ಪಾಣಾಜೆ ರಸ್ತೆ ದುರವಸ್ಥೆ : ತಕ್ಷಣ ದುರಸ್ತಿಗೆ ಗ್ರಾಮಸ್ಥರ ಆಗ್ರಹ

0

ನಿಡ್ಪಳ್ಳಿ: ಪಾಣಾಜೆ ಗ್ರಾಮದ ಪ್ರಮುಖ ರಸ್ತೆಯೊಂದು ಕಳೆದ 3 ವರ್ಷಗಳಿಂದ ದುರಸ್ತಿಯಿಲ್ಲದೆ ಹದಗೆಟ್ಟಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆರ್ಲಪದವಿನಿಂದ ಕೋಟೆ, ಭರಣ್ಯ, ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಸೂರಂಬೈಲು ಶಾಲೆ, ಗಿಳಿಯಾಲು, ಭರಣ್ಯ ದೇವಸ್ಥಾನ ಮತ್ತು ಇತಿಹಾಸ ಪ್ರಸಿದ್ಧ ಜಾಂಬ್ರಿ ಗುಹಾ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯು ನೂರಾರು ಮನೆಗಳಿಗೆ ಸಂಪರ್ಕ ಮಾರ್ಗವಾಗಿದೆ. ಕಳೆದ ಮೂರು ವರ್ಷಗಳಿಂದ ರಸ್ತೆಯ ಮೇಲೆ ಹಾಕಿದ್ದ ಡಾಂಬರ್ ಅಲ್ಲಲ್ಲಿ ಕಿತ್ತು ಹೋಗಿ ದೊಡ್ಡ ಗಾತ್ರದ ಗುಂಡಿಗಳು ಬಿದ್ದಿವೆ. ಮಳೆಗಾಲದಲ್ಲಿ ಕೆಸರು ನೀರು ನಿಂತು ಗುಂಡಿಗಳು ಕಾಣದೇ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರತಿ ವರ್ಷ ಯುವಕರು ಸ್ವಯಂಪ್ರೇರಿತವಾಗಿ ಗುಂಡಿ ಮುಚ್ಚುವ ಶ್ರಮದಾನ ಮಾಡುತ್ತಿದ್ದರೂ ಪಂಚಾಯತ್ ಆಡಳಿತ ಮಂಡಳಿಯು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಣಮಂಗಲ ದೇವಸ್ಥಾನ ಮತ್ತು ಜಾಂಬ್ರಿ ಗುಹೆಯಂತಹ ಪ್ರಮುಖ ಸ್ಥಳಗಳಿಗೆ ಹೋಗುವ ರಸ್ತೆಯಾಗಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಜನರ ಜೀವಕ್ಕೆ ಅಪಾಯವಾಗುವ ಮೊದಲು ತಕ್ಷಣ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ನಿತ್ಯ ಸಂಚಾರಿ ಪ್ರದೀಪ್ ಪಾಣಾಜೆ ಸೇರಿದಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here