ಅಮೃತದಂತಹ ಹಾಲು, ಆರೋಗ್ಯದ ದಾರಿದೀಪ – ʼವಿಶ್ವ  ಸ್ತನ್ಯಪಾನ ಸಪ್ತಾಹʼ (ಅ.1 – 7)

0

ಮಗುವಿನ ಮೊದಲ ಉಸಿರಿನಿಂದ ಹಿಡಿದು ಅದರ ಭವಿಷ್ಯದ ಆರೋಗ್ಯದವರೆಗೆ ತಾಯಿಯ ಹಾಲಿನ ಪಾತ್ರ ಅನನ್ಯ. ತಾಯಿಯ ಹಾಲು ಕೇವಲ ಮಗುವಿನ ಹಸಿವನ್ನು ನೀಗಿಸುವ ಆಹಾರವಲ್ಲ. ಅದು ಜೀವಕೋಟಿಯ ಪ್ರಕೃತಿಯ ಅತ್ಯಂತ ಶ್ರೇಷ್ಠ ಕೊಡುಗೆ. ನೈಸರ್ಗಿಕ ತಾಯ್ತನದ ಸಂಕೇತ ಹಾಗೂ ಮಗುವಿನ ಮೊದಲ ನೈಸರ್ಗಿಕ ಲಸಿಕೆ.

ತಾಯಿಯ ಹಾಲಿನ ಮಹತ್ವ, ಪ್ರಾಮುಖ್ಯತೆ ಮತ್ತು ಸಮಾಜದಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 1 ರಿಂದ 7 ರವರೆಗೆ ‘ವಿಶ್ವ ಸ್ತನ್ಯಪಾನ ಸಪ್ತಾಹ’ವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.

ಸ್ತನ್ಯಪಾನ ಸಪ್ತಾಹದ ಹಿನ್ನೆಲೆ ಮತ್ತು ವೈಚಾರಿಕ ಕಲ್ಪನೆ
1990 ರಲ್ಲಿ ‘ವಿಶ್ವ ಆರೋಗ್ಯ ಸಂಸ್ಥೆ’ ಮತ್ತು ‘ಯೂನಿಸೆಫ್’ ಜಂಟಿಯಾಗಿ ಕೈಗೊಂಡ ‘ಇನೊಸೆಂಟ್ ಪ್ರತಿಜ್ಞೆ’ ಯ ನೆನಪಿಗಾಗಿ 1992 ರಿಂದ ಈ ಆಚರಣೆ ಚಾಲ್ತಿಯಲ್ಲಿದೆ. ಇಂದಿನ ಆಧುನಿಕ ಯುಗದಲ್ಲಿ, ಜಾಹೀರಾತುಗಳ ಪ್ರಭಾವದಿಂದಾಗಿ ಸಂಸ್ಕರಿಸಿದ ‘ಫಾರ್ಮುಲಾ ಮಿಲ್ಕ್’ ಬಳಕೆ ಹೆಚ್ಚಾಗುತ್ತಿದೆ. ಪ್ರಕೃತಿ ನೀಡಿರುವ ಈ ಅಮೃತ ಸಮಾನ ಕೊಡುಗೆಯನ್ನು ಕಡೆಗಣಿಸಿ, ಕೃತಕ ಪೌಷ್ಟಿಕಾಂಶಗಳ ಮೊರೆ ಹೋಗುವುದು ಮಗುವಿನ ಮತ್ತು ತಾಯಿಯ ಆರೋಗ್ಯದ ದೃಷ್ಟಿಯಿಂದ ಕಳವಳಕಾರಿ ಸಂಗತಿ. ಈ ಮನೋಭಾವವನ್ನು ಬದಲಾಯಿಸಿ, ಸ್ತನ್ಯಪಾನವು ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕು ಎಂಬುದನ್ನು ಸಾರುವುದೇ ಈ ದಿನದ ವೈಚಾರಿಕ ಉದ್ದೇಶ.

