






ಉಪ್ಪಿನಂಗಡಿ: ಹೆದ್ದಾರಿಯಿಂದ ಉಪ್ಪಿನಂಗಡಿ ಪೇಟೆಯನ್ನು ಸಂಪರ್ಕಿಸುವ ಮುಖ್ಯ ರಸ್ತೆಯ ದುಸ್ಥಿತಿಯಿಂದಾಗಿ ವಾಹನ ಸವಾರರು ಮತ್ತು ಸ್ಥಳೀಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.


ರಸ್ತೆಯನ್ನು ಕಾಂಕ್ರೀಟೀಕರಣ ಮಾಡುವ ಹೆಸರಿನಲ್ಲಿ ಒಂದು ಬದಿಯನ್ನು ಸಂಪೂರ್ಣವಾಗಿ ಅಗೆದಿರುವುದರಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ಉಳಿದಿರುವ ಇನ್ನೊಂದು ಬದಿಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಉಂಟಾಗಿದ್ದು, ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆಗೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುತ್ತಿದ್ದು, ಶಾಲಾ ಮಕ್ಕಳು, ಆಸ್ಪತ್ರೆಗೆ ಹೋಗುವ ರೋಗಿಗಳು ಸೇರಿದಂತೆ ಎಲ್ಲರೂ ಪರದಾಡುತ್ತಿದ್ದಾರೆ.



ಈ ರಸ್ತೆಯ ಕಾಮಗಾರಿ ನಡೆಸುತ್ತಿರುವ ಹೆದ್ದಾರಿ ಇಲಾಖೆಯ ಗುತ್ತಿಗೆದಾರರ ಬಳಿ ಸಾಕಷ್ಟು ಮಿಷನರಿ ಮತ್ತು ಕೆಲಸಗಾರರು ಇಲ್ಲ ಎಂಬುದು ಸ್ಥಳೀಯರ ಆರೋಪ. “ಕೆಲಸಕ್ಕೆ ಜನ ಇಲ್ಲ, ಮಿಷನರಿ ಇಲ್ಲ” ಎಂದು ಕಾರಣ ನೀಡುತ್ತಾ ತಿಂಗಳುಗಳಿಂದ ಕಾಮಗಾರಿಯನ್ನು ನಿಧಾನವಾಗಿ ಮಾಡುತ್ತಿದ್ದಾರೆ ಎಂದು ಸಂಘದ ಪದಾಧಿಕಾರಿಗಳು ದೂರಿದ್ದಾರೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಕಾಮಗಾರಿಯನ್ನು ಚುರುಕುಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಾಗಿಸದಿದ್ದರೆ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ರಸ್ತೆ ಸರಿಯಾಗದೇ ಇದ್ದರೆ ಯಾವುದೇ ಅಹಿತಕರ ಘಟನೆ ನಡೆದರೂ ಅದಕ್ಕೆ ಸಂಪೂರ್ಣ ಜವಾಬ್ದಾರಿ ಸಂಬಂಧಿಸಿದ ಇಲಾಖೆ ಮತ್ತು ಗುತ್ತಿಗೆದಾರರದ್ದಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ. ನಿಯೋಗದಲ್ಲಿ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಯುನಿಕ್ ಹಿರಿಯ ಉದ್ಯಮಿ ಯು ರಾಮ, ಸದಸ್ಯರುಗಳಾದ ಮನ್ಸೂರ್, ಅನುಷ್, ಜಾಪರ್, ನಿತ್ಯಾನಂದ ಕೆಣ ಉಪಸ್ಥಿತರಿದ್ದರು.










