಗಳು ದಸರಾದಲ್ಲಿ ನಡೆಯುತ್ತಿದೆ. ಏರ್ ಶೋಗೂ ದಸರಾಗೂ ಏನು ಸಂಬಂಧವಿದೆ. ಆದರೆ ಕಂಬಳವು ಪುರಾತನ ರಾಜಮನೆತನದಿಂದ ಬಂದಿರುವ ಕಲೆ. ಹೀಗಾಗಿ ಕಂಬಳಕ್ಕೂ ದಸರಾ ಮತ್ತು ಕಂಬಳಕ್ಕೆ ಸಂಬಂಧವಿದೆ. ಕಂಬಳ ಯಾವುದೋ ಡಿಸ್ಕೋ ಡ್ಯಾನ್ಸ್ ಅಲ್ಲ. ದಸರಾದಲ್ಲಿ ಉತ್ತರ ಭಾರತದ ನೃತ್ಯಗಳು ನಡೆಯುತ್ತಿದೆ ಎಂದು ಹೇಳಿದರು.


ದಸರಾವನ್ನು ದಕ್ಷಿಣ ಕನ್ನಡ, ಉಡುಪಿಯಲ್ಲಿ ಆಚರಿಸಲಾಗುತ್ತಿದೆ. ಮೈಸೂರಿನ ಕರಗ ನೃತ್ಯ ಇಲ್ಲಿಯೂ ನಡೆಯುತ್ತಿದೆ. ಕಂಬಳ ದಸರಾಕ್ಕೆ ತದ್ವಿರುದ್ದವಾಗಿದ್ದರೆ ವಿರೋಧಿಸುವುದು ಸರಿ. ಕಂಬಳ ಮನುಷ್ಯ ಮತ್ತು ಪ್ರಾಣಿಗಳಿಗಿರುವ ಸಂಬಂಧವಿರುವ ವಿಶೇಷವಾದ ಕ್ರೀಡೆ. ನಾವು ಹಣಕ್ಕಾಗಿ ಮಾಡುವುದಲ್ಲ. ನಮ್ಮ ಸಮಯ ನೀಡಿ ಕೈಯಿದ ನಾವು ಖರ್ಚು ಮಾಡಿ ಮಾಡುವುದು. ಇದರಿಂದ ಅಲ್ಲಿನ ಪ್ರವಾಸೋದ್ಯಮ ವೃದ್ದಿಯಾಗುತ್ತದೆ. ಈಗಾಗಲೇ 7೦೦ ರೂಂಗಳು ಬುಕ್ ಆಗಿದೆ. ದಸರಾ ಮಾಡುವುದು ಅರಮನೆಯ ಒಂದು ಭಾಗವಾಗಿದೆ. ಕಂಬಳ ಆಯೋಜನೆಗೆ ಸರಕಾರವೇ ಒಪ್ಪಿಗೆ ಕೊಟ್ಟಿದೆ. ವಿಶ್ವದಿಂದ ಮೈಸೂರು ದಸರಾಕ್ಕೆ ಜನರು ಬರುತ್ತಿದ್ದು ಅವರಿಗೂ ಕಂಬಳವನ್ನು ವೀಕ್ಷಣೆಗೆ ಅವಕಾಶ ನೀಡಲಾಗುತ್ತಿದೆ ಎಂದರು.


ರಾಜಕೀಯವಾಗಿ ಕೆಣಕುತ್ತಿದ್ದಾರೆ:
ನಾನು 20 ವರ್ಷ ಮೈಸೂರಿನಲ್ಲಿದ್ದವನು. ಮೈಸೂರಿನ ಜನತೆ ಉತ್ತಮವಾಗಿದ್ದಾರೆ. ಅಲ್ಲಿನ ಜನತೆ ಕೆಣಕುವ ಕೆಲಸ ಮಾಡುವುದಿಲ್ಲ. ರಾಜಕೀಯವಾಗಿ ಕೆಣಕುವ ಕೆಲಸ ಮಾಡುತ್ತಿದ್ದಾರೆ. ಮೈಸೂರಿನ ಜನರ ವಿರೋಧ ಇಲ್ಲ. ಬೆಂಗಳೂರು ಕಂಬಳ ನಡೆಸುವಾಗಲೂ ಪ್ರಾರಂಭದಲ್ಲಿ ವಿರೋಧವಿತ್ತು. ನಂತರ ಎಲ್ಲಾ ಸಂಘಟನೆಗಳು ಸೇರಿಕೊಂಡಿದ್ದಾರೆ. ಮೈಸೂರಿನಿಂದಲೂ ಬಹಳಷ್ಟು ಸಂಘಟನೆಗಳಿಂದ ಕರೆ ಬಂದಿದೆ. ದಕ್ಷಿಣ ಕನ್ನಡಕ್ಕೆ ಬಂದು ಕಂಬಳ ವೀಕ್ಷಣೆಗೆ ಅವಕಾಶವಿಲ್ಲ. ಹೀಗಾಗಿ ಮೈಸೂರಿನಲ್ಲಿ ಆಯೋಜನೆ ಮಾಡುವಂತೆ ಬಿಜೆಪಿ ಪಕ್ಷದವರೂ ಕರೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಂಬಳವನ್ನು 25ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.


