






ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಿಂದ ಕವಲೊಡೆಯುವ ಹಳೆಗೇಟು- ಮರ್ಧಾಳ ರಾಜ್ಯ ಹೆದ್ದಾರಿಗೆ ಹಳೆಗೇಟು ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದು, ಸ್ಥಳಕ್ಕಾಗಮಿಸಿ ಕಾಮಗಾರಿ ವೀಕ್ಷಿಸಿದ ಶಾಸಕ ಅಶೋಕ್ ಕುಮಾರ್ ರೈಯವರು ಕಾಮಗಾರಿಯ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಸೂಕ್ತ ನಿರ್ದೇಶನ ನೀಡಿದರು.



ಈಗಾಗಲೇ ಇಲ್ಲಿ ಕಾಂಕ್ರೀಟ್ ಕೆಲಸ ಆರಂಭಿಸಲಾಗಿದ್ದು, ಅಲ್ಲಿ ಬೃಹತ್ ತೋಡೊಂದಕ್ಕೆ ಹಾಕಲಾಗಿರುವ ಮೋರಿ ಹಾಗೂ ತಡೆಗೋಡೆ ಕುಸಿಯುವ ಹಂತದಲ್ಲಿದ್ದರೂ ಚತುಷ್ಪಥ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರು ಅದನ್ನು ಸರಿಪಡಿಸದೇ ಅದರ ಮೇಲೆಯೇ ಕಾಂಕ್ರೀಟ್ ಕಾಮಗಾರಿ ನಡೆಸಲು ಸಿದ್ಧತೆ ನಡೆಸಿದ್ದರು. ಈ ಬಗ್ಗೆ ಆತಂಕ ವ್ಯಕ್ತಪಡಿಸಿ ಸಾರ್ವಜನಿಕರು ಶಾಸಕರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆ.೧೧ರಂದು ಸ್ಥಳಕ್ಕಾಗಮಿಸಿದ ಶಾಸಕ ಅಶೋಕ್ ಕುಮಾರ್ ರೈ, ದೂರವಾಣಿ ಮೂಲಕ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರನ್ನು ಸಂಪರ್ಕಿಸಿ, ಇಲ್ಲಿ ಮೋರಿ ಹಾಗೂ ತಡೆಗೋಡೆ ನಿರ್ಮಿಸಿದ ಬಳಿಕ ಕಾಂಕ್ರೀಟ್ ಕಾಮಗಾರಿ ನಡೆಸಬೇಕು ಎಂದರಲ್ಲದೆ, ಪ್ರಯಾಣಿಕರ ಹಾಗೂ ವಾಹನಗಳ ಸುರಕ್ಷತೆಯ ದೃಷ್ಟಿಗಾಗಿ ಬೇಕಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಸೂಚಿಸಿದರು.



ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಇಲ್ಲಿ ವಾಹನಗಳಿಗೆ ಅಪಾಯವುಂಟಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರಿಂದ ದೂರು ಬಂದಿತ್ತು. ಹಾಗಾಗಿ ನಾನು ಬಂದು ಸ್ಥಳ ವೀಕ್ಷಣೆ ನಡೆಸಿದ್ದು, ಶಿಥಿಲಗೊಂಡ ಈ ಮೋರಿಯ ಮೇಲೆ ರಸ್ತೆ ನಿರ್ಮಿಸಿದರೆ ಅದು ಕುಸಿಯುವ ಭೀತಿ ಇದೆ. ಅಲ್ಲದೇ ಈ ರಸ್ತೆ ಒಂದು ಕಡೆ ಬಾಗಿದೆ. ಆದ್ದರಿಂದ ಈ ತೋಡಿಗೆ ಹೊಸ ಮೋರಿ ಹಾಗೂ ತಡೆಗೋಡೆಯನ್ನು ನಿರ್ಮಿಸಿದ ಬಳಿಕ ಅದರ ಮೇಲೆ ಕಾಂಕ್ರೀಟ್ ಮಾಡಲು ಹಾಗೂ ಕಾಮಗಾರಿಯನ್ನು ಶೀಘ್ರ ಮುಗಿಸಲು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ತಿಳಿಸಿದ್ದೇನೆ. ಅದಕ್ಕವರು ಎಂಜಿನಿಯರ್ಗಳಿಗೆ ತಿಳಿಸಿ ಅಲ್ಲಿಗೆ ಅಗತ್ಯವಿರುವ ಕಾಮಗಾರಿಗಳನ್ನು ನಡೆಸುತ್ತೇನೆ ಎಂದು ತಿಳಿಸಿದ್ದಾರೆ. ಇನ್ನು ಉಪ್ಪಿನಂಗಡಿಯ ನೇತ್ರಾವತಿ ಸೇತುವೆಯಿಂದ ಜಂಕ್ಷನ್ ತನಕದ ರಸ್ತೆಯ ಚತುಷ್ಪಥ ಕಾಮಗಾರಿಗಾಗಿ ಈಗಾಗಲೇ ಮೂರು ಕೋ.