






ಶಿವಳ್ಳಿ ವಿಭೂಷಣ, ಶಿವಳ್ಳಿಶ್ರೀ, ಉತ್ತಮ ಕೃಷಿಕ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ


ಪುತ್ತೂರು: ಶಿವಳ್ಳಿ ಸಂಪದದ ಮಹಾಸಭೆ ಮತ್ತು ಶಿವಳ್ಳಿ ವಿಭೂಷಣ, ಶಿವಳ್ಳಿಶ್ರೀ, ಉತ್ತಮ ಕೃಷಿಕ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಕೆಮ್ಮಾಯಿ ವಿಷ್ಣು ಮಂಟಪದಲ್ಲಿ ಜು.19ರಂದು ನಡೆಯಿತು. ಸಂಪದದ ತಾಲೂಕು ಅಧ್ಯಕ್ಷರಾಗಿರುವ ಸುಧೀಂದ್ರ ಕುದ್ದಣ್ಣಾಯರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯ ಪ್ರಾರಂಭದಲ್ಲಿ, ಬೆಳಿಗ್ಗೆ ವೇ.ಮೂ. ವಿಶ್ವಮೂರ್ತಿ ಬಡಕ್ಕಿಲ್ಲಾಯರ ನೇತೃತ್ವದಲ್ಲಿ ಐಕ್ಯಮತ್ಯ ಹೋಮ ನಡೆಯಿತು. ಬಳಿಕ, ಮಹಿಳಾ ಸಂಪದದ ಸದಸ್ಯೆಯರಿಂದ ವಿಷ್ಣು ಸಹಸ್ರನಾಮ ಮತ್ತು ಲಕ್ಷ್ಮೀ ಶೊಭಾನೆ ಪಠಣ ನಡೆಯಿತು. ವೇದಮೂರ್ತಿ ವಿಶ್ವಮೂರ್ತಿ ಬಡಕ್ಕಿಲ್ಲಾಯರು, ‘ಬ್ರಾಹ್ಮಣರ ಇತಿಹಾಸ ಮತ್ತು ಪ್ರಸ್ತುತ ಕಾಲಘಟ್ಟದಲ್ಲಿ ಬ್ರಾಹ್ಮಣ ಸಮಾಜ ಎದುರಿಸುತ್ತಿರುವ ಸಮಸ್ಯೆಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.




ಬಳಿಕ, ಶಿವಳ್ಳಿ ಸಂಪದದ ಗೌರವಾಧ್ಯಕ್ಷರಾಗಿರುವ ಯನ್. ಸುಬ್ರಹ್ಮಣ್ಯ ಕೊಳತ್ತಾಯರ ಉಪಸ್ಥಿತಿ ಹಾಗೂ ತಾಲ್ಲೂಕು ಅಧ್ಯಕ್ಷರಾಗಿರುವ ಸುಧೀಂದ್ರ ಕುದ್ದಣ್ಣಾಯರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಸಂಪದದ ಪ್ರಧಾನ ಕಾರ್ಯದರ್ಶಿ ಪಿ. ಲಕ್ಷ್ಮೀನಾರಾಯಣ ಕಡಂಬಳಿತ್ತಾಯರು ಕಳೆದ ಮಹಾಸಭೆಯ ಹಾಗೂ ಗತ ವರ್ಷದ ವರದಿ ಮಂಡಿಸಿ ಅನುಮೋದನೆ ಪಡಕೊಂಡರು.
ಕೋಶಾಧಿಕಾರಿ ರಂಗನಾಥ ಉಂಗ್ರುಪುಳಿತ್ತಾಯರು 2024 ಎಪ್ರಿಲ್ನಿಂದ ಮಾರ್ಚ್ 2026ರವರೆಗಿನ ಸಂಪದದ ಖರ್ಚುವೆಚ್ಚಗಳ ವರದಿಯನ್ನು ಸಭೆಯ ಮುಂದಿಟ್ಟು ಅನುಮೋದನೆ ಪಡೆದುಕೊಂಡರು. ಮಹಿಳಾ ಸಂಪದದ ಕಾರ್ಯದರ್ಶಿ ವೀಣಾ ಕೊಳತ್ತಾಯ ವರದಿ ಮಂಡಿಸಿದರು.
ಮಹಾಸಭೆಯ ವೇದಿಕೆಯಲ್ಲಿ, ಶ್ರೀ.ಎನ್ ಸುಬ್ರಹ್ಮಣ್ಯಂ ಕೊಳತ್ತಾಯ,ಶ್ರೀ ಸುಧೀಂದ್ರ ಕುದ್ದಣ್ಣಾಯ, ಲಕ್ಷ್ಮೀನಾರಾಯಣ ಕಡoಬಳಿತ್ತಾಯ, ರಂಗನಾಥ ಉಂಗ್ರುಪುಳಿತ್ತಾಯ, ದಿವಾಕರ ನಿಡ್ವಣ್ಣಾಯ,ಶ್ರೀಮತಿ ಪ್ರೇಮಲತಾ ರಾವ್ , ಶ್ರೀಮತಿ ವೀಣಾ ಕೊಳತ್ತಾಯ ಹಾಗೂ ಶಿವಳ್ಳಿ ಸಂಪದದ ಪುತ್ತೂರಿನ 9 ವಲಯಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಮಹಾಸಭೆಯ ಬಳಿಕ ಭೋಜನ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಚಿ ಆಶ್ರಿತ್ ಕೃಷ್ಣಪ್ರಾರ್ಥಿಸಿದರು. ನೆಲ್ಯಾಡಿ ವಲಯದ ಕಾರ್ಯದರ್ಶಿ ರವೀಂದ್ರ ಟಿ. ನೀತಿ ಸಂಹಿತೆ ಪಠಿಸಿದರು. ಪಿ. ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಕಾರ್ಯಕ್ರಮ ನಿರ್ವಹಿಸಿ, ನಿರೂಪಣೆ ಮಾಡಿದರು. ಅಧ್ಯಕ್ಷ ಶ್ರೀ ಸುಧೀಂದ್ರ ಕುದ್ದಣ್ಣಾಯ ಸ್ವಾಗತಿಸಿ, ಶ್ರೀ ಸತೀಶ್ ಕೆದಿಲಾಯರು ವಂದಿಸಿದರು.

