







ಕಾವು: ಭಾರತ ಸರ್ಕಾರದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ನೇತೃತ್ವದಲ್ಲಿ ಕಾವು ಕಮಲಡ್ಕದ ನಿರಂಜನ ರಾವ್‌ರವರ ಗದ್ದೆಯಲ್ಲಿ ಕೆಸರ್ದ ಗೊಬ್ಬುಲು-2026 ಕಾರ್ಯಕ್ರಮವು ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ಸಂಭ್ರಮಿಸಿತು.


ಗ್ರಾಮೀಣ ಜನರಿಗೆ ಮನೋರಂಜನೆ-ಗಂಗಾಧರ ಗೌಡ
ಕೆಸರ್ದ ಗೊಬ್ಬುಲು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಗಂಗಾಧರ ಗೌಡ ಚಾಕೋಟೆಯವರು ಮಾತನಾಡಿ ತುಡರ್ ಯುವಕ ಮಂಡಲದವರು ಆಯೋಜನೆ ಮಾಡಿದ ಕೆಸರು ಗದ್ದೆ ಸ್ಪರ್ಧಾಕೂಟವು ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ, ಮಹಿಳೆಯರಿಗೆ, ಯುವಕರಿಗೆ ತುಂಬಾ ಮನೋರಂಜನೆಯನ್ನು ನೀಡಿದೆ, ಸದಾ ಸಮಾಜಮುಖಿ ಕಾರ್ಯವನ್ನು ಮಾಡುವ ತುಡರ್ ಸಂಘಟನೆ ಕೆಸರ್ದ ಗೊಬ್ಬುಲು ಕಾರ್ಯಕ್ರಮದ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದೆ, ಇಂತಹ ಸಂಘಟನೆಗೆ ನಮ್ಮ ಸಹಕಾರ ಸದಾ ಇದೆ ಎಂದು ಹೇಳಿದರು.



ಮುಖ್ಯ ಅತಿಥಿಯಾಗಿದ್ದ ಪುತ್ತೂರು ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ ಎಂ.ರವರು ಮಾತನಾಡಿ ಕೆಸರು ಗದ್ದೆ ಕಾರ್ಯಕ್ರಮ ಒಳ್ಳೆಯ ಕಾರ್ಯಕ್ರಮವಾಗಿದೆ. ಮೊದಲೆಲ್ಲಾ ಗದ್ದೆ ನಮ್ಮ ಜೀವನದ ಭಾಗವಾಗಿತ್ತು ಆದರೆ ಇತ್ತೀಚಿನ ಆಧುನಿಕ ಯುಗದಲ್ಲಿ ಗದ್ದೆಯು ಪಾಠವಾಗಿದೆ, ಇಂತಹ ಕಾರ್ಯಕ್ರಮದ ಮೂಲಕವಾದರೂ ನಮ್ಮ ಮಕ್ಕಳಿಗೆ ಕೆಸರು ಗದ್ದೆಯ ಪರಿಚಯ ಮಾಡಿಸಲು ಸಾಧ್ಯವಾಗುತ್ತದೆ, ಆ ನಿಟ್ಟಿನಲ್ಲಿ ತುಡರ್ ಸಂಘಟನೆ ಗ್ರಾಮೀಣ ಭಾಗದಲ್ಲಿ ಆಯೋಜನೆ ಮಾಡಿರುವ ಈ ಕಾರ್ಯಕ್ರಮ ಎಲ್ಲರಿಗೂ ಖುಷಿಯ ವಿಚಾರವಾಗಿದ ಎಂದು ಹೇಳಿದರು. ಐತ್ತಪ್ಪ ಗೌಡ ಮಂಜಲ್ತಡ್ಕರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶರತ್ ಕುಮಾರ್ ರೈಯವರು ತೆಂಗಿನಕಾಯಿ ಒಡೆಯುವ ಮೂಲಕ ಸ್ಪರ್ಧಾಕೂಟಕ್ಕೆ ಚಾಲನೆ ನೀಡಿದರು. ತುಡರ್ ಯುವಕ ಮಂಡಲದ ಉಪಾಧ್ಯಕ್ಷ ಅಜಿತ್ ಕುಲಾಲ್‌ರವರು ಸಭಾಧ್ಯಕ್ಷತೆ ವಹಿಸಿದ್ದರು. ತುಡರ್ ತುಡರ್ ಭಜನಾ ಸಂಘದ ಕಾರ್ಯದರ್ಶಿ ಜಗದೀಶ ನಾಯ್ಕ ಆಚಾರಿಮೂಲೆ ಪ್ರಾರ್ಥಿಸಿದರು. ಭಜನಾ ಸಂಘದ ಮಾಜಿ ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆಯವರು ಸ್ವಾಗತಿಸಿ, ಯುವಕ ಮಂಡಲದ ಗೌರವಾಧ್ಯಕ್ಷ ರಾಮಣ್ಣ ನಾಯ್ಕ ವಂದಿಸಿದರು. ಮಾಜಿ ಅಧ್ಯಕ್ಷ ಸುನೀಲ್ ನಿಧಿಮುಂಡ ಕಾರ್ಯಕ್ರಮ ನಿರ್ವಹಿಸಿದರು.