ರೂ. ಅನುದಾನ ಬಿಡುಗಡೆಗೊಂಡಿದೆ. ಉಪ್ಪಿನಂಗಡಿ ಅಂಡರ್ಪಾಸ್ನಿಂದ ಉಪ್ಪಿನಂಗಡಿ ಜಂಕ್ಷನ್ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಈಗ ಹೆದ್ದಾರಿ ಪ್ರಾಧಿಕಾರದವರು ಕಾಂಕ್ರೀಟ್ ಕಾಮಗಾರಿ ನಡೆಸುತ್ತಿದ್ದು, ಅಲ್ಲಿ ಚತುಷ್ಪಥ ರಸ್ತೆಗೆ ಬೇಕಾಗುವ ಜಾಗವನ್ನಿಡಲೂ ತಿಳಿಸಿದ್ದೇನೆ. ಇಲ್ಲದಿದ್ದರೆ ಮುಂದಕ್ಕೆ ನೇರವಾಗಿ ಚತುಷ್ಪಥ ರಸ್ತೆಯನ್ನು ಆ ರಸ್ತೆಗೆ ಸಂಪರ್ಕ ಕೊಡಲು ಕಷ್ಟವಾಗಬಹುದು. ಆದ್ದರಿಂದ ಮುಂದಕ್ಕೆ ಇಲ್ಲಿ ನಿರ್ಮಾಣವಾಗುವ ಚತುಷ್ಪಥ ರಸ್ತೆಯನ್ನು ಗಮನದಲ್ಲಿಟ್ಟುಕೊಂಡು ಕಾಮಗಾರಿ ನಡೆಸುವಂತೆ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಬಿಜೆಪಿಯವರ ಕರ್ಮವನ್ನು ನಾವು ಸರಿಮಾಡುವುದು:
ವಿಟ್ಲದಲ್ಲಿ ರಸ್ತೆಯೊಂದು ಗುಂಡಿ ಬಿದ್ದಿರುವುದಕ್ಕೆ ಆ ಗುಂಡಿಗಳ ಹಾಗೂ ಶಾಸಕರ ಪೋಟೋ ಹಾಕಿಕೊಂಡು ಬಿಜೆಪಿಯವರು ಕೆರೆ- ದಡ' ಎಂದು ಟ್ರೋಲ್ ಮಾಡುತ್ತಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಗಮನಕ್ಕೆ ತಂದಾಗ ಉತ್ತರಿಸಿದ ಅಶೋಕ್ ಕುಮಾರ್ ರೈಯವರು, ಕರ್ನಾಟಕದಲ್ಲಿ ತುಂಬಾ ಕಡೆ ರಸ್ತೆ ಹಾಳಾಗಿದೆ. ಇದಕ್ಕಿಂತ ಮೊದಲು ಬಿಜೆಪಿ ಅಧಿಕಾರದಲ್ಲಿರುವಾಗ ಅವರು ಯಾಕೆ ಅಂತಹ ರಸ್ತೆಯನ್ನು ಸರಿ ಮಾಡಲಿಲ್ಲ. ಉದಾಹರಣೆಗೆ ಈಗ ಪುತ್ತೂರು- ಉಪ್ಪಿನಂಗಡಿ ರಸ್ತೆಯನ್ನೇ ನೋಡಿ. ಅವರು ಅಧಿಕಾರದಲ್ಲಿರುವಾಗ ಹೇಗಿತ್ತು? ಈಗ ಹೇಗಾಗಿದೆ ಎಂದು.ಕೆರೆ- ದಡ’ ಎಂಬುದು ಅವರ ಕರ್ಮ. ಬಿಜೆಪಿಯವರು ಬಿಟ್ಟು ಹೋದ ಕರ್ಮವನ್ನು ನಾವೀಗ ಸರಿ ಮಾಡುತ್ತಿದ್ದೇವೆ. ಗ್ರಾಮಾಂತರ ಪ್ರದೇಶದಲ್ಲಿ ಅದೆಷ್ಟೋ ರಸ್ತೆಗಳು ಅಭಿವೃದ್ಧಿಗೆ ಬಾಕಿ ಇದೆ. ಅದನ್ನೆಲ್ಲಾ ದುರಸ್ತಿ ಮಾಡಲು ಹೋದರೆ ಐದು ಸಾವಿರ ಕೋಟಿ ಬೇಕಾಗಬಹುದು. ಇದನ್ನೆಲ್ಲಾ ಮೂರು- ಐದು ವರ್ಷದಲ್ಲಿ ಮಾಡಲು ಸಾಧ್ಯವಿಲ್ಲ. ಪ್ರಮುಖ ರಸ್ತೆಗಳಿಗೆ ಆದ್ಯತೆ ನೀಡಿ ರಸ್ತೆ ದುರಸ್ತಿ ಕೆಲಸ ನಡೆಯುತ್ತಿದೆ. ಈಗಾಗಲೇ ಜಿ.ಪಂ. ರಸ್ತೆಗಳ ದುರಸ್ತಿಗೆ 15 ಕೋ. ರೂ. ಅನುದಾನ ಇಡಲಾಗಿದೆ. ಮಳೆಗಾಲ ಹೋದ ಕೂಡಲೇ ಅದರ ದುರಸ್ತಿ ಕೆಲಸಗಳು ನಡೆಯಲಿವೆ. ಈವರೆಗೆ ನಾವು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಮಾತ್ರ ಆದ್ಯತೆ ನೀಡಿ ಅನುದಾನ ನೀಡಿದ್ದು. ರಸ್ತೆ ಅಭಿವೃದ್ಧಿಗೆಂದು ಹೆಚ್ಚಿನ 100 ಕೋ. ರೂ. ಅನುದಾನ ಬರಲಿದ್ದು, ಅದರಲ್ಲಿ ಡಾಮರು ಕಾಮಗಾರಿಗಳನ್ನು ನಡೆಸಲಾಗುವುದು ಎಂದರು.
ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಆರೋಪ:
ಚತುಷ್ಪಥ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರು ಕೆಲವೊಂದು ಕಡೆ ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿದ್ದಾರೆ. ಕೆಲವು ಕಡೆ ಅವರು ನಿರ್ಮಿಸಿದ ಚರಂಡಿಯಲ್ಲಿ ನೀರು ಹರಿದು ಹೋಗುತ್ತಲೇ ಇಲ್ಲ ನಾಲ್ಕೈದು ಉದಾಹರಣೆ ಸಹಿತ ಸಾರ್ವಜನಿಕರೋರ್ವರು ಆರೋಪಿಸಿದಾಗ ಉತ್ತರಿಸಿದ ಶಾಸಕರು, ಅವರ ಮೇಲೆ ಇವರು ಗೂಬೆ ಕೂರಿಸುವುದು. ಇವರ ಮೇಲೆ ಅವರು ಗೂಬೆ ಕೂರಿಸಿವುದು ರಾಜಕೀಯದವರ ಅಭ್ಯಾಸ. ಆದರೆ ನಾನು ಹಾಗೆ ಮಾಡಲು ಹೋಗುವುದಿಲ್ಲ. ಬೇಕಿದ್ದರೆ ಹೆದ್ದಾರಿ ಕಾಮಗಾರಿಯು ಕೇಂದ್ರ ಸರಕಾರದ್ದು ಎಂದು ರಾಜಕೀಯ ಮಾಡಬಹುದಿತ್ತು. ನನಗೆ ಅದು ಬೇಡ. ನನಗೆ ಬೇಕಾಗಿರುವುದು ಪುತ್ತೂರು ಕ್ಷೇತ್ರದ ಅಭಿವೃದ್ಧಿ ಮಾತ್ರ. ಅವೈಜ್ಞಾನಿಕ ಕಾಮಗಾರಿಗಳನ್ನು ಅವರಿಗೆ ತಿಳಿಸಿ ಅದನ್ನು ಸರಿಪಡಿಸುವುದು ಮಾತ್ರ ನಮ್ಮ ಕೆಲಸ. ಉಪ್ಪಿನಂಗಡಿ ಶಾಲೆ ಬಳಿಯ ಚರಂಡಿಯಲ್ಲೂ ನೀರು ಹೋಗದೇ ಸಮಸ್ಯೆಯಿದೆ ಎಂಬ ಬಗ್ಗೆ ಗಮನಕ್ಕೆ ಬಂದಾಗ ಅಲ್ಲಿಗೆ ಎಸಿಯವರನ್ನು ಕಳುಹಿಸಿ ಪರಿಶೀಲನೆ ನಡೆಸಲು ತಿಳಿಸಿದ್ದೇನೆ. ಕೆಲವು ಕಡೆ ಇಂತಹ ದೂರು ಬಂದಾಗ ಸ್ಪಂದಿಸಿದ್ದೇನೆ. ಇನ್ನು ಮುಂದೆಯೂ ಅವೈಜ್ಞಾನಿಕ ಕಾಮಗಾರಿಗಳು ನಡೆಯುತ್ತಿದ್ದರೆ ಅದನ್ನು ನನ್ನ ಗಮನಕ್ಕೆ ತನ್ನಿ. ಅವರಿಗೆ ಹೇಳಿ ಸರಿಪಡಿಸೋಣ ಎಂದರು.
ಈ ಸಂದರ್ಭ ಚತುಷ್ಪಥ ಹೆದ್ದಾರಿ ಕಾಮಗಾರಿ ಸಂಸ್ಥೆಯ ಇಂಜಿನಿಯರ್ ರಾಜು, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೌಸೀಫ್ ಯು.ಟಿ., ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕಾಂಗ್ರೆಸ್ ಮುಖಂಡರಾದ ನಝೀರ್ ಮಠ, ಆದಂ ಕೊಪ್ಪಳ, ಗ್ರಾ.ಪಂ. ಮಾಜಿ ಸದಸ್ಯ ಅಬ್ದುಲ್ ರಶೀದ್, ಸ್ಥಳೀಯರಾದ ಫೈಝಲ್ ಯು.ಟಿ., ಝಕಾರಿಯಾ, ಸಿರಾಜ್ ಮತ್ತಿತರರು ಉಪಸ್ಥಿತರಿದ್ದರು.