ಪೂರ್ತಿ ಖರ್ಚು ಸರಕಾರ:
ವಿಶ್ವ ವ್ಯಾಪಿಯಲ್ಲಿ ನಡೆಸುವ ದಸರಾವನ್ನು ಉತ್ತಮ ರೀತಿಯಲ್ಲಿ ಮಾಡಲು ಮುಖ್ಯಮಂತ್ರಿಗಳಿಗೇ ಹುಮ್ಮಸ್ಸು ಇದೆ. ಹೈಪವರ್ ಸಮಿತಿ ಸಭೆಯಲ್ಲಿಯೂ ಉಸ್ತುವಾರಿ ಮಂತ್ರಿಗಳು ಕಂಬಳವನ್ನು ಉತ್ತಮ ರೀತಿಯಲ್ಲಿ ನಡೆಸುವ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಕಂಬಳದ ಸಿದ್ದತೆಗಳು ಪ್ರಾರಂಭಗೊಂಡಿದೆ. ಮೈಸೂರು ದಸರಾ ನಡೆಸುವುದು ಸರಕಾರ. ಆಚಾರ ವಿಚಾರ ಪಾಲಿಸುವುದು ಅರಮನೆ. ದಸರಾಕ್ಕೆ ಸರಕಾರ ರೂ.45ಕೋಟಿ ಖರ್ಚು ಮಾಡುತ್ತಿದೆ. ಕಂಬಳದ ಖರ್ಚನ್ನು ಸರಕಾರ ಭರಿಸಲಿದೆ.


ಮಾಸ್ಟರ್ ಪ್ಲ್ಯಾನ್‌ನಂತೆ ಸಿದ್ದತೆ:
ಕರೆ ನಿರ್ಮಾಣ ಈಗಾಗಲೇ ಕೆಲಸ ಪ್ರಾರಂಭಗೊಂಡಿದ್ದು ಸ್ವಚ್ಚತೆ ನಡೆಯುತ್ತಿದೆ. ಮೈಸೂರಿನ ಚಾಮುಂಡೇಶ್ವರಿ ದೇವಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಪ್ರಸಾದ ಹಾಕಿ ಕರೆ ಮುಹೂರ್ತ ನೆರವೇರಲಿದೆ. ಜು.20ರ ನಂತರ ಪೂರ್ಣ ಪ್ರಮಾಣದಲ್ಲಿ ಕರೆ ನಿಮಾಣದ ಕೆಲಸ ನಡೆಯಲಿದೆ. ನಂತರ ಎರಡು ಬಾರಿ ಟ್ರಯಲ್ ನಡೆಯಲಿದೆ. ಇದನ್ನೂ ಸಾರ್ವಜನಿಕರು ವೀಕ್ಷಣೆ ಮಾಡಬಹುದು. ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆ ಆಗದಂತೆ ರಿಂಗ್‌ರೋಡ್ ಬಳಿ ಕಂಬಳ ನಡೆಯಲಿದೆ. ಇದಕ್ಕಾಗಿ ಎಲ್ಲಾ ಮೂಲಭೂತ ವ್ಯವಸ್ಥೆಗನ್ನು ಮಾಡಲಾಗುವುದು. ಸುಮಾರು 15 ಎಕರೆ ಪಾರ್ಕಿಂಗ್, ಸುಮಾರು 20 ಎಕರೆಯಲ್ಲಿ ಕಂಬಳಕ್ಕೆ ಸ್ಥಳ ನಿಗಧಿ ಮಾಡಲಾಗಿದೆ. ಜೊತೆಗೆ ಸ್ಟಾಲ್‌ಗಳು ಇರಲಿದೆ. ಮೂರು ವೇದಿಕೆಗಳ ನಿರ್ಮಾಣ, ಸಾರ್ವಜನಿಕರ ಆಗಮನ, ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ, ಕೋಣಗಳ ವಿಶ್ರಾಂತಿಗೆ ಸ್ಥಳ, ಓಡಿಸಿದ ಕೋಣಗಳನ್ನು ಮತ್ತೆ ಕರೆದುಕೊಂಡು ಹೋಗಲು ಪ್ರತ್ಯೇಕ ಟ್ರ್ಯಾಕ್ ಮೊದಲಾದ ವ್ಯವಸ್ಥೆಗಳನ್ನು ಮಾಸ್ಟರ್ ಪ್ಲ್ಯಾನ್‌ನಂತೆ ಮಾಡಲಾಗುವುದು.‌


ಮೈಸೂರು ಕಂಬಳ ಸಮಿತಿ:
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ನಡೆಯಲಿದೆ. ಸಮಿತಿಯಲ್ಲಿ ನಾನೇ ಅಧ್ಯಕ್ಷನಾಗಿದ್ದು ಕಂಬಳಗಳ ಜಿಲ್ಲಾ ಸಮಿತಿ, ಕೋಣಗಳ ಮ್ಹಾಲಕರು, ಕಂಬಳ ಆಯೋಜಕರನ್ನು ಒಳಗೊಂಡ ಮೈಸೂರು ಕಂಬಳ ಸಮಿತಿ ನಡೆಸಲಾಗುವುದು ಎಂದು ಶಾಸಕರು ತಿಳಿಸಿದರು.

LEAVE A REPLY

Please enter your comment!
Please enter your name here