ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಗೆ‘ರೈತ ರತ್ನ ಪ್ರಶಸ್ತಿ’ ಪ್ರದಾನ

0

ಪುತ್ತೂರು : ಪುತ್ತೂರಿನ ಗ್ರಾಮಜನ್ಯ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಗೆ (Gramajanya FPC), ಕನ್ನಡ ಪ್ರಭ – ಎಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಪ್ರತಿಷ್ಠಿತ ‘ರೈತ ರತ್ನ ಪ್ರಶಸ್ತಿ 2026’ ಪ್ರದಾನ ಮಾಡಲಾಯಿತು. ಕೃಷಿ, ಜೇನು ಕೃಷಿ, ಗ್ರಾಮೀಣ ಉದ್ಯೋಗ ಸೃಷ್ಟಿ, ರೈತರ ಸಬಲೀಕರಣ ಹಾಗೂ ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಅಭಿವೃದ್ಧಿಯಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.


ಬೆಂಗಳೂರಿನ ಹೋಟೆಲ್ ಕಾನ್ರಾಡ್ ನಲ್ಲಿ ಆ.2ರಂದು ನಡೆದ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ‘ರೈತ ರತ್ನ ಪ್ರಶಸ್ತಿ – ಸೀಸನ್ 6’ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗ್ರಾಮಜನ್ಯ ಸಂಸ್ಥೆಯ ನಿರ್ದೇಶಕರಾದ ಶಂಕರ ನಾರಾಯಣ ಖಂಡಿಗೆ, ಬಲರಾಮ ಕೆ. ಹಾಗೂ ಹರ್ಷ ಕುಮಾರ್, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಮಪ್ರತೀಕ್ ಕರಿಯಾಲ್ ಪ್ರಶಸ್ತಿ ಸ್ವೀಕರಿಸಿದರು.


ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಕ್ಷೇತ್ರ ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಡಾ| ಕರಿವೃಷಭ ದೇಶಿಕೇಂದ್ರ ಶಿವಯೋಗಿಗಳ ಮಹಾಸ್ವಾಮೀಜಿ (ಅಜ್ಜಯ್ಯ) ದಿವ್ಯ ಸಾನಿಧ್ಯ ವಹಿಸಿದ್ದರು. ಕರ್ನಾಟಕದ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ| ಜಿ. ಪರಮೇಶ್ವರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿಶೇಷ ಅತಿಥಿಗಳಾಗಿ ನಟಿ ಅದಿತಿ ಪ್ರಭುದೇವ, ದುಬೈನ ಉದ್ಯಮಿ ನೀಲೇಶ್ ಎಂ. ಬಿ. ಹಾಗೂ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಸಮೂಹ ಸಂಪಾದಕೀಯ ನಿರ್ದೇಶಕ ರವಿ ಹೆಗಡೆ ಉಪಸ್ಥಿತರಿದ್ದರು.


2020ರಲ್ಲಿ ಮುಂಡೂರಿನಲ್ಲಿ ಸ್ಥಾಪನೆಯಾದ ಗ್ರಾಮಜನ್ಯ ಎಫ್‌ಪಿಸಿ, ರೈತ ಉತ್ಪಾದಕರ ಸಂಸ್ಥೆಯಾಗಿ ಜೇನು ಕೃಷಿ, ಜೇನು ಸಂಸ್ಕರಣೆ, ಗುಣಮಟ್ಟದ ಜೇನು ಉತ್ಪನ್ನಗಳ ತಯಾರಿಕೆ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಉದ್ಯೋಗ, ರೈತರಿಗೆ ಮಾರುಕಟ್ಟೆ ಸಂಪರ್ಕ ಹಾಗೂ ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಅಭಿವೃದ್ಧಿಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಸಂಸ್ಥೆಯು ಸಾವಿರಕ್ಕೂ ಹೆಚ್ಚು ರೈತ ಷೇರುದಾರರನ್ನು ಒಗ್ಗೂಡಿಸಿ, ಅತ್ಯಾಧುನಿಕ 10 ಮೆಟ್ರಿಕ್ ಟನ್ ಸಾಮರ್ಥ್ಯದ ಜೇನು ಸಂಸ್ಕರಣಾ ಘಟಕ, ಆಹಾರ ಪರೀಕ್ಷಾ ಪ್ರಯೋಗಾಲಯ, ಹಾಗೂ ಶೀತಲ ಸಂಗ್ರಹಣಾ ಸೌಲಭ್ಯಗಳನ್ನು ನಿರ್ಮಿಸಿ ರೈತರಿಗೆ ಸೇವೆ ಸಲ್ಲಿಸುತ್ತಿದೆ.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಂಸ್ಥೆಯ ಪ್ರತಿನಿಧಿಗಳು, “ಇದು ಗ್ರಾಮಜನ್ಯದ ಸಾಧನೆ ಮಾತ್ರವಲ್ಲ; ನಮ್ಮೊಂದಿಗೆ ಕೈಜೋಡಿಸಿರುವ ಪ್ರತಿಯೊಬ್ಬ ರೈತ ಷೇರುದಾರ, ಜೇನು ಸಾಕಣೆದಾರ, ಮಹಿಳಾ ಸ್ವಸಹಾಯ ಗುಂಪು, ಸಿಬ್ಬಂದಿ, ನಿರ್ದೇಶಕರು ಹಾಗೂ ಬೆಂಬಲಿಗರ ಪರಿಶ್ರಮಕ್ಕೆ ಸಂದ ಗೌರವವಾಗಿದೆ. ಈ ಪ್ರಶಸ್ತಿ ರೈತರ ಅಭಿವೃದ್ಧಿಗಾಗಿ ಇನ್ನಷ್ಟು ಸಮರ್ಪಣೆಯಿಂದ ಕಾರ್ಯನಿರ್ವಹಿಸಲು ನಮಗೆ ಹೊಸ ಉತ್ಸಾಹ ನೀಡಿದೆ” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here