ಸಮಾರೋಪ:
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಸ್ಪರ್ಧಾಕೂಟದ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಯುವ ಉದ್ಯಮಿ ಅಬ್ದುಲ್ ಅಜೀಜ್ ಸಿ.ಹೆಚ್ ಮತ್ತು ಪುತ್ತೂರು ಚಿತ್ತಾರ ಡಿಜಿಟಲ್ಸ್‌ನ ಹರೀಶ್ ಕಾವು ಹೊಸಮನೆಯವರು ವಿಜೇತರಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು. ಹಗ್ಗಜಗ್ಗಾಟ ಸ್ಪರ್ಧೆಯ ತೀರ್ಪುಗಾರರಾಗಿದ್ದ ದೈಹಿಕ ಶಿಕ್ಷಕ ನಂದ ಕುಮಾರ್, ಕಾರ್ಯಕ್ರಮ ಉದ್ಘೋಷಣೆಯ ಮೂಲಕ ಮನರಂಜನೆ ನೀಡಿದ ಕಿರಣ್ ಕೆರೆಮಾರು, ಅಖಿಲೇಶ್ ಕಾಮತ್ ಕಾವುರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರುಗಳು ವಿವಿಧ ಜವಾಬ್ದಾಋಇ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಬೆಳಿಗ್ಗೆ ಚಹಾ-ತಿಂಡಿ, ಮಧ್ಯಾಹ್ನ ಗಂಜಿ ಊಟ, ಪಾಯಸ, ಸಂಜೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಮೈನವಿರೇಳಿಸಿದ ಪುರುಷರ ಹಗ್ಗಜಗ್ಗಾಟ ಸ್ಪರ್ಧೆ:
ಕೆಸರ್ದ ಗೊಬ್ಬುಲು ಕಾರ್ಯಕ್ರಮದಲ್ಲಿ ಪ್ರಮುಖ ಸ್ಪರ್ಧೆಯಾಗಿದ್ದ ಪುರುಷರ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕರಾವಳಿಯ ಪ್ರತಿಷ್ಠಿತ ದಿಗ್ಗಜ ತಂಡಗಳ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಸೆಮಿಫೈನಲ್‌ನಲ್ಲಿ ಫ್ರೆಂಡ್ಸ್ ಪೊಳಲಿ ಮತ್ತು ಪಣೋಲಿಬೈಲು ತಂಡಗಳ ನಡುವೆ ಮತ್ತು ಫೈನಲ್‌ನಲ್ಲಿ ಪಣೋಲಿಬೈಲು ಮತ್ತು ಪಂಚಲಿಂಗೇಶ್ವರ ಫ್ರೆಂಡ್ಸ್ ಕಾವು ತಂಡಗಳ ನಡುವೆ ನಡೆದ ಜಿದ್ದಾಜಿದಿನ ಸ್ಪರ್ಧೆ ನೆರೆದಿದ್ದ ಪ್ರೇಕ್ಷಕರ ಮೈನವಿರೇಳಿಸುವಂತಿತ್ತು. ಅಂತಿಮ ಹಣಾಹಣಿಯಲ್ಲಿ ಪಂಚಲಿಂಗೇಶ್ವರ ಫ್ರೆಂಡ್ಸ್ ಕಾವು-ಪ್ರಥಮ, ಪಣೋಲಿಬೈಲು ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಪ್ರಥಮ ಸ್ಥಾನಕ್ಕೆ ರೂ.5,555/- ಮತ್ತು ದ್ವಿತೀಯಾ ಸ್ಥಾನಕ್ಕೆ ರೂ.3,333/- ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.
ವಿವಿಧ ವಿಭಾಗದಲ್ಲಿ ಹಲವು ಸ್ಪರ್ಧೆಗಳು:
ಕೆಸರ್ದ ಗೊಬ್ಬಲು ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಕಿರಿ ಮತ್ತು ಹಿರಿಯ, ಕಾಲೇಜು ವಿಭಾಗ, ಯುವಕರ ಮತ್ತು ಯುವತಿಯರ ವಿಭಾಗ, ಮಹಿಳೆಯರ ಪುತ್ತು ಪುರುಷರ ವಿಭಾಗದಲ್ಲಿ ಹಲವು ಸ್ಪರ್ಧೆಗಳನ್ನು ನಡೆಸಲಾಯಿತು. ನಿಧಿ ಶೋಧ, ಮಡಿಕೆ ಒಡೆಯುವುದು, ಕೆಸರು ಗದ್ದೆ ಓಟ, ಹಿಮ್ಮಖ ಓಟ, ಲಿಂಬೆ ಚಮಚ ಓಟ, ಹಾಳೆ ಎಳೆಯುವ ಸ್ಪರ್ಧೆ, ಸಂಗೀತ ಕುರ್ಚಿ, ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಿತು.










