ಸಂಗಮ ಕ್ಷೇತ್ರದಲ್ಲಿ ಆಟಿ ಅಮಾವಾಸ್ಯೆಯ ತೀರ್ಥಸ್ನಾನ – ಗತಿಸಿದ ಹಿರಿಯರಿಗೆ ಪಿಂಡ ಪ್ರದಾನ

0

ಉಪ್ಪಿನಂಗಡಿ: ಆಟಿ (ಆಷಾಢ) ಅಮಾವಾಸ್ಯೆಯ ದಿನವಾದ ಬುಧವಾರದಂದು ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯಲ್ಲಿ ನೂರಾರು ಭಕ್ತಾದಿಗಳಿಂದ ತೀರ್ಥ ಸ್ನಾನ ಹಾಗೂ ಗತಿಸಿದ ತಮ್ಮ ಬಂದುಗಳಿಗೆ ಸದ್ಗತಿ ಬಯಸಿ ತಿಲಹೋಮಾದಿ ಪಿಂಡ ಪ್ರದಾನ ಕಾರ್ಯಕ್ರಮಗಳು ನಡೆದವು.


ದಕ್ಷಿಣಕಾಶಿ ಎಂದೇ ಪ್ರಸಿದ್ದವಾಗಿರುವ ನೇತ್ರಾವತಿ ಮತ್ತು ಕುಮಾರಧಾರಾ ನದಿ ಸಂಗಮ ಕ್ಷೇತ್ರದಲ್ಲಿರುವ ಇಲ್ಲಿನ ದೇವಾಲಯಕ್ಕೆ ಬುಧವಾರ ಬೆಳಗ್ಗೆಯಿಂದಲೇ ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸಿದ ನೂರಾರು ಭಕ್ತಾದಿಗಳು ಪುರೋಹಿತರ ಮುಖೇನ ತಮ್ಮ ತಮ್ಮ ಗತಿಸಿದ ತಮ್ಮ ಬಂಧುಗಳಿಗೆ ತಿಲಹೋಮ, ಪಿಂಡ ಪ್ರದಾನವನ್ನು ನೆರೆವೇರಿಸಿದರೆ, ಇನ್ನು ಹಲವರು ನವ ಧಾನ್ಯಗಳನ್ನು ಸಂಗಮ ತಟದಲ್ಲಿ ಗಂಗಾ ಮಾತೆಗೆ ಸಮರ್ಪಿಸಿ ಗತಿಸಿದ ಹಿರಿಯರಿಗೆ ಸದ್ಗತಿ ಬಯಸಿದರು ಹಾಗೂ ಹಲವರು ಆಟಿ ಅಮಾವಾಸ್ಯೆಯ ತೀರ್ಥ ಸ್ನಾನಗೈದರು.
ಶ್ರೀ ದೇವಾಲಯದಲ್ಲಿ ಬೆಳಗ್ಗೆ ಬಂದ ಭಕ್ತರಿಗೆ ಆಟಿ ಅಮಾವಾಸ್ಯೆಯ ದಿನದಂದು ಸೇವಿಸುವ ಹಾಲೆ ಮರದ ಕೆತ್ತೆಯ ಕಷಾಯವನ್ನು ವಿತರಿಸಲಾಯಿತು.


ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್‌, ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ಕೃಷ್ಣಪ್ರಸಾದ್, ದಿವಾಕರ, ಪದ್ಮನಾಭ, ಸುಧಾಕರ ಶೆಟ್ಟಿ ಗಾಂಧಿಪಾರ್ಕ್ ಸಕ್ರೀಯವಾಗಿದ್ದುಕೊಂಡು ವಿವಿಧ ಕಾರ್ಯಗಳನ್ನು ನಿರ್ವಹಿಸಿದರು. ಗೃಹರಕ್ಷಕ ದಳದವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡದವರು ದೋಣಿ ಸೇರಿದಂತೆ ಅಗತ್ಯ ಪರಿಕರಗಳೊಂದಿಗೆ ಸನ್ನದ್ಧರಾಗಿದ್ದುಕೊಂಡು ನದಿಗೆ ಬರುವ ಭಕ್ತರ ಸುರಕ್ಷತೆಯನ್ನು ನೋಡಿಕೊಂಡರು.

LEAVE A REPLY

Please enter your comment!
Please enter your name here