ಮಗುವಿಗೆ ಸ್ತನ್ಯಪಾನದಿಂದಾಗುವ ಪೌಷ್ಟಿಕ ಹಾಗೂ ಆರೋಗ್ಯ ಲಾಭಗಳು
ಮಗು ಹುಟ್ಟಿದ ತಕ್ಷಣ ಸಿಗುವ ಹಳದಿ ಬಣ್ಣದ ದಪ್ಪನೆಯ ಹಾಲು (ಕೋಲಸ್ಟ್ರಮ್) ಮಗುವಿನ ಮೊದಲ ಲಸಿಕೆಯಂತೆ ಕೆಲಸ ಮಾಡುತ್ತದೆ. ಇದು ಮಗುವಿನಲ್ಲಿ ರೋಗನಿರೋಧಕ ಶಕ್ತಿಯನ್ನು ಅಪಾರವಾಗಿ ಹೆಚ್ಚಿಸುತ್ತದೆ.


ಪರಿಪೂರ್ಣ ಪೌಷ್ಟಿಕಾಂಶ
ಮೊದಲ 6 ತಿಂಗಳು ಮಗುವಿಗೆ ನೀರು ಸೇರಿದಂತೆ ಯಾವುದೇ ಇತರ ಆಹಾರದ ಅಗತ್ಯವಿರುವುದಿಲ್ಲ. ತಾಯಿಯ ಹಾಲಿನಲ್ಲಿ ಮಗುವಿನ ಬೆಳವಣಿಗೆಗೆ ಬೇಕಾದ ನೀರು, ಪ್ರೋಟೀನ್, ಕೊಬ್ಬು, ಜೀವಸತ್ವಗಳು ಮತ್ತು ಹಾರ್ಮೋನ್‌ಗಳು ಸರಿಯಾದ ಪ್ರಮಾಣದಲ್ಲಿರುತ್ತವೆ.


ಸಂಕ್ರಾಮಿಕ ರೋಗಗಳಿಂದ ರಕ್ಷಣೆ
ಸ್ತನ್ಯಪಾನ ಮಾಡುವ ಮಕ್ಕಳಿಗೆ ಭೇದಿ (Diarrhea), ಶ್ವಾಸಕೋಶದ ಸೋಂಕು (Pneumonia), ಕಿವಿ ಸೋಂಕು ಹಾಗೂ ಅಲರ್ಜಿಗಳಂತಹ ತೊಂದರೆಗಳು ಬರುವ ಸಾಧ್ಯತೆ ತೀರ ಕಡಿಮೆ.


ಮಾನಸಿಕ ಮತ್ತು ಬೌದ್ಧಿಕ ವಿಕಾಸ
ತಾಯಿಯ ಹಾಲಿನಲ್ಲಿರುವ DHA ಅಂಶವು ಮಗುವಿನ ಮೆದುಳಿನ ಶೀಘ್ರ ಬೆಳವಣಿಗೆಗೆ ನೆರವಾಗುತ್ತದೆ. ಜೊತೆಗೆ, ಸ್ತನ್ಯಪಾನದ ಸಮಯದಲ್ಲಿ ತಾಯಿ-ಮಗುವಿನ ನಡುವೆ ಏರ್ಪಡುವ ದೈಹಿಕ ಸಂಪರ್ಕವು ಮಗುವಿಗೆ ಭದ್ರತಾ ಭಾವನೆ ನೀಡಿ, ಭಾವನಾತ್ಮಕ ಬೆಳವಣಿಗೆಗೆ ನಾಂದಿಯಾಗುತ್ತದೆ. ತಾಯಿಗೂ ಇದೆ ಅಷ್ಟೇ ಉತ್ತಮ ಆರೋಗ್ಯ ಲಾಭ. ಸ್ತನ್ಯಪಾನವು ಕೇವಲ ಮಗುವಿಗೆ ಮಾತ್ರವಲ್ಲ, ಹೆತ್ತ ತಾಯಿಯ ಆರೋಗ್ಯಕ್ಕೂ ಅತ್ಯಂತ ಲಾಭದಾಯಕ.


ಬೇಗ ಚೇತರಿಕೆ
ಹೆರಿಗೆಯ ನಂತರ ಗರ್ಭಾಶಯವು ತನ್ನ ಹಳೆಯ ಗಾತ್ರಕ್ಕೆ ಹಿಂತಿರುಗಲು ಸ್ತನ್ಯಪಾನ ನೆರವಾಗುತ್ತದೆ.