ಶಿವಳ್ಳಿ ವಿಭೂಷಣ ಮತ್ತು ಶಿವಳ್ಳಿಶ್ರೀ ಪ್ರಶಸ್ತಿ ಪ್ರದಾನ:
ಈ ಮಹಾಸಭೆಯಲ್ಲಿ ಸಮಾಜ ಸೇವೆ , ಶೈಕ್ಷಣಿಕ , ಧಾರ್ಮಿಕ, ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಂಗನಾಥ ಉಂಗ್ರುಪುಳಿತ್ತಾಯ ಮತ್ತು ಗೋಪಾಲಕೃಷ್ಣ ಕುಂಜತ್ತಾಯ ಮೆಣಸಿನಕಾನ ಅವರಿಗೆ ಶಿವಳ್ಳಿ ವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಾಗೂ, ಶಿವಳ್ಳಿಶ್ರೀ ಪ್ರಶಸ್ತಿಯನ್ನು ಯುವ ಉದ್ಯಮಿ ಮತ್ತು ಪ್ರಗತಿಪರ ಕೃಷಿಕ ಶಿವಪ್ರಸಾದ್ ಇಜ್ಜಾವು ಅವರಿಗೆ ಶ್ರೀ ಎನ್ ಸುಬ್ರಹ್ಮಣ್ಯಂ ಕೊಳತ್ತಾಯ ಮತ್ತು ವೇದಿಕೆಯಲ್ಲಿ ಉಪಸ್ಥರಿದ್ದ ಗಣ್ಯರ ಮುಖೇನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೊಳತ್ತಾಯ ಸಹೋದರರ ಪ್ರಾಯೋಜಕತ್ವದ ಉತ್ತಮ ಕೃಷಿಕ ಪ್ರಶಸ್ತಿಯನ್ನು ಅವಿನಾಶ್ ಕೊಡಂಕಿರಿ ಮತ್ತು ಪ್ರಕಾಶ್ ಉಂಗ್ರುಪುಳಿತ್ತಾಯ ಅವರಿಗೆ ಪ್ರದಾನ ಮಾಡಲಾಯಿತು.ಈ ಸಂದರ್ಭದಲ್ಲಿ ಶ್ರೀ ಬಾಲಕೃಷ್ಣ ಕೊಳತ್ತಾಯ,ಶ್ರೀ ಎನ್ ಯದುಕುಮಾರ್ ಕೊಳತ್ತಾಯ,ಶ್ರೀ ಕಿಶೋರ್ ಕೊಳತ್ತಾಯ ,ಶ್ರೀ ಶ್ರೀಕಾಂತ ಕೊಳತ್ತಾಯ ಮತ್ತು ಕೊಳತ್ತಾಯ ಕುಟುಂಬಸ್ಥರು ಉಪಸ್ಥಿತರಿದ್ದರು.
ಶಿವಳ್ಳಿ ಸಮಾಜದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ:
2025 ಮತ್ತು 2026ನೇ ಸಾಲಿನ ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿ, ಡಿಪ್ಲೊಮಾ, ಇಂಜಿನಿಯರಿoಗ್, ಸಿ.ಎ., ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಶಿವಳ್ಳಿ ಸಮಾಜದ ಸುಮಾರು 75 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ಪ್ರತಿಭಾ ಪುರಸ್ಕಾರದ ಪ್ರಾಯೋಜಕರಾದ, ಶಿವಳ್ಳಿ ಸಂಪದ ಬೊಳುವಾರು ವಲಯದ ನಿಯೋಜಿತ ಅಧ್ಯಕ್ಷ ಅನಂತಕೃಷ್ಣ ಪಡ್ಡಿಲ್ಲಾಯ ಮತ್ತು ವೇದಿಕೆಯಲ್ಲಿದ್ದ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿ ಸಾಧಕರನ್ನು ಅಭಿನಂದಿಸಿದರು. ಶ್ರೀಮತಿ ಮಾಲತಿ ನಿಡ್ವಣ್ಣಾಯ ಪ್ರತಿಭಾವಂತರ ಪಟ್ಟಿಯನ್ನು ವಾಚಿಸಿದರು.