ಕ್ಯಾನ್ಸರ್ ತಡೆಗಟ್ಟುವಿಕೆ
ನಿಯಮಿತವಾಗಿ ಸ್ತನ್ಯಪಾನ ಮಾಡಿಸುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ (Breast Cancer) ಮತ್ತು ಅಂಡಾಶಯದ ಕ್ಯಾನ್ಸರ್ (Ovarian Cancer) ಬರುವ ಅಪಾಯ ಗಮನಾರ್ಹವಾಗಿ ಕಡಿಮೆಯಾಗುತ್ತದೆ.


ಮಾನಸಿಕ ಸಂತುಲಿತ ಶಕ್ತಿ
ಸ್ತನ್ಯಪಾನದ ಸಮಯದಲ್ಲಿ ‘ಆಕ್ಸಿಟೋಸಿನ್’ ಎಂಬ ಹಾರ್ಮೋನ್ ಬಿಡುಗಡೆಯಾಗಿ ತಾಯಿಯ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ‘ಹೆರಿಗೆಯ ನಂತರದ ಖಿನ್ನತೆ’ (Postpartum Depression) ತಡೆಯಲು ನೆರವಾಗುತ್ತದೆ.


ನೈಸರ್ಗಿಕ ತೂಕ ನಿಯಂತ್ರಣ
ಹೆರಿಗೆಯ ನಂತರ ಹೆಚ್ಚುವರಿ ಕ್ಯಾಲೊರಿಗಳನ್ನು ಕರಗಿಸಿ ತಾಯಿಯ ತೂಕ ಸಮತೋಲನಕ್ಕೆ ಬರಲು ಇದು ಸಹಕಾರಿ.

ಸಮಾಜ ಮತ್ತು ಕುಟುಂಬದ ಜವಾಬ್ದಾರಿ
ಸ್ತನಪಾನ ಎನ್ನುವುದು ಕೇವಲ ಒಬ್ಬ ತಾಯಿಯ ಕರ್ತವ್ಯವಲ್ಲ; ಅದಕ್ಕೆ ಇಡೀ ಕುಟುಂಬ ಮತ್ತು ಸಮಾಜದ ಬೆಂಬಲ ಅಗತ್ಯ. ಮಗುವಿಗೆ ಹಾಲುಣಿಸುವ ತಾಯಿಗೆ ಸೂಕ್ತ ವಿಶ್ರಾಂತಿ, ಪೌಷ್ಟಿಕ ಆಹಾರ ಹಾಗೂ ಮಾನಸಿಕ ನೆಮ್ಮದಿ ನೀಡುವ ಜವಾಬ್ದಾರಿ ಕುಟುಂಬದ ಮೇಲಿದೆ. ಉದ್ಯೋಗಸ್ಥ ತಾಯಂದಿರಿಗೆ ಕೆಲಸದ ಸ್ಥಳಗಳಲ್ಲಿ ಸ್ತನ್ಯಪಾನಕ್ಕೆ ಸೂಕ್ತ ವಾತಾವರಣ, ಹೆರಿಗೆ ರಜೆ ಮತ್ತು ವಿರಾಮದ ಸಮಯ ಕಲ್ಪಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ತಾಯಂದಿರು ಮುಕ್ತವಾಗಿ ಹಾಲುಣಿಸಲು ‘ಸ್ತನ್ಯಪಾನ ಕೊಠಡಿ’ (Feeding Rooms) ವ್ಯವಸ್ಥೆ ಇರಬೇಕು. ಪ್ರಕೃತಿದತ್ತವಾದ ಸ್ತನಪಾನವು ಮಗುವಿಗೆ ನಾವು ನೀಡಬಹುದಾದ ಅತ್ಯಂತ ದೊಡ್ಡ ಉಡುಗೊರೆ. “ಆರೋಗ್ಯಕರ ನಾಳೆಗಾಗಿ – ಇಂದೇ ಸ್ತನಪಾನವನ್ನು ಪ್ರೋತ್ಸಾಹಿಸೋಣ.” ಮೂಢನಂಬಿಕೆಗಳನ್ನು ಬದಿಗೊತ್ತಿ, ಪ್ರತಿಯೊಂದು ಮಗುವಿಗೂ ತಾಯಿಯ ಹಾಲಿನ ಅಮೃತ ಸಿಗುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ.

LEAVE A REPLY

Please enter your comment!
Please enter your name here